Header Ads
Header Ads
Breaking News

ಶಿರಾಡಿಘಾಟ್ ಮೂಲಕ ಘನವಾಹನಗಳ ಓಡಾಟಕ್ಕೆ ದೊರಕಿಲ್ಲ ಅನುಮತಿ

 ದುರಸ್ತಿ ಕಾರ್ಯ ಆರಂಭವಾದಾಗಿನಿಂದ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿರುವ ಶಿರಾಡಿ ಘಾಟ್ ಇದೀಗ ಮತ್ತೆ ತಲೆನೋವು ತಂದೊಡ್ಡಿದೆ. ಕಳೆದ ಮಳೆಗಾಲದ ಅವಧಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದ ಶಿರಾಡಿ ಘಾಟ್ ಮೂಲಕ ಈಗಾಗಲೇ ಲಘು ವಾಹನಗಳಿಗೆ ಅನುಮತಿ ನೀಡಲಾಗಿದೆ. ಆದರೆ ಘನ ವಾಹನಗಳ ಓಡಾಟಕ್ಕೆ ಇನ್ನೂ ಅನುಮತಿ ದೊರೆತಿಲ್ಲ. ಈ ನಡುವೆ ಶಿರಾಡಿ ಘಾಟ್‌ನಲ್ಲಿ ನ.೧೨ರಿಂದ ಘನ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ ಎನ್ನುವ ಜಿಲ್ಲಾಧಿಕಾರಿಗಳ ಹೇಳಿಕೆ ಹಿನ್ನೆಲೆಯಲ್ಲಿ ಶಿರಾಡಿ ಮೂಲಕ ಆಗಮಿಸಿದ್ದ ವಾಹನಗಳ ಚಾಲಕರು ಆದೇಶ ಇನ್ನೂ ಕೈತಲುಪಿಲ್ಲ ಎನ್ನುವ ಅಧಿಕಾರಿಗಳ ಹೇಳಿಕೆಯ ಹಿನ್ನೆಲೆಯಲ್ಲಿ ಕಂಗಾಲಾಗಿವೆ.

 ಶಿರಾಡಿ ಘಾಟಿ ರಸ್ತೆಯಲ್ಲಿ ನ.12ರಿಂದ ಎಲ್ಲಾ ಘನವಾಹನಗಳಿಗೂ ಸಂಚಾರ ಕಲ್ಪಿಸಲಾಗುವುದು ಎಂದು ದ.ಕ. ಜಿಲ್ಲೆ ಮತ್ತು ಹಾಸನ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಹಾಸನ ಸಕಲೇಶಪುರ ಕಡೆಗಳಿಂದ ಮತ್ತು ಮಂಗಳೂರು ಕಡೆಗಳಿಂದ ಘನವಾಹನಗಳಾದ ಲಾರಿ, ಟ್ಯಾಂಕರ್, ಮುಂತಾದ ವಾಹನಗಳು ಗುಂಡ್ಯದವರೆಗೆ ಸಾಗಿ ಬಂದಿದ್ದವು. ಸಂಜೆವರೆಗೂ ಸ್ಪಷ್ಟ ಆದೇಶ ದ.ಕ. ಜಿಲ್ಲಾಧಿಕಾರಿ ಕಛೇರಿಯಿಂದ ಬಾರದ ಕಾರಣ ಗುಂಡ್ಯದಲ್ಲೇ ಬೀಡುಬಿಟ್ಟಿರುವ ಮತ್ತು ಕೆಲವೊಂದು ಭಾರೀ ವಾಹನಗಳು ಸಕಲೇಶಪುರದ ಕಡೆಗೇ ಮರಳಿ ಹೋಗಿವೆ.

 ಕಳೆದೊಂದು ವಾರದ ಹಿಂದೆ ಮಾಧ್ಯಮಗಳಲ್ಲಿ ಬಂದ ಸುದ್ದಿಗಳ ಪ್ರಕಾರ ನ.೧೨ ರಂದು ಶಿರಾಡಿ ಘಾಟಿ ಮೂಲಕ ಘನವಾಹನಗಳೂ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತೆನ್ನುವುದು ಈಗ ಘನವಾಹನಗಳ ಚಾಲಕರ ವಾದವಾಗಿದ್ದು , ಸ್ಥಳೀಯ ಸಾರ್ವಜನಿಕರೂ ಈ ಅನಿಶ್ಚಿತತೆಯ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವಂತಾಗಿದೆ. ಸೋಮವಾರದಂದು ಸಕಲೇಶಪುರದ ಕಡೆಯಿಂದ ಹಲವಾರು ಗ್ಯಾಸ್ ಲಾರಿಗಳು ಮತ್ತು ಗ್ರಾನೈಟ್ ಮತ್ತಿತರ ಲೋಡುಗಳುಳ್ಳ ಲಾರಿಗಳು ಬೆಳಗ್ಗಿನಿಂದಲೇ ಮಾರನಹಳ್ಳಿಯ ಗೇಟ್ ಮೂಲಕ ಗುಂಡ್ಯ ಕಡೆಗೆ ಧಾವಿಸಿ ಬಂದಿದ್ದವು. ಟನ್ ಗಟ್ಟಳೆ ಭಾರವನ್ನು ಹೊತ್ತ ಲಾರಿಗಳು ಶಿರಾಡಿ ಘಾಟಿ ಯ ಮೂಲಕವೇ ಇಳಿದು ಬಂದಿದ್ದರೂ ಗುಂಡ್ಯದಲ್ಲಿ ಹಾಕಿರುವ ಗೇಟ್ ನಲ್ಲಿ ತಡೆಹಿಡಿಯಲ್ಪಟ್ಟಿದೆ. ದ.ಕ. ಜಿಲ್ಲಾಧಿಕಾರಿಗಳಿಂದ ಘನ ವಾಹನಗಳ ಸಂಚಾರದ ಬಗ್ಗೆ ಯಾವುದೇ ಸ್ಪಷ್ಟವಾದ ಆದೇಶ ಪೊಲೀಸ್ ಇಲಾಖೆಗೆ ಸೋಮವಾರವೂ ತಲಪಿಲ್ಲವಾದುದರಿಂದ ಗುಂಡ್ಯ ಗೇಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ್ಪಿನಂಗಡಿ ಪೋಲೀಸರು ಮೇಲ್ಗಡೆಯಿಂದ ಬಂದ ಲಾರಿಗಳನ್ನೂ ಈ ಕಡೆ ಬರಲು ಬಿಟ್ಟಿಲ್ಲ.

 ಜಿಲ್ಲೆಗೆ ಸಂಪರ್ಕಕ್ಕಿರುವ ರಸ್ತೆಗಳೆಲ್ಲ ಕೆಟ್ಟು ಹೋಗಿದ್ದು ಸಂಚಾರಕ್ಕೆ ಸರಿಯಾದ ಮಾರ್ಗಗಳಿಲ್ಲದೇ ಲಕ್ಷಗಟ್ಟಳೆ ಸಾಲಮಾಡಿರುವ ನಮ್ಮ ಬವಣೆ ಯಾರಿಗೂ ಬೇಡದಂತಾಗಿದೆ. ದಿನಬಳಕೆಯ ಅಗತ್ಯ ವಸ್ತುಗಳನ್ನು ನಾವು ಸರಬರಾಜು ಮಾಡಲು ಮಾಡಿಕೊಂಡಿರುವ ಒಪ್ಪಂದದಂತೆ ಹಿಂದೆ ನಿಗದಿ ಪಡಿಸಲಾಗಿದ್ದ ಬಾಡಿಗೆಯ ದರದಲ್ಲೇ ಈಗ ನೂರಾರು ಕಿ.ಮೀ. ಅಧಿಕ ಸುತ್ತುಬಳಸಿ ಸಂಪೂರ್ಣ ನಷ್ಟದಲ್ಲಿಯೇ ಸರಕು ಸಾಗಾಟ ಮಾಡುತ್ತಿದ್ದೇವೆ. ಕಳೆದ ೫ ತಿಂಗಳುಗಳಿಂದ ಸಂಚಾರ ತಡೆಹಿಡಿದಿದ್ದರೂ ಈ ವರೆಗೂ ಈ ರಸ್ತೆ ಕುಸಿತವುಂಟಾದ ಯಾವೊಂದು ಕಡೆಯೂ ಕಾಮಗಾರಿಯನ್ನೇ ಆರಂಭಿಸದೇ ನಮ್ಮನ್ನು ವೃಥಾ ದೂರದ ಹಾದಿಯಲ್ಲಿ ಅಲೆದಾಟ ಮಾಡಿಸಿದಂತಾಗಿದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ ವಾಹನಗಳ ಚಾಲಕರು.
 ಶಿರಾಡಿ ಘಾಟಿ ರಸ್ತೆಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಮಳೆಗಾಲದಲ್ಲಿ ಕುಸಿತವುಂಟಾದ ಕಡೆಗಳಲ್ಲಿ ಕಳೆದ ೪ ತಿಂಗಳಿನಿಂದ ಯಾವುದೇ ಕಾಮಗಾರಿಯನ್ನು ನಡೆಸದೇ ಇರುವುದು ಸರಕಾರದ,ಹೆದ್ದಾರಿ ಅಧಿಕಾರಿಗಳ, ನಮ್ಮ ಜನಪ್ರತಿನಿಧಿಗಳೆಲ್ಲರ ಬೇಜಾವಬ್ದಾರಿ ನಡೆಯಾಗಿದೆ. ಅಗಸ್ಟ್ ತಿಂಗಳಾರಂಭದಿಂದಲಾದರೂ ತೀವ್ರಗತಿಯಲ್ಲಿ ಈ ಕುಸಿತವುಂಟಾದಲ್ಲಿ ತಡೆಗೋಡೆಯನ್ನು ರಚಿಸಲು ಕಾಮಗಾರಿ ಆರಂಭಿಸಿದ್ದರೆ ಇದೀಗ ಪೂರ್ತಿಯಾಗುತ್ತಿತ್ತು. ನಮ್ಮ ಜಿಲ್ಲೆಯ ಜನ ಜೀವನದ ಮೇಲೆ ಅಗತ್ಯದ ವಸ್ತುಗಳ ಸರಬರಾಜಿಗೆ ಇಷ್ಟೆಲ್ಲಾ ತೊಂದರೆಯಾಗುತ್ತಿದ್ದರೂ ನಮ್ಮ ಜಿಲ್ಲೆಯ ಸಂಬಂದಪಟ್ಟ ಜನಪ್ರತಿನಿಧಿಗಳೆಲ್ಲರೂ ಮೌನಿಯಾಗಿದ್ದಾರೆನ್ನುವುದೇ ಸಂಕಟದ ವಿಷಯವಾಗಿದೆ ಎನ್ನುವುದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರು ಕಿಶೋರ್ ಕುಮಾರ್ ಶಿರಾಡಿ ಅವರ ಮಾತು.

ಒಟ್ಟಿನಲ್ಲಿ ಜಿಲ್ಲಾಡಳಿತಗಳ ನಡುವಿನ ಗೊಂದಲದಿಂದಾಗಿ ವಾಹನ ಚಾಲಕರು ಸಹಿತ ಪ್ರಯಾಣಿಕರು ಪರದಾಡುತ್ತಿದ್ದು, ಇನ್ನಾದರೂ ಜಿಲ್ಲಾಡಳಿತಗಳು ಎಚ್ಚೆತ್ತುಕೊಳ್ಳಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Related posts

Leave a Reply