Header Ads
Header Ads
Breaking News

ದೇಶದಲ್ಲಿ ಶೇ. 9 ರಷ್ಟು ರಕ್ತದ ಕೊರತೆ

ಉಳ್ಳಾಲ: ದೇಶದಲ್ಲಿ ಶೇ. 9 ರಷ್ಟು ರಕ್ತದ ಕೊರತೆಯಿದ್ದು, ಇದನ್ನು ನೀಗಿಸಲು ರಕ್ತದಾನದ ಕುರಿತ ಜಾಗೃತಿ ಆಗಬೇಕಿದೆ ಎಂದು ದೇರಳಕಟ್ಟೆ ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.ಅವರು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಆಸ್ಪತ್ರೆ, ಕ್ಷೇಮ ವೈದ್ಯಕೀಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆಸ್ಪತ್ರೆ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಆಸ್ಪತ್ರೆ ವಠಾರದಲ್ಲಿ ಬುಧವಾರ ನಡೆದ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ರಕ್ತದಾನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ರಕ್ತದಾನಿಗಳ ಆಚರಣೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯ ಸಮಾಜಕ್ಕೆ ಪೂರಕವಾಗಿದೆ. ದೇಶಾದ್ಯಂತ ರಕ್ತದ ಕೊರತೆ ನೀಗಿಸಲು ಜಾಗೃತಿಯ ಅಗತ್ಯತೆ ಇದೆ. ಒಂದು ಸಂದೇಶ ಅನೇಕ ಜೀವಗಳನ್ನು ಬದುಕಿಸಲು ಸಾಧ್ಯ ಎಂದರು.ಕ್ಷೇಮ ಮೆಡಿಕಲ್ ಅಕಾಡೆಮಿಯ ಕುಲಸಚಿವ ಹಾಗೂ ಪೆಥಾಲಜಿ ವಿಭಾಗ ಮುಖ್ಯಸ್ಥ ಡಾ.ಜಯಪ್ರಕಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಹಿರೇಮಠ್ , ನಿಟ್ಟೆ ವಿ.ವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕಿ ಡಾ.ಸುಮಲತಾ.ಆರ್ ಶೆಟ್ಟಿ, ಪ್ರೊ.ಶಶಿಕುಮಾರ್ ಮತ್ತು ನಿವೃತ್ತ ಸೇನಾಧಿಕಾರಿ ಹಾಗೂ ದೇರಳಕಟ್ಟೆ ರೋಟರಿ ಕ್ಲಬ್ ನ ಅಸಿಸ್ಟೆಂಟ್ ಗವರ್ನರ್ ವಿಕ್ರಂ ದತ್ತಾ ಮುಖ್ಯ ಅತಿಥಿಗಳಾಗಿದ್ದರು.ಡಾ.ಶ್ರೇಯಾ ಸ್ವಾಗತಿಸಿದರು. ಆಸ್ಪತ್ರೆ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಹಿಲೆರಿ ಫ್ರಾನ್ಸಿಸ್ ವಂದಿಸಿದರು.ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ ರಕ್ತದಾನ ಜಾಗೃತಿ ಕುರಿತ ನಾಟಕ ಪ್ರದರ್ಶನ ನಡೆಯಿತು.ಕಾರ್ಯಕ್ರಮದ ನಡೆಯುತ್ತಿದ್ದಂತೆ ರಕ್ತದಾನ ನಡೆಯುತ್ತಿದ್ದ ಸ್ಥಳಕ್ಕೆ ಆಂಬ್ಯುಲೆನ್ಸ್ ಒಂದು ಸೈರನ್ ಮೊಳಗಿಸುತ್ತಾ ಆಗಮಿಸಿತ್ತು. ಆಸ್ಪತ್ರೆ ವಠಾರವಾಗಿದ್ದರಿಂದಾಗಿ ರೋಗಿಗಳು ಆಂಬ್ಯುಲೆನ್ಸ್ ಬರುತ್ತಿದ್ದ ವೇಗ ಹಾಗೂ ಸೈರನ್ ಸದ್ದು ಎಲ್ಲರನ್ನು ಭಯ ಹುಟ್ಟಿಸುವಂತೆ ಮಾಡಿತು. ರಕ್ತದಾನದ ಸಭಾ ಕಾರ್ಯಕ್ರಮದ ಸ್ಥಳಕ್ಕೆ ಬಂದು ನಿಂತಾಗ ಸ್ಥಳದಲ್ಲಿ ನೆರೆದಿದ್ದವರೆಲ್ಲರೂ ಹೆದರಿ ಆಂಬ್ಯುಲೆನ್ಸ್ ಸಮೀಪಕ್ಕೆ ಆಗಮಿಸುತ್ತಿದ್ದಂತೆ, ಅದರೊಳಗಿದ್ದ ರೋಗಿಯನ್ನು ಕಂಡು ಮತ್ತೆ ಬೆಚ್ಚಿಬಿದ್ದರು. ಕೈಯಲ್ಲಿ ರಕ್ತಸ್ರಾವವಾಗುತ್ತಿದ್ದು, ತಲೆಗೂ ಗಂಭೀರ ಗಾಯವಾದಂತೆ ಕಂಡುಬಂದಿತ್ತು. ಕೂಡಲೇ ವೇದಿಕೆಯ ಕೆಳಭಾಗದಲ್ಲಿದ್ದ ಹಾಸಿಗೆಯಲ್ಲಿ ಆತನನ್ನು ಮಲಗಿಸಿ ತುರ್ತಾಗಿ ಬಿ ನೆಗೆಟಿವ್ ರಕ್ತಕ್ಕಾಗಿ ಹುಡುಕಾಟ ಆರಂಭಿಸಿದರು. ಸ್ಥಳದಲ್ಲಿದ್ದವರಲ್ಲಿ ಯಾರಾದರೂ ತುರ್ತಾಗಿ ರಕ್ತ ನೀಡುವಂತೆ ಸೂಚಿಸಲಾಯಿತು. ಈ ನಡುವೆ ತುರ್ತು ನಿಗಾ ಘಟಕಕ್ಕೆ ಕೊಂಡೊಯ್ಯಬೇಕಾದ ರೋಗಿಯನ್ನು ವೇದಿಕೆಯತ್ತ ಯಾಕೆ ಕರೆತಂದರು ಅನ್ನುವಷ್ಟರಲ್ಲಿ , ಅದೊಂದು ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಡೆದ ಅಣುಕು ಪ್ರದರ್ಶನ ಎಂದು ತಿಳಿಯುತ್ತಿದ್ದಂತೆ ಜನ ಬೇಸ್ತುಬಿದ್ದಿದ್ದರು.

Related posts

Leave a Reply