Breaking News

ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 37ನೇ ಸ್ಥಾನ ಪಡೆದ ನವೀನ್ ಭಟ್

ಬಂಟ್ವಾಳ: ಎಲ್ಲ ವೃತ್ತಿಗಳಲ್ಲಿ ಅಭದ್ರತೆ ಇದೆ. ಆದರೆ ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯಬೇಕು ಎಂದು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ೩೭ನೇ ಸ್ಥಾನ ಪಡೆದ ಬಂಟ್ವಾಳದ ನವೀನ್ ಭಟ್ ಹೇಳಿದ್ದಾರೆ.
ಸಿವಿಲ್ ಸರ್ವೀಸ್ ಪರೀಕ್ಷೆ ತೇರ್ಗಡೆ ಹೊಂದಿದ ಬಳಿಕ ಬೆಂಗಳೂರಿನಿಂದ ಆಗಮಿಸಿದ ನವೀನ್ ಭಟ್, ತನ್ನ ಬಂಟ್ವಾಳದ ಮನೆಗೆ ಬಂದ ಬಳಿಕ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿ, ಪರೀಕ್ಷೆಯ ಅನುಭವಗಳನ್ನು ಹಂಚಿಕೊಂಡರು.
ನವೀನ್ ಭಟ್ ಅವರು ಬಂಟ್ವಾಳದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್ ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರ. ವೈದ್ಯನಾಗುವುದೂ ಜನಸೇವೆಗೆ. ಐ‌ಎ‌ಎಸ್ ಅಧಿಕಾರಿಯಾಗುವುದೂ ಜನಸೇವೆಗೆ. ಅವುಗಳಲ್ಲಿ ಸಿವಿಲ್ ಸರ್ವೀಸ್ ಗೆ ಸೇರಿದರೆ ಹೆಚ್ಚು ಜನರ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ಇದನ್ನು ಆಯ್ಕೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನಸಾಮಾನ್ಯರ ನಡುವೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುವ ಅವಕಾಶ ದೊರಕಿತು. ನನಗೆ ನನ್ನ ತಂದೆಯವರೇ ರೋಲ್ ಮಾಡೆಲ್. ಅವರು ಜನರೊಂದಿಗೆ ಸ್ಪಂದಿಸುವ ಪರಿ, ಕೆಲಸದ ಬಗ್ಗೆ ಹೊಂದಿರುವ ಶ್ರದ್ಧೆ ನನಗೆ ಸಿವಿಲ್ ಸರ್ವೀಸ್ ಕಡೆಗೆ ಹೆಚ್ಚು ಆಸಕ್ತಿ ಮೂಡುವಂತೆ ಮಾಡಿತು. ಎಂಬಿಬಿ‌ಎಸ್ ಕಲಿಕೆಗೆ ಸೇರಿದಾಗಲೇ ಇದಕ್ಕೆ ತಯಾರಿಗಳನ್ನು ಮಾಡಿಕೊಂಡೆ ಎಂದರು.
ನಾನು ಪಾಸ್ ಆಗುತ್ತೇನೆ ಎಂಬ ಆತ್ಮವಿಶ್ವಾಸ ಇರಲೇಬೇಕು. ಇದರ ಜೊತೆಗೆ ಮಾರ್ಗದರ್ಶನವೂ ಸೂಕ್ತ ಕ್ರಮದಲ್ಲಿ ದೊರಕಬೇಕು. ನಾನು ದಿನಕ್ಕೆ ಐದರಿಂದ ಆರು ಗಂಟೆ ಓದುತ್ತಿದ್ದೆ. ಇದರ ತಯಾರಿ ಮಾಡುವುದು ಎಂದರೆ ಕಣ್ರೆಪ್ಪೆ ಮುಚ್ಚದೆ ಓದುತ್ತಾ ಇರುವುದಲ್ಲ. ಸಹಜವಾಗಿಯೇ ಇದ್ದು, ವಿಷಯಗಳ ಬಗ್ಗೆ ಮನಮುಟ್ಟುವಂತೆ ಅಧ್ಯಯನ ಕೈಗೊಳ್ಳುವುದು ಹಾಗೂ ಗುಂಪು ಚರ್ಚೆಯಂಥ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಜ್ಞಾನಸಂಪಾದನೆ ಸಾಧ್ಯ ಎಂದು ತನ್ನ ಅನುಭವ ಹೇಳಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ, ಕಡು ಬಡತನ ಇಲ್ಲ. ವಿದ್ಯಾಭ್ಯಾಸ ವ್ಯವಸ್ಥೆಯೂ ಇಂಜಿನಿಯರಿಂಗ್, ಮೆಡಿಕಲ್ ಪ್ರೇರೇಪಣೆ ಒದಗಿಸುವುದರೊಂದಿಗೆ ಜನರ ಮನೋಸ್ಥಿತಿಯೂ ಸಿವಿಲ್ ಸರ್ವೀಸ್ ಕಡೆಗೆ ವಾಲುತ್ತಿಲ್ಲ ಎಂದು ಹೇಳಿದರು ನವೀನ್. ಇಲ್ಲಿ ಸಿ‌ಇಟಿ ತರಬೇತಿ ಸಹಿತ ವಿವಿಧ ಕೋಚಿಂಗ್ ಸೆಂಟರ್ ಗಳಿವೆ. ಆದರೆ ಐ‌ಎ‌ಎಸ್, ಕೆ‌ಎ‌ಎಸ್ ಕೋಚಿಂಗ್ ಸೆಂಟರ್ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಕಡಿಮೆ. ಹೀಗಾಗಿ ಇಲ್ಲಿನವರು ಸಿವಿಲ್ ಸರ್ವೀಸ್ ಕಡೆಗೆ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ನಿಯಮಿತವಾದ ಓದು, ಸಮಕಾಲೀನ ವಿದ್ಯಮಾನಗಳ ಅರಿವು, ಪ್ರತಿಯೊಂದು ವಿಷಯಗಳ ಕಡೆಗಿನ ಆಸಕ್ತಿ, ಜನಸಾಮಾನ್ಯರೊಂದಿಗೆ ಬೆರೆಯುವುದನ್ನು ನಾವು ಮಾಡಿದರೆ ಸಿವಿಲ್ ಸರ್ವೀಸ್ ಗೆ ಸೇರುವ ಆಸಕ್ತಿಯೂ ಮೂಡುತ್ತದೆ. ಆರನೇ ತರಗತಿಯಿಂದಲೇ ಈ ಕೆಲಸವನ್ನು ನಾವು ಮಾಡಬಹುದು ಎಂದು ನವೀನ್ ಸಲಹೆ ನೀಡಿದರು.
ಬಿಟಿಡಬ್ಲ್ಯುಜೂ೨

Related posts

Leave a Reply