Header Ads
Header Ads
Breaking News

ತವರು ನೆಲಕ್ಕೆ ವಾಪಾಸ್ಸಾದ ಬೈಕ್ ರೈಡರ್ ಹವ್ಯಾಸಿ ಸಚಿನ್ ಶೆಟ್ಟಿ

ಬಂಟ್ವಾಳ: ನೂರಲ್ಲ, ಇನ್ನೂರಲ್ಲ.. ಬರೋಬ್ಬರಿ ೧೧,೩೨೦ ಕಿ.ಮೀ. ದೂರ. ಉಡುಪಿಯ ಕಾಪುವಿನಿಂದ ಹೊರಟು ಕಾಣಿವೆ ರಾಜ್ಯ ಕಾಶ್ಮೀರವನ್ನು ತಲುಪಿ, ನಿರಂತರ ೩೭ ದಿನಗಳ ಯಶಸ್ವಿ ಪ್ರಯಾಣ ಮುಗಿಸಿ ತವರು ನೆಲಕ್ಕೆ ವಾಪಾಸ್ಸಾಗಿದ್ದಾರೆ ಹವ್ಯಾಸಿ ಬೈಕ್ ರೈಡರ್ ಸಚಿನ್ ಶೆಟ್ಟಿ.
ವಿವಿಧ ರಾಜ್ಯಗಳ ಜನರ ಸಾಂಸ್ಕೃತಿಕ ಜೀವನ, ದೈನಂದಿನ ಜೀವನ ಕ್ರಮ, ಆಹಾರ ಪದ್ದತಿ ಮತ್ತು ಪ್ರವಾಸಿ ಹಾಗೂ ಐತಿಹಾಸಿಕ ಪ್ರದೇಶಗಳ ಕುರಿತಾಗಿ ಅಧ್ಯಯನ ನಡೆಸಿ ಸಾಕ್ಷ್ಯ ಚಿತ್ರ ನಿರ್ಮಿಸುವ ಉದ್ದೇಶದಿಂದ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಹವ್ಯಾಸಿ ಬೈಕ್ ರೈಡರ್ ಕಾಪುವಿನ ಸಚಿನ್ ಎಸ್. ಶೆಟ್ಟಿ ಲೈಟ್ಸ್ ಕ್ಯಾಮಾರಾ ಲಡಾಕ್ ಎನ್ನುವ ಬೈಕ್ ಪ್ರಯಾಣ ಹಮ್ಮಿಕೊಂಡಿದ್ದರು. ಕಳೆದ ಮೆ. ೨೮ರಂದು ಕಡಲ ನಗರಿ ಕಾಪುವಿನಿಂದ ತನ್ನ ಬೈಕ್ ಏರಿದ್ದ ಸಚಿನ್ ಶೆಟ್ಟಿ ಪುಣೆ, ಮುಂಬೈ, ಉದಯ್‌ಪುರ್, ಮೂಲಕ ವಾಘಾ ಗಡಿ ದಾಟಿ ಕೇವಲ ೧೧ ದಿನದಲ್ಲಿ ಜಮ್ಮು ತಲುಪಿದ್ದರು. ರಾಜಸ್ಥಾನದ ಸುಡು ಬಿಸಿಲು, ಕಾಶ್ಮೀರದ ಕೊರೆಯುವ ಚಳಿಯನ್ನು ಲೆಕ್ಕಿಸದೆ ವಿವಿಧ ರಾಜ್ಯಗಳ ಪಾಕೃತಿಕ ಏರಿಳಿತದ ಹವಾಮಾನಗಳನ್ನು ಎದುರಿಸಿ ಯಶಸ್ವಿಯಾಗಿ ದೇಶ ಪರ್ಯಾಟನೆ ನಡೆಸಿದ್ದಾರೆ. ಕಾಪುವಿನಿಂದ ಕಾಶ್ಮೀರದವರೆಗೆ ಸುಮಾರು ೩೧೮೨ ಕಿ.ಮೀ. ದೂರವನ್ನು ಬೈಕ್‌ನಲ್ಲಿ ಏಕಾಂಗಿಯಾಗಿ ಕ್ರಮಿಸಿ ಸಾಹಸ ಮೆರೆದಿದ್ದಾರೆ. ಈ ಹಿಂದೆ ಒಂದು ಸಾವಿರ, ಎರಡು ಸಾವಿರ ಕಿ.ಮೀ. ದೂರದ ಬೈಕ್ ಪ್ರಯಾಣ ಬೆಳೆಸಿದ್ದ ಸಚಿನ್ ಶೆಟ್ಟಿ ಇದೇ ಮೊದಲ ಬಾರಿಗೆ ಭಾರತದ ತುದಿಯನ್ನು ತಲುಪಿ ಗುರಿ ಮುಟ್ಟಿದ್ದಾರೆ.
ಕಾಪುವಿನಿಂದ ಕಾಶ್ಮೀರದವರೆಗೆ ೧೧ ದಿನಗಳ ಬೈಕ್ ಪ್ರಯಾಣ ಬೆಳೆಸಿದ್ದ ಸಚಿನ್ ಶೆಟ್ಟಿಯನ್ನು ಮಂಗಳೂರಿನ ಎಂಜೆವೈ‌ಎಂಸಿ ( ಮಂಗಳೂರು ಜಾವಾ ಯಝ್ಡಿ ಮೋಟೋರ್ ಕ್ಲಬ್) ತಂಡ ಕಾಶ್ಮೀರದಲ್ಲಿ ಜೊತೆ ಸೇರಿದೆ. ಈ ತಂಡದ ೧೦ ಮಂದಿ ಸದಸ್ಯರು ಕಾಶ್ಮೀರದವರೆಗೆ ವಿಮಾನದಲ್ಲಿ ಪ್ರಯಾಣಿಸಿ ಬಳಿಕ ಅಲ್ಲಿಂದ ಸಚಿನ್ ಜೊತೆ ಬೈಕ್ ಪ್ರಯಾಣ ಆರಂಭಿಸಿದ್ದಾರೆ. ೮ ಬೈಕ್‌ನಲ್ಲಿ ಹತ್ತು ಮಂದಿ ಸವಾರರು ಪ್ರಯಾಣ ಬೆಳೆಸಿದ್ದು ಕಾಶ್ಮೀರದ ಲಡಾಕ್‌ನಲ್ಲಿರುವ ಕಾಡಂಗುಲ್ಲಾ ಪ್ರದೇಶವನ್ನು ತಲುಪಿದ್ದಾರೆ. ಕಾಡುಂಗುಲಾ ಸಮುದ್ರಮಟ್ಟದಿಂದ ಸುಮಾರು ೧೮,೩೮೦ ಅಡಿ ಎತ್ತರವಿರುವ ಪ್ರಪಂಚದ ಅತೀ ಎತ್ತರದ ಮೋಟರೇಬಲ್ ರೋಡ್. ಮಂಗಳೂರಿನ ಎಂಜೆವೈ‌ಎಂಸಿ ತಂಡದ ಗಿರೀಶ್, ಸೂರಜ್, ಅನಿಲ್, ಬಿರೋಶ್, ಸುಧೀರ್ ವಿವೇಕ್, ಸಂಜಯ್, ಮುಕುಂದ, ಹರ್ಷ, ಗುರು ಸೇರಿದಂತೆ ಸಚಿನ್ ಶೆಟ್ಟಿ ಇದ್ದರು. ೧೯೮೪ರ ಮಾಡೆಲ್‌ನ ಯಝ್ಡಿ ಬೈಕನ್ನು ತಮ್ಮ ಪ್ರಯಾಣದಲ್ಲಿ ಬಳಸಿದ್ದು ವಿಶೇಷ. ಇದೇ ಮೊದಲ ಬಾರಿಗೆ ಇಷ್ಟು ಹಳೆಯ ಬೈಕನ್ನು ಪ್ರಯಾಣಕ್ಕೆ ಬಳಸಿಕೊಳ್ಳಲಾಗಿದೆ ಎನ್ನುವುದು ತಂಡದ ಸದಸ್ಯರ ಅಭಿಪ್ರಾಯ.
ಲೈಟ್ಸ್ ಕ್ಯಾಮಾರಾ ಲಡಾಕ್ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿ ಊರು ತಲುಪಿದ ಸಚಿನ್ ಶೆಟ್ಟಿ ಹಾಗೂ ತಂಡವನ್ನು ಸೌತ್ ಕೆನರಾ ಪೊಟೋಗ್ರಾಫರ‍್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ವತಿಯಿಂದ ಬಿ.ಸಿ.ರೋಡಿನಲ್ಲಿ ಸೋಮವಾರ ಬರಮಾಡಿಕೊಳ್ಳಲಾಯಿತು. ವೃತ್ತಿಯಲ್ಲಿ ಛಾಯಾಚಿತ್ರಗ್ರಾಹಕರಾಗಿರುವ ಸಚಿನ್ ಶೆಟ್ಟಿ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಪದಾಧಿಕಾರಿಗಳಾದ ದಯಾನಂದ ಬಂಟ್ವಾಳ, ಹರೀಶ್ ಬಂಟ್ವಾಳ, ರಾಜರತ್ನ, ರವಿಪ್ರಕಾಶ್, ಲಕ್ಷ್ಮಣ್, ವಿಕೇಶ್ ಹಾಜರಿದ್ದರು.

Related posts

Leave a Reply