
ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಗಣೇಶ್ ರಾಮಯ್ಯ ನಾಯ್ಕ್ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪ್ರೇಮ ಗಟ್ಟಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.ಏಳು ಸದಸ್ಯ ಬಲದ ಕುರ್ನಾಡು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ನಾಲ್ಕು ಹಾಗೂ ಬಿಜೆಪಿ ಮೂರು ಸ್ಥಾನ ಗಳಿಸಿತ್ತು. ಮೀಸಲಾತಿ ಪ್ರಕ್ರಿಯೆಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಯಲ್ಲಿ ಕಾಂಗ್ರೆಸ್ನ ಗಣೇಶ್ ರಾಮಯ್ಯ ನಾಯ್ಕ್ ಹಾಗೂ ಹಿಂದುಳಿದ ವರ್ಗ ಎ ಮಹಿಳಾ ಕೆಟಗರಿಯಲ್ಲಿ ಪ್ರೇಮಲತಾ ಗಟ್ಟಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಭಾಗವಹಿಸಿದ್ದರು. ಅಧಿಕಾರ ಸ್ವೀಕಾರ ಸಮಾರಂಭ ನಡೆದ ಬಳಿಕ ಮಾತನಾಡಿದ ಶಾಸಕ ಯು.ಟಿ. ಖಾದರ್ ಮಾತನಾಡಿ ಈ ಹಿಂದೆಯೂ ಇಲ್ಲಿ ಹಲವು ಬಾರಿ ಕಾಂಗ್ರೆಸ್ ಆಡಳಿತ ನಡೆಸಿದ್ದು ಎಲ್ಲ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಮೊದಲಾದ ಮುಖಂಡರ ಅವಿರತ ಸೇವೆ ಕೈಹಿಡಿದಿದೆ. ಬಿಜೆಪಿ ಅಧಿಕಾರ ದೂರವಿಟ್ಟು ಕಾಂಗ್ರೆಸ್ ಗೆ ಅವಕಾಶ ಕೊಟ್ಟಿದ್ದು ಗಣೇಶ್ ನಾಯ್ಕ್ ಹಾಗೂ ಪ್ರೇಮ ಗಟ್ಟಿ ಅವರ ನೇತೃತ್ವದಲ್ಲಿ ಜನಸ್ನೇಹಿ ಆಡಳಿತ ನೀಡಲಿದ್ದೇವೆ ಎಂದರು.ಈ ವೇಳೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಮತ್ತಿರತರರು ಉಪಸ್ಥಿತರಿದ್ದರು.