Breaking News

ಡಾ.ಸಂತೋಷ್ ಗುರೂಜಿ ವಿರೋಧಿ ಮನಸ್ಕರ ಸಮ್ಮಿಲನಕ್ಕೆ ಸಿದ್ದತೆ !

ಮಂಗಳೂರು: ಬಂಟರ ಕುಲಗುರು ಎಂಬ ಅಂಕಿತವನ್ನು ಅಂಟಿಸಿಕೊಳ್ಳಲು ಹೊರಟಿದ್ದಾರೆ ಎಂಬ ಅಪವಾದ ಹೊಂದಿರುವ ಬಾರ್ಕೂರಿನಲ್ಲಿ ಪ್ರತಿಷ್ಠಾಪಿತರಾಗುತ್ತಿರುವ ಡಾ.ಸಂತೋಷ ಗುರೂಜಿಯ ನಡೆಯ ವಿರುದ್ಧ ಬಂಟರ ಒಂದು ಬಳಗ ಪ್ರತಿಭಟನೆಯ ಸಿದ್ಧತೆ ನಡೆಸಿದ್ದು ಜೂನ್ 3ರಂದು ಸಮಾನ ಮನಸ್ಕರ ಸಮ್ಮಿಲನ ಎಂಬ ಹೆಸರಿನ ಕಾರ್ಯಕ್ರಮವನ್ನು ಬ್ರಹ್ಮಾವರ ಬಂಟರ ಭವನದಲ್ಲಿ ಆಯೋಜಿಸಿದೆ.
ಐತಿಹಾಸಿಕ ಬಾರ್ಕೂರು ಕೇಂದ್ರಿಕೃತ ಗುರಿಯನ್ನೇ ಗುರುವಾಗಿಸಿಕೊಂಡಿರುವ ಅಳಿಯ ಕಟ್ಟು ಪರಂಪರೆಯ ಬಂಟ ಸಮುದಾಯವನ್ನು ಹಣ ಗಳಿಕೆಯ ಉದ್ದೇಶದ ಸ್ವಾಮಿಯೋರ್ವರು ಕರಾವಳಿಯ ಧಾರ್ಮಿಕ ಮತ್ತು ಸಂಸ್ಕಾರ ನಡಾವಳಿಗಳನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನೆ ನಡೆಸಲು ಹೊರಟಿರುವವರು ಆಪಾದಿಸಿದ್ದಾರೆ.
ವಿಶ್ವ ಬಂಟರ ಯಾನೆ ನಾಡವರ ಜನಜಾಗೃತಿ ಬಳಗ ಬೆಂಗಳೂರು ಎಂಬ ಹೆಸರಿನಲ್ಲಿ ಪ್ರಕಟನೆ ಹೊರಡಿಸಲಾಗಿದ್ದು, ಬೆಂಗಳೂರಿನಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಲೌಕಿಕ ಪ್ರಪಂಚದ ಸುಖಭೋಗಗಳೊಂದಿಗೆ ಬದುಕುತ್ತಿರುವ ವಿವಾದಗ್ರಸ್ಥ ಸ್ವಾಮಿ ತಾನು ಸಮಸ್ತ ಬಂಟ ಸಮುದಾಯದ ಗುರು ಎಂದು ಬಿಂಬಿಸಿ ನಂಬಿಸಲು ಹೊರಟಿದ್ದಾರೆ. ಇವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಸುಳ್ಳು ದೂರಿನ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮತ್ತು ಬಾರ್ಕೂರು ಪುರದೇವ ಪಂಚಲಿಂಗೇಶ್ವರದಲ್ಲಿ ಸತ್ಯಧರ್ಮ ಸಾಬೀತು ಪಡಿಸಲು ಮೊರೆ ಇಡುವ ಮತ್ತು ಸಮಸ್ತರನ್ನ ಜಾಗೃತಿಗೊಳಿಸುವ ಸಾಮಾಜಿಕ ಅಭಿಯಾನವೇ ನಮ್ಮ ನಡೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸ್ವಾಭಿಮಾನದ ಉಳಿವಿಗಾಗಿ ನೀವೆಲ್ಲ ಜೊತೆಯಾಗಿ ಜಾಗೃತಿಯ ಧ್ವನಿಯಾಗಿ ನ್ಯಾಯದ ಪರವಾಗಿ ನಮ್ಮೊಂದಿಗೆ ಬನ್ನಿ ಎಂದು ವಿನಂತಿಯನ್ನೂ ಮಾಡಲಾಗಿದೆ.
ಪ್ರಕಟನೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೆ ಇದು ಡಾ. ಸಂತೋಷ್ ಗುರೂಜಿಯ ವಿರುದ್ಧವೇ ನಡೆಯುತ್ತಿರುವ ಪ್ರತಿಭಟನೆ ಎಂಬುದನ್ನು ಅರ್ಥೈಸಿಕೊಳ್ಳುವುದು ಕಷ್ಟವೇನಲ್ಲ.
ಇತ್ತೀಚೆಗೆ ಬಾರ್ಕೂರಿನಲ್ಲಿ ಸಂತೋಷ ಗುರೂಜಿ ದೈವಗಳನ್ನೆಲ್ಲ ನನಗೆ ಕೊಡಿ ಅವುಗಳ ನಿರ್ವಹಣೆ ನಾನು ಮಾಡುತ್ತೇವೆ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಅದರ ಬಳಿಕ ಬಾರ್ಕೂರು ಆಶ್ರಮಕ್ಕೆ ಪ್ರವೇಶಿಸಿ ಡಾ. ಸಂತೋಷ ಗುರೂಜಿಯ ಮೇಲೆ ದಾಳಿಯ ಪ್ರಯತ್ನವೊಂದು ನಡೆದಿತ್ತು ಎಂದು ಪ್ರಚಾರ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಹಲವರ ವಿರುದ್ಧ ದೂರನ್ನು ಸ್ವಾಮೀಜಿಯ ಅನುಯಾಯಿಗಳು ದಾಖಲಿಸಿದ್ದರು. ಯಾರ ವಿರುದ್ಧ ದೂರು ದಾಖಲಾಗಿದೆಯೋ ಅವರು ಒಟ್ಟಾಗಿ ಜೂ.3ರಂದು ಸ್ವಾಮೀಜಿಯ ವಿರುದ್ಧ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಸಂತೋಷ ಗುರೂಜಿಯನ್ನು ವಿರೋಧಿಸುವವರೆಲ್ಲೂ ನಮ್ಮೊಂದಿಗೆ ಸೇರಿ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಂಟರು ಯಾರನ್ನೂ ಕುಲಗುರವಾಗಿ ಸ್ವೀಕರಿಸಲು ಸಿದ್ಧರಿಲ್ಲ, ಆದರೆ ಆದೇಕೋ ಮುಂಬೈಯ ಕೆಲ ಉದ್ಯಮಿಗಳು ಬಂಟ ಸಮುದಾಯಕ್ಕೆ ಕುಲಗುರು ಸಂಸ್ಥಾಪಿಸುವುದರ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಮಂಗಳೂರಿನ ಆಯ್ದ ಕೆಲವರ ಬೆಂಬಲ ಸಿಕ್ಕಿದಂತಿದೆ.
ಬಂಟರು ಕುಲಗುರುವಾಗಿ ವಜ್ರೇಶ್ವರಿ ನಿತ್ಯಾನಂದ ಸ್ವಾಮಿಯನ್ನು ಒಪ್ಪುವ ಸಾಧ್ಯತೆಗಳಿದ್ದವು. ನಿತ್ಯಾನಂದ ಸ್ವಾಮಿಯನ್ನು ಬಂಟರು ಆರಾಧಿಸುತ್ತ ಬಂದಿದ್ದಾರೆ. ಕುಲಗುರುವಾಗಿಸಿಲ್ಲ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯ ಹಿಂದೆ ಬಂಟರ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಆದರೂ ಒಡಿಯೂರು ಸ್ವಾಮೀಜಿ ಕುಲಗುರುವಾಗುವ ಹಿಂದೆ ಬಿದ್ದಿಲ್ಲ.
ಸಂತೋಷ ಗುರೂಜಿ ಉತ್ತಮ ಮಾತುಗಾರ, ಯಾವುದೇ ವಾದವನು ಗೆಲ್ಲಬಹುದಾಷ್ಟು ಚರ್ಚಾ ನಿಪುಣ ಅವರ ಈ ಗುಣವೇ ಒಂದಿಷ್ಟು ಮಂದಿ ಅವರ ಹಿಂದೆ ಬೀಳುವಂತೆ ಮಾಡಿದೆ. ಇದರ ಅರ್ಥ ಅವರನ್ನು ಕುಲಗುರುವಾಗಿ ಒಪ್ಪಿಕೊಂಡಿದ್ದಾರೆ ಎಂದಾಗುವುದಿಲ್ಲ. ಹಲವರು ಸುಮ್ಮಿದ್ದಾರೆ, ಕೆಲವರು ಮಾತ್ರ ನೇರವಾಗಿಯೇ ವಿರೋಧಿಸುತ್ತಿದ್ದಾರೆ. ಹೀಗೆ ವಿರೋಧಿಸುವವರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ.

Related posts

Leave a Reply