Header Ads
Breaking News

ವ್ಯಾಪಕ ಚರ್ಚೆಗೆ ಕಾರಣವಾದ ಪಂಪ್ವೆಲ್ ಮೇಲ್ಸೇತುವೆ : ಉದ್ಘಾಟನೆಗೊಂಡ ಒಂದೇ ವಾರದಲ್ಲಿ ಅಪಘಾತ

ಪಂಪ್‍ವೆಲ್ ಫ್ಲೈಓವರ್ ಸಂಚಾರಕ್ಕೆ ಮುಕ್ತಗೊಂಡು ವಾರ ಕಳೆಯುವುದರೊಳಗೆ ರಸ್ತೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳಲು 10 ವರ್ಷಗಳ ಕಾಲ ತೆಗೆದುಕೊಂಡ ಈ ಫೈಓವರ್ ಉದ್ಘಾಟನೆಗೊಂಡು ಒಂದು ವಾರ ಆಗುವಷ್ಟರಲ್ಲಿ ಅಪಘಾತ ಸಂಭವಿಸಿರುವ ಬಗ್ಗೆ ವಿವಿಧ ಆರೋಪಗಳು ಕೇಳಿ ಬರುತ್ತಿವೆ.

ಪಂಪ್‍ವೆಲ್ ಜಂಕ್ಷನ್‍ನಲ್ಲಿ ನಿರ್ಮಾಣಗೊಂಡಿರುವ ಫ್ಲೆ ಓವರ್ ಸೇತುವೆಯಿಂದ ಉಜೊರ್ಪಿಡಿ ಅಂಡರ್ ಪಾಸ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮತಟ್ಟಾಗಿಲ್ಲ, ಅದು ತಗ್ಗಾಗಿದೆ ಮಾತ್ರವಲ್ಲದೆ ಅಲ್ಲಿ ತಿರುವು ಕೂಡ ಇದೆ. ದಕ್ಷಿಣ ದಿಕ್ಕಿನ ಉಜೊರ್ಪಿಡಿಯಲ್ಲಿ ಮತ್ತು ಉತ್ತರ ದಿಕ್ಕಿನಲ್ಲಿ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಬಳಿಯಿಂದ ಆಚೆಗೆ ಎತ್ತರ ಪ್ರದೇಶ ಇದ್ದು, ಈ ಎತ್ತರದ ಭಾಗದಿಂದ ವಾಹನಗಳು ವೇಗವಾಗಿ ಬರುವುದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಕಾರಣ ಆಗುತ್ತದೆ. ಫ್ಲೈಓವರ್‍ನ್ನು ಕೊನೆಯ ಹಂತದಲ್ಲಿ ಅವಸರವಸರವಾಗಿ ನಿರ್ಮಾಣ ಮಾಡಿರುವುದರಿಂದ ಮಳೆಗಾಲದಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗುತ್ತಿದೆ.

ಶನಿವಾರ ಸಂಜೆ ಈ ಫ್ಲೈಓವರ್ ಮೇಲೆ ಸಂಭವಿಸಿದ ಅಪಘಾತದಲ್ಲಿ ನಂತೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಆಲ್ಟೊ ಕಾರು ಚಾಲಕನ ನಿಯಂತ್ರಣ ತಪ್ಪಿ ಬಲಗಡೆ ಇದ್ದ ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯಲ್ಲಿ ಉಜೊರ್ಪಿಡಿಯಿಂದ ನಂತೂರು ಕಡೆ ಸಂಚರಿಸುತ್ತಿದ್ದ ಡಸ್ಟರ್ ಕಾರಿಗೆ ಢಿಕ್ಕಿ ಹೊಡೆದು ಬಳಿಕ ಪಲ್ಟಿ ಹೊಡೆದು ಸರ್ವಿಸ್ ರಸ್ತೆಗೆ ಬಿದ್ದಿತ್ತು. ಈ ಘಟನೆಯಲ್ಲಿ ಡಸ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.

ಈ ಅಪಘಾತಕ್ಕೆ ರಸ್ತೆಯ ಸಂರಚನೆ ಕಾರಣವೇ ಅಥವಾ ಆಲ್ಟೋ ಕಾರಿನ ಚಾಲಕನ ಅಜಾಗ್ರತೆ ಮತ್ತು ಅತಿ ವೇಗದ ಚಾಲನೆ ಕಾರಣವೇ ಎನ್ನುವುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದೆ.
ಆದರೆ ಈಗ ಕೇಳಿ ಬರುತ್ತಿರುವ ಬಹುತೇಕ ಆರೋಪಗಳು ರಸ್ತೆ ಕಾಮಗಾರಿಯ ಸ್ವರೂಪದ ಕಡೆಗೆ ಬೆಟ್ಟು ಮಾಡುತ್ತಿವೆ. ಈ ರಸ್ತೆಯಲ್ಲಿ ದಿನ ನಿತ್ಯ ವಾಹನ ಚಲಾಯಿಸಿಕೊಂಡು ಹೋಗುತ್ತಿರುವ ಚಾಲಕರು ಕೂಡ ರಸ್ತೆಯ ತಾಂತ್ರಿಕ ಸ್ವರೂಪವನ್ನು ದೂರುತ್ತಿದ್ದಾರೆ.

Related posts

Leave a Reply

Your email address will not be published. Required fields are marked *