Breaking News

ಬಾಲ್ಯವಿವಾಹ ತಡೆ ಕಾನೂನು : ವಿದ್ಯಾರ್ಥಿಗಳಿಗೆ ಅರಿವು ಮುಖ್ಯ

ಮೂಡುಬಿದಿರೆ:ಬಾಲ್ಯ ವಿವಾಹದಿಂದ ವಿದ್ಯಾರ್ಥಿಗಳ ಭವಿಷ್ಯ ಕಮರಿ ಹೋಗುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಕಾಳಜಿಯಿಂದ ಬಾಲ್ಯ ವಿವಾಹ ತಡೆ ಕಾನೂನು ರೂಪಿಸಲಾಗಿದೆ. ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳಿವೆ. ಈ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು ಎಂದು ದ.ಕ ಜಿಲ್ಲಾ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ ಹೇಳಿದರು.
ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಂತ್ಯ ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತ ನೇತೃತ್ವದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ “ನಮ್ಮ ನಡೆ- ಶಾಲೆ ಕಡೆ” ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೋಟರಿ ಶ್ವೇತಾ ಜೈನ್‌ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಬಾಲ್ಯ ವಿವಾಹಕ್ಕಿರುವ ಕಾರಣಗಳು, ತೊಂದರೆಗಳು,ಕಾನೂನಿನಡಿಯಲ್ಲಿ ಅದಕ್ಕಿರುವ ಶಿಕ್ಷೆಗಳು, ಮತ್ತು ವಿದ್ಯಾರ್ಥಿಗಳಾಗಿ ಅದನ್ನು ತಡೆಗಟ್ಟುವ ಬಗ್ಗೆ ಗಮನ ಸೆಳೆದರು.
ಸಿವಿಲ್ ನ್ಯಾಯಾಧೀಶರಾದ ಅರುಣಾ ಕುಮಾರಿ ಎ. ಮತ್ತು ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್ ಎಂ. ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷರಾದ ನಾಗೇಶ ಶೆಟ್ಟಿ, ನ್ಯಾಯವಾದಿಗಳಾದ ಮಾಧುರಿ ಕುಲಕರ್ಣಿ ಮತ್ತು ಶ್ರೀಮತಿ ಗೌರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆಂಟನಿ ಬ್ಯಾಪ್ಟಿಸ್ಟ್ ಕುಟಿನ್ಹೊ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕ ನಾಗರತ್ನ, ರತಿ, ಕು|ಭಾರತಿ, ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತರಾದ ಪ್ರತಿಮಾ, ಶ್ರೀ ಕುಮಾರ್, ಶ್ರೀ ಪ್ರಸನ್ನ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜಶ್ರೀ ಬಿ. ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಗಣೇಶ್ ನಿರೂಪಿಸಿದರು.

Related posts

Leave a Reply