
ಮಂಗಳೂರಿನ ತಣ್ಣೀರುಬಾವಿ ಅರಬ್ಬೀ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಒಂದು ಕಿ.ಮೀ. ದೂರವನ್ನು 25 ನಿಮಿಷ 16 ಸೆಕೆಂಡ್ಗಳಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ನಾಗರಾಜ್ ಕಾರ್ವಿಯವರು ದಾಖಲೆ ಮಾಡಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹರಿಯಾಣದ ಕೇಂದ್ರ ಕಚೇರಿಯಿಂದ ಪ್ರಮಾಣ ಪತ್ರ ನೀಡಿ ಅಭಿನಂದಿಸಿದ್ದಾರೆ.
ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಜುಪಟು ನಾಗರಾಜ್ ಕಾರ್ವಿಯವರು, ವಿಭಿನ್ನ ಶೈಲಿಯ ಈಜುಗೆ ದೇಶದ ವಿವಿಧ ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ದಾಖಲೆ ಮಾಡಿದ ನಂತರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರೇ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದು ಸಂತೋಷ ನೀಡಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಹರಿಯಾಣದ ಕೇಂದ್ರ ಕಚೇರಿಯಿಂದ ಪ್ರಮಾಣ ಪತ್ರ ಬಂದಿದೆ. ಪದ್ಮಾಸನ ಭಂಗಿಯಲ್ಲಿ ಈಜಿದ್ದು ಅತ್ಯಂತ ವೇಗದ ಈಜು ಎಂಬುವುದಾಗಿ ದಾಖಲೆಯ ಪ್ರಮಾಣಪತ್ರದಲ್ಲಿ ನಮೂದಿಸಲಾಗಿದೆ. ಪ್ರಮಾಣಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಕೈಯಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಪೂಜ್ಯರು ಪ್ರಸಾದ ರೂಪದಲ್ಲಿ ಮಂಜುನಾಥನ ಮುದ್ರೆ ಇರುವ ಬೆಳ್ಳಿಯ ಪದಕ ನೀಡಿ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಈಜು ಗುರುಗಳಾದ ಬಿ.ಕೆ. ನಾಯಕ್, ಮಂಗಳೂರು ಅಕ್ವೆಟಿಕ್ ಕ್ಲಬ್ನ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ, ಮಂಗಳಾ ಈಜು ತರಬೇತಿ ಸಂಸ್ಥೆಯ ಮುಖ್ಯ ತರಬೇತುದಾರರಾದ ಶಿವಾನಂದ್ ಗಟ್ಟಿ, ಉದ್ಯಮಿ ರವಿ ಪೂಜಾರಿ, ಅಶೋಕ್ ದೇವಾಡಿಗ, ಪೂಜಿತ್ ಉಪಸ್ಥಿತರಿದ್ದರು.