Header Ads
Breaking News

ಬಿಸಿಲಿನ ಬೇಗೆಯಲ್ಲಿ ಕರಟಿ ಹೋಗುತ್ತಿದೆ ’ರೈತ’ನ ಬದುಕು

ಒಂದೆಡೆ ವಿಪರೀತವಾದ ಬಿಸಿಲು, ಇನ್ನೊಂದೆಡೆ ಬಿಸಿಲಿನ ಬೇಗೆಗೆ ಕರಟಿ ಹೋದ ಅಡಿಕೆ ಮರಗಳು, ಮತ್ತೊಂದೆಡೆ ಮುಂದೇನಾಗುತ್ತೋ ಎಂಬ ನೋವಿನಿಂದ ದಿನ ದೂಡ್ತಾ ಇರೋ ರೈತ.. ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ಎಲ್ಲಿ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ..

ಹೌದು.. ಪುತ್ತೂರಿನಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತವಾಗಿ ಕಂಡು ಬರುತ್ತಿರುವ ಸುಡುಬಿಸಿಲಿನ ತಾಪ ತಡೆಯಲಾಗದೆ ಅಡಿಕೆ ಮರಗಳು ಕರಟಿ ಹೋಗಲಾರಂಭಿಸಿದೆ. ಮಳೆಗಾಲದಲ್ಲಿ ಎಡಬಿಡದೆ ಸುರಿದ ವಿಪರೀತ ಮಳೆಯಿಂದಾಗಿ ಅಡಿಕೆ ಫಸಲಿಗೆ ಕೊಳೆರೋಗ ಭಾದಿಸಿ ಕಂಗೆಟ್ಟಿದ್ದ ಕೃಷಿಕರ ಪಾಲಿಗೆ ಈ ಬಿಸಿಲ ಧಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇದೇ ಸ್ಥಿತಿ ಮೇ ತಿಂಗಳ ಕೊನೆತನಕ ಮುಂದುವರಿದಲ್ಲಿ ಅಡಿಕೆ ಮರಗಳ ಜತೆ ಜಿಲ್ಲೆಯ ಕೃಷಿಕರ ಬದುಕು ಕರಟಿ ಹೋಗಬಹುದೆಂಬ ಆತಂಕ ಎದುರಾಗಿದೆ.

ಇನ್ನು ಹಲವಾರು ತೋಟಗಳಲ್ಲಿ ಅಡಿಕೆ ಮರದ ಸೋಗೆಗಳು ಸುಟ್ಟು ಜೋತು ಬೀಳಲಾರಂಭಿಸಿದ್ದು, ಫಸಲು ನೀಡಬೇಕಾಗಿದ್ದ ಹಿಂಗಾರಗಳು ಕರಟಿ ಹೋಗಿವೆ. ಮುಂದೆ ಮರಗಳು ಜೀವಂತ ಉಳಿದರೂ ಫಸಲು ನೀಡದ ಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಸಮೀಕ್ಷೆಯ ಪ್ರಕಾರ ಶೇ.60ಕ್ಕೂ ಅಧಿಕ ಅಡಿಕೆ ಫಸಲು ಕೊಳೆರೋಗದಿಂದ ನಷ್ಟವಾಗಿತ್ತು. ಇದೀಗ ಮತ್ತೆ ಕಾಡಲಾರಂಭಿಸಿರುವ ಬಿಸಿಲ ಧಗೆಯಿಂದ ಅಡಿಕೆ ಮರಗಳೇ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅಡಿಕೆಯ ಜತೆಗೆ ಉಪ ಬೆಳೆಗಳಾದ ಬಾಳೆ,ಕರಿಮೆಣಸು,ಕೊಕ್ಕೋ ಕೃಷಿಯೂ ನಾಶವಾಗುತ್ತಿದೆ. ಬಿಸಿಲ ಝಳದಿಂದ ಸೃಷ್ಠಿಯಾದ ಈ ಸನ್ನಿವೇಶಗಳು ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾತ್ರವಲ್ಲದೆ ಕೃಷಿಕರು ಮುಂದೆಯೂ ಚೇತರಿಸಿಕೊಳ್ಳಲಾಗದಂತಹ ಮಾರಕ ಹೊಡೆತದ ಸೂಚನೆ ನೀಡಿದೆ.

ಈಗಾಗಲೇ ಪುತ್ತೂರು ತಾಲೂಕಿನ ಹಲವಾರು ಕಡೆಗಳಲ್ಲಿ ಅಡಿಕೆ ತೋಟಗಳು ಒಣಗಿ ಹೋಗಿವೆ. ಗ್ರಾಮಾಂತರ ಪ್ರದೇಶದ ಕೃಷಿಕರು ಅಡಿಕೆ ಕೃಷಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸತಾಯಗತಾಯ ಪ್ರಯತ್ನದಲ್ಲಿದ್ದಾರೆ. ಆದರೆ ಅಡಿಕೆ ಮರಗಳು ಕರಟಿ ಹೋಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ಕಡೆಗಳಲ್ಲಿನ ಕೊಳವೆಬಾವಿಗಳಲ್ಲಿಯೂ ನೀರು ಬರಿದಾಗಿದೆ. ಸರ್ಕಾರ ಕೊಳವೆ ಬಾವಿ ಕೊರೆಯಲು ಅವಕಾಶ ಕೂಡ ನೀಡುತ್ತಿಲ್ಲ. ಹಾಗಾಗಿ ನೀರಿಲ್ಲದ ಪ್ರದೇಶಗಳಲ್ಲಿನ ರೈತರು ಹೊಸ ಕೊಳವೆಬಾವಿ ಕೊರೆದು ಕೃಷಿ ಉಳಿಸಿಕೊಳ್ಳುವಂತೆಯೂ ಇಲ್ಲ. ಕೆಲವೊಂದು ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇದ್ದರೂ, ವಿದ್ಯುತ್ ಸಮಸ್ಯೆ ಕೃಷಿ ಉಳಿಸಿಕೊಳ್ಳುವ ರೈತರ ಪ್ರಯತ್ನಕ್ಕೆ ಅಡ್ಡಿಯಾಗಿ ಕಾಡುತ್ತಿದೆ.

ದಿನವೊಂದಕ್ಕೆ ಕೇವಲ 3-4 ಗಂಟೆ ಮಾತ್ರ ತ್ರೀಫೇಸ್ ವಿದ್ಯುತ್ ನೀಡಿದರೆ ಕೃಷಿಯನ್ನು ಉಳಿಸಿಕೊಳ್ಳುವುದಾದರೂ ಹೇಗೆ. ಬಿಸಿಲ ಧಗೆಯಿಂದ ಕಾಯ್ದ ಭೂಮಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿದರೂ ಏನೂ ಪ್ರಯೋಜನ ಆಗುತ್ತಿಲ್ಲ. ಸ್ವಲ್ಪ ಪ್ರಮಾಣದ ನೀರು ಹಾಯಿಸಿ ಸಾಯುವ ಮರವನ್ನು ಉಳಿಸಿಕೊಳ್ಳಬಹುದೇ ಹೊರತು ಫಸಲು ಪಡೆಯಲು ಸಾಧ್ಯವಿಲ್ಲ. ಸಕಾಲದಲ್ಲಿ ಮಳೆ ಬಾರದೆ ಬಿಸಿಲಿನ ತಾಪ ಹೀಗೆಯೇ ಮುಂದುವರಿದಲ್ಲಿ ಅಡಿಕೆ ಕೃಷಿಕರು ಅತಂತ್ರ ಸ್ಥಿತಿಗೆ ಒಳಗಾಗುವುದು ಖಂಡಿತಾ ಎಂದು ಕಂಗೆಟ್ಟ ಕೃಷಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *