Header Ads
Header Ads
Breaking News

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀಡಿ ಕಾರ್ಮಿಕರಿಂದ ಪ್ರತಿಭಟನೆ

ಪುತ್ತೂರು: ಕಳೆದ ಮೂರು ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕಂಪನಿಗಳು ನೀಡಲು ಬಾಕಿ ಇರುವ ತುಟ್ಟಿ ಭತ್ತೆಯನ್ನು ತಕ್ಷಣ ನೀಡಬೇಕು ಮತ್ತು ನಿಗದಿತ ಕನಿಷ್ಠ ಕೂಲಿಯಾದ 220.52 ರೂಪಾಯಿಗಳನ್ನು ತಕ್ಷಣದಿಂದ ಜಾರಿಯಾಗುವಂತೆ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್‌ಫ್ರೆಡ್ ಡಿಸೋಜ ಹೇಳಿದರು.ಪುತ್ತೂರು ಮಿನಿ ವಿಧಾನಸೌಧದ ಎದುರು ಸೋಮವಾರ ಜಿಲ್ಲಾ ಬೀಡಿ ಕಾರ್ಮಿಕರ ಒಕ್ಕೂಟದ ಆಶ್ರಯದಲ್ಲಿ ನಡೆದ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆರ್ಥಿಕ ಪುನಶ್ಚೇತನ ಉಂಟಾಗಿದ್ದೇ ಬೀಡಿ ಉದ್ಯಮದಿಂದಾಗಿ. ಕಳೆದ ಮೂರು ವರ್ಷಗಳಿಂದ ತುಟ್ಟಿ ಭತ್ಯೆ ನೀಡದೆ ಬಾಕಿ ಇರಿಸಿಕೊಂಡಿದ್ದಾರೆ. ಒಂದು ಸಾವಿರ ಬೀಡಿಗೆ 220.52 ರೂಪಾಯಿ ನೀಡಬೇಕೆಂದಿದ್ದರೂ ಈಗಲೂ ಕೇವಲ 150 ರೂಪಾಯಿ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ಉಗ್ರ ಹೋರಾಟ ಅತ್ಯಂತ ಅನಿವಾರ್ಯ ಎಂದವರು ನುಡಿದರು.ಮಾರ್ಕ್ಸ್‌ವಾದಿ ಜನಾಂದೋಲನದ ನಾಯಕ, ಬೆಳ್ತಂಗಡಿಯ ನ್ಯಾಯವಾದಿ ಬಿ.ಎಂ. ಭಟ್ ಮಾತನಾಡಿ, ಪಕ್ಕದ ಕೇರಳದಿಂದ ಬೀಡಿ ಉದ್ಯಮ ನಮ್ಮ ಜಿಲ್ಲೆಗೆ ಕಾಲಿಟ್ಟಿತು. ಕೇರಳದಲ್ಲಿ ವ್ಯವಸ್ಥಿತವಾಗಿ ಕಾರ್ಖಾನೆಗಳಲ್ಲಿ ಬೀಡಿ ಕಟ್ಟುವ ಉದ್ಯಮ ನಡೆಯುತ್ತಿತ್ತು. ಗುತ್ತಿಗೆದಾರಿ ವ್ಯವಸ್ಥೆಯಿಂದಾಗಿ ಬೀಡಿ ಕಾರ್ಮಿಕರ ಸಂಖ್ಯೆ ವೃದ್ಧಿಯಾದರೂ, ಸವಲತ್ತು ನೀಡುವಲ್ಲಿ ಹಿಂದೆ ಸರಿಯತ್ತಾ ಬರಲಾಯಿತು.

ಮುಂದಿನ ದಿನಗಳಲ್ಲಿ ನಮಗೆ ಅಂತಿಮ ನ್ಯಾಯ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದರು.ಶ್ಯಾಮರಾಜ್ ಪಟ್ರಮ್ ಮತ್ತು ತಂಡದವರು ಕ್ರಾಂತಿ ಗೀತೆ ಹಾಡಿದರು. ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಗುಡ್ಡಪ್ಪ ಗೌಡ, ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಪದಾಧಿಕಾರಿಗಳು, ಕಾರ್ಮಿಕ ಮುಖಂಡರಾದ ಜಯರಾಮ್, ಕೇಶವ ಗೌಡ, ನೆಬಿಸಾ, ಈಶ್ವರಿ, ಲೋಕೇಶ್, ಜಯಶ್ರೀ, ಪುಷ್ಪಾ, ರಾಮಚಂದ್ರ, ಇಂದಿರಾ, ಸುಜಾತ ಹೆಗ್ಡೆ, ದೇವಕಿ, ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು. ನೂರಾರು ಬೀಡಿ ಕಾರ್ಮಿಕರು ಸಭೆಗೂ ಮುನ್ನ ನಗರದಲ್ಲಿ ಮೆರವಣಿಗೆ ನಡೆಸಿದರು.

Related posts

Leave a Reply