Breaking News

ತ್ಯಾಜ್ಯದಿಂದ ತೋಟ, ಮನೆ ಪರಿಸರ ಹಾಳು

ಮನೆ ಸಹಿತ ಅಂಗಡಿಗಳ ತ್ಯಾಜ್ಯವನ್ನು ವಾಹನದಲ್ಲಿ ತಂದು ನದಿಗೆ ಹಾಕುವ ಕಿಡೀಗೇಡಿಗಳು.. ತೋಟದ ಜತೆಗೆ ಗುಡ್ಡದ ಅನಗತ್ಯ ವಸ್ತುಗಳನ್ನು ನದಿ ಪಾತ್ರಕ್ಕೆ ತಳ್ಳುವ ಮಂದಿ.. ಅಣೆಕಟ್ಟುಗಳಲ್ಲಿ ಬೃಹತ್ ಗಾತ್ರದ ತ್ಯಾಜ್ಯ ನಿಂತು ನೀರಿನ ಹರಿವಿಗೆ ತಡೆಯೊಡ್ಡಿ ಎಲ್ಲೆಂದರಲ್ಲಿ ನುಗ್ಗುವ ನೀರು.. ನೀರಿನ ಹರಿವು ತಡೆಯಲಾಗದೆ ಬಿರುಕು ಬಿಡುತ್ತಿರುವ ಅಣೆಕಟ್ಟು……ಇದು ವಿಟ್ಲ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ಕಂಬಳಬೆಟ್ಟು – ಒಕ್ಕೆತ್ತೂರು ನದಿಯ ಸೇತುವೆ ಸಹಿತ ಅಣೆಕಟ್ಟೆಯೊಂದರ ದುಸ್ಥಿತಿ..ವಿಟ್ಲ ಕಬಕ ರಸ್ತೆಯ ಕಂಬಳಬೆಟ್ಟು ಭಾಗದಲ್ಲಿ ಸೇತುವೆಯಿಂದ ನದಿಗೆ ನಿತ್ಯ ವಾಹನದಲ್ಲಿ ಬರುವ ಮಂದಿ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಇದು ಕುಡಿಯುವ ನೀರಿನ ಮೂಲಗಳನ್ನು ಸೇರುತ್ತಿದ್ದರೂ ಕ್ರಮಕೈಗೊಳ್ಳುವವರಿಲ್ಲದಾಗಿದೆ. ಇದರಿಂದ ಗುಡ್ಡದ ಕಾಡು ಹಾಗೂ ತೋಟದ ಸುತ್ತಮುತ್ತಲಿನ ಅನಗತ್ಯ ವಸ್ತುಗಳನ್ನೂ ನದಿಗೆ ತಳ್ಳುವ ಕಾರ್ಯ ಆರಂಭವಾಗಿದೆ. ಇದು ಎಲ್ಲಂದರಲ್ಲಿ ಶೇಖರಗೊಂಡು ಲಕ್ಷಾಂತರ ಮೌಲ್ಯದ ಬೆಳೆ ಹಾಗೂ ಸೊತ್ತುಗಳು ನಾಶವಾಗುವ ಭೀತಿ ಎದುರಾಗಿದೆ.ಚಂದಳಿಕೆ ಸಮೀಪದ ರಾಮನಗರದಿಂದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಜಾಗದ ಮೂಲಕ ತೆರಳಿ ಪಲೇರಿ ಪ್ರದೇಶವನ್ನು ತಲುಪಲಾಗುತ್ತದೆ. ವಿಟ್ಲ ಪೇಟೆಯಲ್ಲಿ ವಾಹನ ಸಂಚಾರ ಸಮಸ್ಯೆಯಾದರೆ ಇದು ಮಂಗಳೂರು ರಸ್ತೆಯನ್ನು ತಲುಪಲು ಪರ್ಯಾಯ ರಸ್ತೆಯಾಗಿದೆ. ಸಂಶೋಧನಾ ಕೇಂದ್ರದ ತೋಟದ ಮಧ್ಯೆ ಕಂಬಳಬೆಟ್ಟು ಭಾಗದಿಂದ ಹರಿದು ಒಕ್ಕೆತ್ತೂರು ನದಿಗೆ ಸೇರುವ ಉಪ ನದಿ ಇದಾಗಿದೆ.ಇದನ್ನು ದಾಟುವ ಹಾಗೂ ನೀರು ಸಂಗ್ರಹಿಸುವ ಉದ್ದೇಶದಿಂದ ದಾಸರಬೆಟ್ಟು ಸೇತುವೆ ಸಹಿತ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಕಂಬಳಬೆಟ್ಟು ಭಾಗದಿಂದ ಬಿದಿರಿನ ಮೆಳೆಗಳು ನೀರಿನಲ್ಲಿ ತೇಲಿ ಬಂದು ಈ ಸೇತುವೆಯ ತಳಬಾಗದಲ್ಲಿರುವ ಅಣೆಕಟ್ಟಿನಲ್ಲಿ ಸಿಲುಕಿಹಾಕಿಕೊಂಡಿದೆ. ಈ ಬಗ್ಗೆ ಸಿಪಿಸಿ‌ಆರ್ ಐ ಸಿಬ್ಬಂದಿಗಳು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದು, ಸ್ಥಳಕ್ಕೆ ಅಧ್ಯಕ್ಷರು ಆಗಮಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು.ಆದರೆ ಮಳೆ ಕೆಲವು ದಿನದಿಂದ ಹೆಚ್ಚಾಗಿರುವುದರಿಂದ ನೀರಿನ ಹರಿವು ಉಪನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನೀರಿನ ಜತೆಗೆ ಹರಿದು ಬರುವ ಮಣ್ಣು ನಿಂತು ನೀರಿನ ಸೆಳೆತಕ್ಕೆ ಸೇತುವೆಯ ಕಂಬಗಳಿಗೆ ಹಾನಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅಣೆಕಟ್ಟಿನ ಪಿಲ್ಲರ್‌ಗಳು ನೆಲಸಮವಾಗಿದೆ. ಕೃಷಿ ತೋಟಕ್ಕೆ ಅಡ್ಡವಾಗಿ ಕಟ್ಟಲಾದ ತಡೆಗೋಡೆ ಕುಸಿದು ಕೃಷಿ ತೋಟ ಅಪಾಯದಲ್ಲಿದೆ. ತಕ್ಷಣ ಬಿದಿರಿನ ಮೆಳೆಗಳನ್ನು ತೆಗೆಯದಿದ್ದಲ್ಲಿ ಸಂಶೋಧನಾ ಕೇಂದ್ರದ ತೋಟಕ್ಕೆ ನೀರು ನಿಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗುವ ಸಾಧ್ಯತೆ ಇದೆ. ಸ್ಥಳೀಯಾಡಳಿತ ಯಾವುದೇ ಕ್ರಮ ಜರುಗಿಸದ ಕಾರಣ ಇದೀಗ ಇಲಾಖೆ ವತಿಯಿಂದಲೇ ಕೂಲಿ ಆಳುಗಳ ಮೂಲಕ ಬಿದಿರುಗಳನ್ನು ತೆರವುಗೊಳಿಸಲಾಗುತ್ತಿದೆ.ಸ್ಥಳೀಯಾಡಳಿತ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಮಂಗಲಪದವು ಸಂಪರ್ಕಿಸುವ ರಸ್ತೆಯೂ ಸಂಪೂರ್ಣ ಬಂದ್ ಆಗಲಿದೆ ಎಂಬುದು ಸೇತುವೆ ಮೇಲೆ ಸಂಚರಿಸುವವರ ಅಭಿಪ್ರಾಯವಾಗಿದೆ. ನದಿಗೆ ತ್ಯಾಜ್ಯಗಳನ್ನು ಎಸೆಯುವವರನ್ನು ಪತ್ತೆ ಹಚ್ಚಿ ಸೂಕ್ತಕ್ರಮಕೈಗೊಳುವವರೆಗೆ ಈ ರೀತಿಯ ಸಮಸ್ಯೆಗೆ ಪರಿಹಾರ ಸಿಗಲಾರದು ಎಂಬುದು ಸ್ಥಳೀಯ ನಿವಾಸಿಗಳ ಅಭಿಪ್ರಾಯವಾಗಿದೆ.

Related posts

Leave a Reply