Header Ads
Breaking News

ಪ್ರಕೃತಿ ಜೊತೆಗೆ ಆಟವಾಡಿ, ಎಂಜಾಯ್ ಮಾಡಿದ ಮಕ್ಕಳು : ಮೊಬೈಲ್ ಬಿಟ್ಟು ಹೊರಗಿನ ಪ್ರಪಂಚಕ್ಕೆ ಕಾಲಿಟ್ಟ ಚಿಣ್ಣರು

ಹಿಂದೊಂದು ಕಾಲವಿತ್ತು ಮಕ್ಕಳು ಪ್ರಕೃತಿ ಜೊತೆಗಿನ ಆಟವನ್ನ ಎಂಜಾಯ್ ಮಾಡ್ತಿದ್ರು. ಆದ್ರೆ ಇವತ್ತು ಅದೆಲ್ಲವೂ ಬದಲಾಗಿದೆ. ಕೈಗೊಂದು ಮೊಬೈಲ್ ಸಿಕ್ಕರೆ ಸಾಕು ಅದೇ ಪ್ರಪಂಚವಾಗಿ ಬಿಟ್ಟಿದೆ. ಆದರೆ ಲಾಕ್‍ಡೌನ್ ಬೇಗುದಿ ನಡುವೆ ಸಿಕ್ಕ ಮಕ್ಕಳು ಇದೀಗ ಮೆಲ್ಲನೆ ಪ್ರಕೃತಿಯೊಂದಿಗೆ ಜೊತೆಗೂಡುತ್ತಿದ್ದಾರೆ. ಅದರ ಜೊತೆಗೆ ಬೆರೆತು ತಮ್ಮ ಸಮಯವನ್ನ ಕಳೆಯುತ್ತಿದ್ದಾರೆ.. ಈ ಕುರಿತು ವಿಶೇಷ ವರದಿ ಇಲ್ಲಿದೆ ನೋಡ್ಕೋಡು ಬನ್ನಿ

ಹೌದು, ಕರಾವಳಿಯಲ್ಲಿ ಬೆಳೆಯೋ ಮಕ್ಕಳು ಸರ್ವ ಋತುಗಳಲ್ಲೂ ಆಟ ವಿನೋದಾವಳಿಗಳನ್ನ ಕಂಡು ಹಿಡಿದವರು. ಈಗಲೂ ಕರಾವಳಿಯಲ್ಲಿ ಪ್ರಕೃತಿ ಜೊತೆಗಿನ ಕ್ರೀಡೆಗಳಿಗೇನೂ ಕಡಿಮೆಯಿಲ್ಲ. ಆದರೆ ಮೊಬೈಲ್ ನಡುವೆ ಕಳೆದುಹೋಗುತ್ತಿರುವ ಮಕ್ಕಳಿಗೆ ಆ ಅವಕಾಶಗಳೇ ಕಡಿಮೆ. ಆದರೆ ಇದೀಗ ಕೊರೊನಾದಿಂದಾಗಿ ಮಕ್ಕಳು ಮತ್ತದೇ ಆಟಕ್ಕೆ ಹಿಂದಿರುಗುತ್ತಿದ್ದಾರೆ. ಕೋವಿಡ್ 19 ಲಾಕ್‍ಡೌನ್‍ನಿಂದ ಶಾಲೆಗಳು ಮುಚ್ಚಿದ್ದನ್ನ ಮಕ್ಕಳು ಎಂಜಾಯ್ ಮಾಡುವಂತಾಗಿದೆ. ಮೊಬೈಲ್, ಟಿವಿ ಎಂಟರ್ ಟೈನ್ ಮೆಂಟ್‍ಗಳಿಗೆ ಟಾಟಾ ಬೈ ಬೈ ಹೇಳಿರೋ ಮಕ್ಕಳು ಪುಸ್ತಕ, ಪೇಪರ್‍ಗಳ ಹಾಳೆಯಿಂದ ದೋಣಿಯ ರೂಪ ಕೊಟ್ಟು ಅದನ್ನ ನೀರಲ್ಲಿ ತೇಲಿ ಬಿಟ್ಟು ಖುಷಿ ಪಡುತ್ತಿದ್ದಾರೆ. ಅದರಲ್ಲೂ ಕರಾವಳಿಯಲ್ಲಿ ಉತ್ತಮ ಮಳೆ ಬೇರೆಯಾಗುತ್ತಿದ್ದು, ಮನೆ ಮುಂದೆ ಹರಿಯೋ ತೊರೆಗಳು ತುಂಬಿ ಹರಿಯುತ್ತಿದ್ದು ಮಕ್ಕಳ ಖುಷಿಗೆ ಪಾರವೇ ಇಲ್ಲದಂತೆ ಮಾಡಿದೆ.

ಕಳೆದ ಮೂರು ತಿಂಗಳ ಲಾಕ್‍ಡೌನ್ ನಿಂದ ಮಕ್ಕಳೂ ಮನೆಯಲ್ಲೇ ಇದ್ದು ಬೋರು ಹೊಡೆದು ಹೋಗಿದ್ದಾರೆ. ಆದ್ದರಿಂದ ಮನೆ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ನೀರಾಟಕ್ಕೆ ಮೊರೆ ಹೋದವರೇ ಅಲ್ಲೂ ಕಾಗದದ ದೋಣಿಗೆ ಜೀವ ಕೊಟ್ಟಿದ್ದಾರೆ. ಅಚ್ಚರಿ ಅಂದ್ರೆ ಇಲ್ಲೊಂದು ಮಕ್ಕಳ ತಂಡ ತಮ್ಮ ಕಲ್ಪನೆಯ ತೆಪ್ಪಕ್ಕೆ ರೂಪುಕೊಟ್ಟು ಅದರಲ್ಲಿ ಫುಲ್ ಎಂಜಾಯ್ ಮಾಡ್ತಿದ್ದಾರೆ. ಯಾರೊಬ್ಬ ಹಿರಿಯರ ಸಹಾಯ ಪಡೆಯದೇನೆ ಮಕ್ಕಳೇ ಸೇರಿ ಅಡಿಕೆ ಮರದ ತೊಗಟೆಯಿಂದ ತೆಪ್ಪ ರಚಿಸಿ ಅದ್ರಲ್ಲಿ ತೇಲಿ ಹೋಗುವ ದೃಶ್ಯ ನೋಡಿದ್ರೆ ಮಕ್ಕಳ ಪೋಷಕರೇ ಬೆರಗಾಗ್ತಾರೆ..ಆದ್ದರಿಂದ ಪೋಷಕರೂ ತಮ್ಮ ಮಕ್ಕಳ ಖುಷಿಗೆ ಅಡ್ಡಿಯಾಗುತ್ತಿಲ್ಲ. ನೀರಿನಲ್ಲಿ ಬೆರೆತು ಆಟ ಆಡೋ ಮಕ್ಕಳಿಗೆ ಮೊಬೈಲ್ ಲೋಕಕ್ಕಿಂತಲೂ ಪ್ರಕೃತಿಯೇ ಹೆಚ್ಚು ಖುಷಿ ಕೊಡುತ್ತಿರುವುದು ಕೂಡಾ ಸುಳ್ಳಲ್ಲ. ಒಟ್ಟಿನಲ್ಲಿ ಈ ಋತುವಿನ ಮಳೆಗಾಲ ಮಕ್ಕಳ ಪಾಲಿಗಂತೂ ಹೊಸ ಅನುಭವ ನೀಡಿದೆ. ಈ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಕಾಗದದ ದೋಣಿ, ನೀರಿನ ಜೊತೆಗಿನ ಆಟ ಮತ್ತೆ ಕಾಣಿಸಿಕೊಳ್ಳುವಂತಾಗಿದೆ. ಮೊಬೈಲ್ ಲೋಕದಿಂದ ಹೊರ ಪ್ರಪಂಚ ನೋಡುವಂತಾಗಿರೋದಕ್ಕೆ ಈ ಪುಟಾಣಿ ಮಕ್ಕಳು ಕೊರೊನಾ ಗೆ ಥ್ಯಾಂಕ್ಸ್ ಹೇಳದೇ ಇರಲು ಸಾಧ್ಯವೇ..

Related posts

Leave a Reply

Your email address will not be published. Required fields are marked *