Breaking News

ಪಕ್ಷದ ಸ್ವಾಭಿಮಾನಿ ತಂಡದಿಂದ ರೈಗೆ ತಲೆ ಬಿಸಿ

ಬಂಟ್ವಾಳ: ರಾಜಕೀಯ ಬೆಳವಣಿಗೆಯಿಂ ದಾಗಿ ಜಿಲ್ಲಾ ಕಾಂಗ್ರೆಸ್ ಚಟುವಟಿಕೆಗಳಿಂದ ದೂರ ಸರಿದಿದ್ದ ಪಕ್ಷದ ಸ್ವಾಭಿಮಾನಿ ಗುಂಪೊಂದು ಇದೀಗ ಸಚಿವರಿಗೆ ತಲೆಬಿಸಿ ಉಂಟು ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾಗಿರುವ ರಮಾನಾಥ ರೈ ಅವರನ್ನು ನಿಷ್ಠುರ ಕಟ್ಟಿಕೊಂಡಿರುವ ಅತೃಪ್ತ ಕಾಂಗ್ರೆಸ್ಸಿಗರು ಅವರೀಗ ತಿರು ಮಂತ್ರ ಬಿಡುತ್ತಿದ್ದಾರೆ.
ಸ್ವಾಭಿಮಾನಿಗಳ ಪಡೆಗೆ ಜಿಲ್ಲಾಡಳಿತ, ಸರಕಾರದ ಧೋರಣೆಯಿಂದ ಬೇಸತ್ತ ಸಂತ್ರಸ್ತರು ಕೂಡ ಸಾಥ್ ನೀಡಿದ್ದು, ಸಚಿವರು ಅತೃಪ್ತರ ಸೇನೆಯನ್ನೇ ಬೆಳೆಸುತ್ತಿದ್ದಾರೆ. ಇತ್ತೀಚಿಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಸಚಿವರಿಗೆ ಬಹಿರಂಗವಾಗಿ ಸವಾಲ್ ಹಾಕಿರುವ ಸಾಮಾಜಿಕ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರೊಂದಿಗೆ ನೇತ್ರಾವತಿ ತಿರುವು ಹೋರಾಟಗಾರರು, ತುಂಬೆ ಡ್ಯಾಂ ಸಂತ್ರಸ್ತ ರೈತರು ಕೈ ಜೋಡಿಸಿದ್ದಾರೆ. ಕಾಂಗ್ರೆಸ್ಸನ್ನು ಸೈದ್ಧಾಂತಿಕವಾಗಿ ಎದುರು ಹಾಕಿರುವ ಎಸ್‌ಡಿಪಿ‌ಐ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧ ವಾಕ್ ಸಮರಕ್ಕೆ ಇಳಿದಿದ್ದಾರೆ. ಅನಾಮಧೇಯವಾಗಿ ಹರಿದಾಡುತ್ತಿರುವ ವಾಟ್ಸ್‌ಆಪ್ ಪೋಸ್ಟ್, ಸಂದೇಶಗಳು ಸಮಾಜದ ಸ್ವಾರ್ಥ ಕೆಡಿಸುತ್ತಿರುವ ಬಗ್ಗೆ ಸ್ವತಹ ಸಚಿವರೇ ಕಿಡಿಕಾರಿದ್ದರೂ, ಪೊಲೀಸ್ ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ವಲಯದಲ್ಲೇ ಕೇಳಲಾಗುತ್ತಿದೆ.
ಅಶ್ರಫ್ ಹತ್ಯೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ಅವರ ಕೈವಾಡ ಇರುವುದಾಗಿ ಆರೋಪಿಸಿ ವಾಟ್ಸ್‌ಆಪ್ ಸಂದೇಶವೊಂದು ಕಳೆದೆರಡು ರಾತ್ರಿಯಿಂದ ನಾಗರಿಕರನ್ನು ನಿದ್ದೆ ಕೆಡಿಸುತ್ತಿದ್ದರೂ, ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ಸಿನ ಮುಖಂಡರೇ ಆರೋಪ ಮಾಡುವಂತಾಗಿದೆ. ಬಂಟ್ವಾಳ ಪೊಲೀಸರು ತನ್ನ ಮಾತನ್ನು ಕೇಳುತ್ತಿಲ್ಲ. ಠಾಣೆಯಲ್ಲಿ ಕೆಲವು ಸಂಘಿಗಳಿದ್ದಾರೆ ಎನ್ನುತ್ತಿದ್ದ ಸಚಿವರ ಮಾತಿಗೆ ಇಲ್ಲಿ ನೂರಕ್ಕೆ ನೂರು ಉತ್ತರವೂ ಲಭಿಸಿದೆ. ಸಚಿವರು ಮಾಡಿರುವ ಈ ಆರೋಪ ಸರಕಾರದ ಮಟ್ಟದಲ್ಲಿ ಗಂಭೀರ ಸ್ವರೂಪ ಪಡೆದಿದ್ದು, ಠಾಣಾ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬದಲಾಯಿಸುವ ಹಂತಕ್ಕೆ ಬೆಳೆದಿದೆ. ಸಚಿವರನ್ನು ರಾಜಕೀಯ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಿಷ್ಠುರ ಕಟ್ಟಿಕೊಂಡಿರುವ ಮಂದಿಯ ಮೇಲೆ ಕ್ರಿಮಿನಲ್ ಕೇಸ್‌ನ ತೂಗುಕತ್ತಿ ಬೀಳಲಿದೆಯೇ ಎನ್ನುವುದು ಕೂಡ ಇನ್ನೊಂದು ಮಗ್ಗುಲಲ್ಲಿ ಚರ್ಚೆಯಾಗುತ್ತಿದೆ. ಆದರೂ ಜನರ ಆಕ್ರೋಶ ಮಾತ್ರ ಶಮನಗೊಳ್ಳುತ್ತಿಲ್ಲ! ಸಚಿವರ ವಿರುದ್ಧ ಪ್ರತೀಕ್ಷಣವೂ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಸಂದೇಶ ರವಾನೆಯಾಗುತ್ತಲೇ ಇದೆ.
ಸಚಿವರೇ ಉತ್ತರ ಕೊಡಿ, ಇಲ್ಲವಾದರೆ…?
ಸಚಿವರೇ, ನಮ್ಮ ಪ್ರಶ್ನೆಗಳಿಗೆ ಉತರ ಕೊಡಿ! ಇಲ್ಲವಾದರೆ ನಾವೇ ನಿಮಗೆ ಉತ್ತರ ಕೊಡುತ್ತೇವೆ?! ಎನ್ನುವ ತಲೆಬರಹದಡಿ ಕೇಳಲಾದ ಆರು ಪ್ರಶ್ನೆಗಳೀಗ ಜನರ ನಾಲಗೆಯಲ್ಲಿ ನಲಿದಾಡುತ್ತಿದೆ. ಭೂಷಣ್ ಜಿ.ಬೊರಸೆ ಯವರನ್ನು ಅಂದು ಜಿಲ್ಲೆಗೆ ಕರೆಯಿಸಲು ಶಿಫಾರಸು ಮಾಡಿದ್ದು ಯಾರು? ಎಸ್ಪಿಯವರನ್ನು ಇದು ಮಂಡ್ಯವಲ್ಲ, ಇಂಡಿಯಾ ಎಂದು ನೀವು ಎರಡೆರಡು ಸಲ ಹೇಳಿಕೊಂಡದ್ದು ಯಾಕೆ? ಅಣ್ಣಾಮಲೈ ಎಸ್ಪಿಯಾಗುವುದನ್ನು ತಡೆದದ್ದು ಯಾರು? ಅಶ್ರಫ್ ಕೊಲೆ ಆರೋಪಿಗಳನ್ನು ಬಿಡಿಸಲು ಪೊಲೀಸರಿಗೆ ಒತ್ತಡ ಹಾಕುವುದು ಯಾರು? ಎಂದೆಲ್ಲ ಪ್ರಶ್ನಿಸಿದ್ದು, ಇದಕ್ಕೆ ತಾವು ಉತ್ತರಿಸದಿದ್ದಲ್ಲಿ ಚುನಾವಣಾ ದಿನ ನಾವೇ ನಿಮಗೆ ಉತ್ತರ ನೀಡಲಿದ್ದೇವೆ ಎಂದು ಸವಾಲ್ ಹಾಕಿದ್ದಾರೆ.

Related posts

Leave a Reply