Header Ads
Breaking News

ಸಿದ್ಧಕಟ್ಟೆ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಸಂಪನ್ನ

ಬಂಟ್ವಾಳ : ಸಿದ್ಧಕಟ್ಟೆ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವರ್ಷಾವಧಿ ಮಹೋತ್ಸವ ವಿಶಿಷ್ಠವಾಗಿ ಮೇಳೈಸುವುದರೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.

ಶ್ರೀ ಕ್ಷೇತ್ರ ಪೂಂಜ ಇದರ ಆಸ್ರಣ್ಣ ಪ್ರಕಾಶ್ ಆಚಾರ್ಯ ಅವರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಕುಡುಬಿ ಸಮುದಾಯದವರು ಸಂಪ್ರದಾಯ ಪ್ರಕಾರ ಬೆಳಗ್ಗೆಯಿಂದ ಸಂಜೆವರೆಗೆ ದೇವಸ್ಥಾನದಲ್ಲಿ ಕುಡುಬಿಗಳ ವಿಶಿಷ್ಠ ಮರಾಠಿ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಹಾಗೂ ಪುರಾಣ ಕಥೆಗಳನ್ನು ಹಾಡುತ್ತಾ ನೃತ್ಯ ಮಾಡಿದರು.

ತಲೆಗೆ ರುಮಾಲು (ಕೆಲವರು ಪೇಟ ಕಟ್ಟುತ್ತಾರೆ), ಅಬ್ಬಲ್ಲಿಗೆ ಹೂವಿನ ಮಾಲೆ, ಮಲ್ಲಿಗೆ ಹಾಕಿಕೊಂಡು ಮಣ್ಣಿನಿಂದ ತಯಾರಿಸಿದ ವಿಶೇಷ ವಾದ್ಯ ಗುಮ್ಮಟೆಯನ್ನು ಬಡಿಯುತ್ತಾ ನೃತ್ಯ ಪ್ರದರ್ಶಿಸಿದರು. ರಾಮ-ಸೀತೆ, ಹುಲಿ,ಕರಡಿ, ಸಿಂಹ, ಹಂದಿ ಭೇಟೆ ವೇಷಗಳ ನೃತ್ಯ ಪ್ರದರ್ಶನ, ವಿವಿಧ ತಂಡದವರ ಗುಮ್ಮಟೆ ಮತ್ತು ಕೋಲಾಟ ಪ್ರದರ್ಶನ ನಡೆಯಿತು. ಇದರಲ್ಲಿ ಶ್ರೀ ರಾಮ ಸೀತಾ ಸ್ವಯಂವರ ಹಾಗೂ ಕೋಲಾಟದಲ್ಲಿ ಸೇತುವೆ ಕಟ್ಟುವುದು ವಿಶಿಷ್ಠವಾಗಿತ್ತು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಓಕೋಳಿ ಅಗ್ನಿಸೇವೆಯೊಂದಿಗೆ ಮಂಗಳ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು, ಶ್ರಮಿಕ ಸಮಾಜದ ಕಡುಬಿ ಸಮುದಾಯದವರು ಹೋಳಿಯನ್ನು ಸಮಾಜದ ಸಂಘಟನಾತ್ಮಕವಾದ ಧಾರ್ಮಿಕ ಕ್ರಿಯೆಯನ್ನಾಗಿ ಪರಿವರ್ತಿಸಿಕೊಂಡು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಗುರಿಕಾರ ಪರಂಪರೆಯೊಂದಿಗೆ ತಮ್ಮೊಳಗಿರುವ ದ್ವೇಷಾಸೂಯೆಗಳನ್ನು ಮರೆತು ಒಂದಾಗಿರುವ ವ್ಯವಸ್ಥೆ ಈ ಹೋಳಿ ಹಬ್ಬದಲ್ಲಿದೆ. ಧಾರ್ಮಿಕತೆಯ ಹೆಸರಲ್ಲಿ ಆಚರಿಸಿಕೊಂಡು ಬರುತ್ತಿರುವ ಪರಂಪರೆಯನ್ನು ಉಳಿಸಿ ಬೆಳೆಸಿದಲ್ಲಿ ನಮ್ಮ ಸಂಸ್ಕೃತಿ ಉಳಿದೀತು ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವಂತೆ ವಿನಂತಿಸಿದರು.

ಈ ಸಂದರ್ಭ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ, ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಚಂದ್ರಪ್ರಕಾಶ ಶೆಟ್ಟಿ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಪ್ರಮುಖರಾದ ಬೇಬಿ ಕುಂದರ್, ಜಗದೀಶ ಕೊಯಿಲ, ದಿನೇಶ್ ಸುಂದರ ಶಾಂತಿ, ಗುಲಾಬಿ ಶೆಟ್ಟಿ, ಗೋಪಾಲ ಪೂಜಾರಿ, ಶಿವಾನಂದ ರೈ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಗುರಿಕಾರರರಾದ ಗೊಪಾಲ ಗೌಡ, ಓಬಯ್ಯ ಗೌಡ ಕುಕ್ಕೇಡಿ ಮತ್ತಿತರರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *