Header Ads
Breaking News

ಹಸಿಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಾಯೋಗಿಕ ಪ್ರಯತ್ನ : ಬಂಟ್ವಾಳ ಪುರಸಭೆಯಿಂದ ವಿನೂತನ ಪ್ರಯೋಗ ಯಶಸ್ವಿ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಅಂಗಡಿ, ಮನೆಗಳಲ್ಲಿ ಸಿಗುತ್ತಿದ್ದ ತರಕಾರಿ ತ್ಯಾಜ್ಯ, ಹಸಿಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಟ್ವಾಳ ಪುರಸಭೆಯ ಪ್ರಾಯೋಗಿಕ ಪ್ರಯತ್ನ ಯಶಕಂಡಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಗೊಬ್ಬರ ಘಟಕ ಆರಂಭಿಸಿದ್ದು ಇದೀಗ ಸಾವಯವ ಗೊಬ್ಬರ ಬಳಕೆಗೆ ಸಿದ್ದಗೊಂಡಿದೆ.

ಬಂಟ್ವಾಳ ಪುರಸಭೆಯ ಕಸದ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಹಾಗೂ ಮಂಗಳೂರಿಗೆ ಸಾಗಾಟವಾಗುವ ಇಲ್ಲಿನ ಕಸದ ಹೊರೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಅವರ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸುವ ಪ್ರಯತ್ನ ಕಳೆದ ಒಂದೂವರೆ ತಿಂಗಳ ಹಿಂದೆ ಆರಂಭಗೊಂಡಿತ್ತು. ಪರಿಸರ ಎಂಜಿನಿಯರ್ ಯಾಸ್ಮೀನ್ ಹಾಗೂ ಕಿರಿಯ ಎಂಜಿನಿಯರ್ ಅವರ ಸಹಾಯಕ ಇಕ್ಬಾಲ್ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಪುರಸಭಾ ಕಾರ್ಯಲಯದ ಹಿಂಭಾಗದಲ್ಲಿಯೇ ಸಾವಯವ ಗೊಬ್ಬರ ತಯಾರಿಕೆಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡು ಪುರಸಭಾ ವ್ಯಾಪ್ತಿಯ ಅಂಗಡಿಗಳಲ್ಲಿ ಸಿಗುತ್ತಿದ್ದ ತರಕಾರಿ, ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಗೊಬ್ಬರ ತಯಾರಿಯನ್ನು ಶುರುಮಾಡಿದ್ದರು. ಈಗಾಗಲೇ ಮೂರು ಪ್ರತ್ಯೇಕ ಘಟಕಗಳನ್ನು ಮಾಡಿಕೊಂಡು ಗೊಬ್ಬರ ತಯಾರಿ ನಡೆಯುತ್ತಿದ್ದು ಈ ಪೈಕಿ ಆರಂಭದ ಘಟಕದಲ್ಲಿ ಸಾವಯವ ಗೊಬ್ಬರ ಸಿದ್ದಗೊಂಡಿದ್ದು ಪುರಸಭೆಯ ಸಾಮೂಹಿಕ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ.

ಪುರಸಭೆಯ ಈ ಪ್ರಯತ್ನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಈ ಹಿಂದೆ ಕಸದ ಸಮಸ್ಯ ವ್ಯಾಪಾಕವಾಗಿದ್ದು ಅದನ್ನು ನಿಭಾಯಿಸುವುದೇ ದೊಡ್ಡ ಸವಲಾಗಿತ್ತು. ಇದೀಗ ಪುರಸಭಾ ವ್ಯಾಪ್ತಿಯಲ್ಲಿ ಸಿಗುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಯೋಗ ಉತ್ತಮವಾಗಿದ್ದು ಇದ್ದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಶಾಸಕ ರಾಜೇಶ್ ನಾೈಕ್ ತಿಳಿಸಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಹಸಿಕಸದ ಗೊಬ್ಬರ ತಯಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಮುಖ್ಯಾಧಿಕಾರಿಯವರಿಂದ ಮಾಹಿತಿ ಪಡೆದುಕೊಂಡಿದ್ದರೆ, ಇನ್ನೂ ಅನೇಕರು ಗೊಬ್ಬರ ಖರೀದಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಸಾವಯವ ಗೊಬ್ಬರ ತಯಾರಿ ಪ್ರಯೋಗ ಯಶಸ್ಸು ಕಾಣುತ್ತಿರುವಂತೆಯೇ ಅದರ ಪಕ್ಕದಲ್ಲೇ ಎರೆಹುಳ ಗೊಬ್ಬರ ತಯಾರಿ ಘಟಕವನ್ನು ಆರಂಭಿಸಲಾಗಿದೆ. ಅದಕ್ಕೆ ಬೇಕಾದ 9 ಅಡಿ ಉದ್ದ 3.5 ಅಡಿ ಅಗಲದ ಕೃತಕ ತೊಟ್ಟಿಯನ್ನು ರಚಿಸಿ ಹಸಿಕಸ, ಹುಲ್ಲು, ತರಗೆಲೆ, ಸೆಗಣಿಯನ್ನು ತುಂಬಿಡಲಾಗಿದ್ದು ಕೆಲ ದಿನಗಳ ಬಳಿಕ ಎರೆಹುಳಗಳನ್ನು ಹಾಕಲಾಗುವುದು.

ಹಸಿ ಕಸದ ಗೊಬ್ಬರ ತೊಟ್ಟಿಗಳನ್ನು ಪುರಸಭಾ ವ್ಯಾಪ್ತಿಯ ನಾಗರಿಕರು ತಮ್ಮ ಮನೆ ವ್ಯಾಪ್ತಿಯಲ್ಲಿ ಸ್ಥಳವಕಾಶವಿದ್ದರೆ ಅಲ್ಲಿಯೇ ಆರಂಭಿಸಬಹುದು, ಇದರಿಂದ ಕಸ ವಿಲೇವಾರಿಯೂ ಸುಲಭವಾಗಿ ತ್ಯಾಜ್ಯದ ಸಮಸ್ಯೆ ಬಗೆಹರಿಯುತ್ತದೆ. ವಸತಿ ಸಂಕೀರ್ಣಗಳಲ್ಲಿ ಹಾಗೂ ಜಾಗದ ಕೊರತೆ ಇರುವ ಜನರು ಹಸಿ ಕಸವನ್ನು ಪ್ರತ್ಯೇಕವಾಗಿ ನೀಡಿದ್ದಲ್ಲಿ ಪುರಸಭೆಯೇ ಗೊಬ್ಬರ ತಯಾರಿ ಮಾಡುವುದಾಗಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿದ್ದಾರೆ.

ಕಸ ವಿಲೇವಾರಿಗೆ ಬಂಟ್ವಾಳ ಪುರಸಭೆ ಸಾಕಷ್ಟು ಕ್ರಮಗಳನ್ನು ಕೈಗೊಂಡರು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಕಸ ಎಸೆಯುವ ಅಜ್ಞಾನಿಗಳಿಗೆ ಕಡಿವಾಣ ಬಿದ್ದಿಲ್ಲ. ಲಭ್ಯವಿರುವ ವ್ಯವಸ್ಥೆಯನ್ನು ಬಳಸಿಕೊಂಡು ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಸ ವಿಲೇವಾರಿಗೆ ಹಲವಾರು ಕ್ರಮಗಳನ್ನು ಕೈಗೊಂಡರೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೆಡೆ ಕಸದ ರಾಶಿಗಳು ಕಂಡು ಬರುತ್ತಿದೆ. ಆದರೂ ದೂರುಗಳು ಬಂದ ತಕ್ಷಣವೇ ಪುರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಜನರಲ್ಲಿ ಕಸ ಎಸೆಯಬಾರದೆನ್ನುವ ಸ್ವಯಂ ಜಾಗೃತಿ ಬಾರದೆ ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಸಾಧ್ಯವಿಲ್ಲ ಎನ್ನುವುದು ಪ್ರಜ್ಞಾವಂತರ ಅನಿಸಿಕೆ

Related posts

Leave a Reply

Your email address will not be published. Required fields are marked *