Breaking News

ಮಂಗಳೂರು ಮಲೇರಿಯಾ ಮಾಸಾಚರಣೆ

ಉಳ್ಳಾಲ; ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗಿರದೆ, ಮಸ್ತಕಕ್ಕೂ ಕೆಲಸವನ್ನು ಕೊಡುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮನೋಸ್ಥಿತಿಯನ್ನು ಬೆಳೆಸಬೇಕಿದೆ ಎಂದು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು.ಅವರು ಸಂತ ಆಗ್ನೆಸ್ ಕಾಲೇಜು ಮಂಗಳೂರು ಇದರ ಸಮುದಾಯದತ್ತ ಆಗ್ನೆಸ್ , ಜಿಲ್ಲಾ ಪಂಚಾಯತ್ ಮಂಗಳೂರು ಇದರ ಮಲೇರಿಯಾ ಮಾಸಾಚರಣೆ-೨೦೧೭ರ ಪ್ರಯುಕ್ತ ನಡೆದ ‘ ಒಳಿತಿಗಾಗಿ ಮಲೇರಿಯಾ ಕೊನೆಗೊಳಿಸಿ’ ಕಾರ್ಯಕ್ರಮಕ್ಕೆ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಳಿಯಲ್ಲಿ ಚಾಲನೆ ನೀಡಿ ಮಾತನಾಡಿದರು.ಪರಿಸರದ ಸ್ವಚ್ಛತೆಗೆ ಹೆಚ್ಚಿನ ಗಮನವನ್ನು ಇಡುತ್ತಾ, ಕೈಲಿ ಕೆಸರಾದರೂ ಆರೋಗ್ಯದ ಮತ್ತು ಸಮಾಜದ ಹಿತದೃಷ್ಟಿಯಿಂದ ಶುಚಿತ್ವವನ್ನು ಕಾಪಾಡಬೇಕಿದೆ. ಇದನ್ನು ಮುಂದಿಟ್ಟುಕೊಂಡು ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುನ್ನೂರು, ಅಂಬ್ಲಮೊಗರು , ಹರೇಕಳ ಮತ್ತು ಸೋಮೇಶ್ವರ ಗ್ರಾ.ಪಂ ವ್ಯಾಪ್ತಿಗಳಲ್ಲಿ ವಿದ್ಯಾರ್ಥಿನಿಯರೇ ಸೇರಿಕೊಂಡು ಸ್ವಚ್ಛತಾ ಆಂದೋಲನ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ಎಂತಹ ಸಾಧನೆಯನ್ನು ಮಾಡುವಳು ಅನ್ನುವುದಕ್ಕೆ ಇಂದಿನ ಸಾಮಾಜಿಕ ಕಾರ್ಯಕ್ರಮ ಉದಾಹರಣೆಯಾಗಿದೆ. ಮುಂದೆ ಕೋಟಿ ವೃಕ್ಷ ಆಂದೋಲನದಡಿಯಲ್ಲಿ ಇನ್ನಷ್ಟು ಗಿಡಗಳನ್ನು ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ನೆಡುವವರಿದ್ದು, ಇದರ ಜತೆಗೆ ಗದ್ದೆಗಳಲ್ಲಿ ನೇಜಿ ನೆಡುವ ಕಾರ್ಯದಲ್ಲೂ ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಜೆಸ್ವೀನಾ ಎ.ಸಿ ವಹಿಸಿದ್ದರು.ಸೋಮೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಮೂನ್ನೂರು ಗ್ರಾಮಪಂಚಾಯತ್ ಅಧ್ಯಕ್ಷೆ ರೂಪಾ.ಆರ್.ಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಸುಧೇಶ್, ಮಹಿಳಾ ಮಂಡಲ ಪ್ರಧಾನ ಕಾರ್ಯದರ್ಶಿ ಆಶಾಲತಾ ಕುಶಾಲಪ್ಪ, ಅಂಗನವಾಡಿ ಕಾರ್ಯಕರ್ತೆ ಸುನೀತಾ ಗಟ್ಟಿ ಉಪಸಿತರಿದ್ದರು. ಸಮುದಾಯದತ್ತ ಆಗ್ನೇಸ್ ಇದರ ಸಂಯೋಜಕ ಚಂದ್ರಮೋಹನ್ ಮರಾಠೆ ಸ್ವಾಗತಿಸಿದರು, ಮಮತಾ ನಿರೂಪಿಸಿದರು. ಎಡಿಲೆಟ್ ಸಲ್ದಾನ ವಂದಿಸಿದರು.
ಇದೇ ಸಂದರ್ಭ ವಿದ್ಯಾರ್ಥಿನಿಯರಿಂದ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಳಿಯಿಂದ ಕುತ್ತಾರು ಸರಕಾರಿ ಶಾಲೆಯವರೆಗೆ ಮಲೇರಿಯಾ ಮಾಸಾಚರಣೆ-೨೦೧೭ ಜಾಗೃತಿ ಜಾಥಾ ನಡೆಯಿತು.ಮುನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರದ ಆವರಣದಲ್ಲಿ ವಿದ್ಯಾರ್ಥಿನಿಯರೇ ಸೇರಿಕೊಂಡು ಇಂಗು ಗುಂಡಿಯನ್ನು ತೆರೆದರು. ತಲಾ ಐವರು ವಿದ್ಯಾರ್ಥಿನಿಯರಂತೆ ಹಾರೆ, ಪಿಕ್ಕಾಸು ಹಿಡಿದು ಕಠಿಣವಾಗಿದ್ದ ಭೂಮಿಯನ್ನು ಅಗೆದು ಐದು ಇಂಗು ಗುಂಡಿಗಳನ್ನು ತೆರೆದರು. ಪಟ್ಟಣ ಪ್ರದೇಶದ ವಿದ್ಯಾರ್ಥಿನಿಯರು ಗ್ರಾಮೀಣ ಭಾಗದಲ್ಲಿ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ, ಯುವಕರನ್ನೂ ಮೀರಿಸುವ ಕೆಲಸದಲ್ಲಿ ಪಾಲ್ಗೊಂಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಇನ್ನಾದರೂ ಇಂಗು ಗುಂಡಿಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲೆದೋರುವ ನೀರಿನ ಅಭಾವ ಪರಿಹಾರವಾಗಬಹುದು ಅನ್ನುವ ಅಭಿಪ್ರಾಯ ಸ್ಥಳೀಯರಿಂದ ಮೂಡಿಬಂತು.

Related posts

Leave a Reply