Header Ads
Header Ads
Breaking News

ಮನೆತೆರವಿಗೆ ಅರಣ್ಯ ಇಲಾಖೆ ನೋಟೀಸ್ : ಬೈಂದೂರಿನ ಜಡ್ಕಲ್ ತಾರಿಕೊಡ್ಲು ನಿವಾಸಿಗಳು ಕಂಗಾಲು

ಆ ಕೇರಿಯ ಜನರು ಎರಡು-ಮೂರು ತಲೆಮಾರುಗಳಿಂದಲೂ ವಾಸವಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ವಾಸವಿರುವುದಕ್ಕೆ ಇವರು ಬೆಳೆದ ಅಡಿಕೆ, ತೆಂಗಿನ ಮರಗಳೇ ಸಾಕ್ಷಿ. ಹಿಂದೆ ಕಂದಾಯ ಭೂಮಿಯಾಗಿದ್ದು, 2003ರಲ್ಲಿ ವೈಲ್ಡ್‍ಲೈಫ್‍ಗೆ ಸೇರಿದ್ದೆ ಇಲ್ಲಿನ ನಿವಾಸಿಗಳ ತಲೆ ಮೇಲೆ ಎತ್ತಂಗಡಿಯ ತೂಗುಕತ್ತಿ ಬೀಸಲು ಕಾರಣ. ಮನೆ ತೆರವು ಮಾಡಬೇಕೆಂಬ ನೋಟೀಸ್‍ಗೆ ನಿದ್ದೆ ಇಲ್ಲದೆ ದಿನ ದೂಡುತ್ತಿವೆ ಆ ಎಂಟು ಕುಟುಂಬಗಳು. ಅಷ್ಟಕ್ಕೂ ಆ ಊರು ಯಾವುದು ಅಂತೀರಾ. ಈ ಸ್ಟೋರಿ ನೋಡಿ.ಕುಂದಾಪುರ ತಾಲೂಕು ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಮುದೂರು ತಾರಿಕೊಡ್ಲು ನಿವಾಸಿಗಳ ಮನೆತೆರವಿಗೆ ಅರಣ್ಯ ಇಲಾಖೆ ನೋಟೀಸ್ ಬಿಟ್ಟಿದ್ದು, ಇಡೀ ಕೇರಿಯಲ್ಲಿ ಮೌನ ಆವರಿಸಿದೆ. ತಾವು ಹುಟ್ಟಿ ಬೆಳೆದ, ಅಜ್ಜ ಮುತ್ತಜ್ಜ ಬಾಳಿ ಬದುಕಿದ ಭಾವನಾತ್ಮಕ ಸಂಬಂಧದ ಕೊಂಡಿ ಕಳಚಿಕೊಳ್ಳುವ ನೋವನಲ್ಲೇ ದಿನ ದೂಡುತ್ತಿದ್ದಾರೆ. ಅರಣ್ಯ ಇಲಾಖೆ ಏಕಾಏಕಿ ಜಾಗ ತೆರವು ಮಾಡುವಂತೆ ಬಂದ ನೋಟೀಸ್ ಸ್ಥಳೀಯರ ಜೀವನಾಸಕ್ತಿಯನ್ನೇ ಕಸಿದುಕೊಂಡಿದೆ. ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದರೆ ಮುಂದೇನು ಎನ್ನುವ ಉತ್ತರವಿಲ್ಲದ ಪ್ರಶ್ನೆ ಹುಟ್ಟಿಕೊಂಡಿದೆ. ಹೌದು..ತಾರಿಕೊಡ್ಲು ಪರಿಸರದಲ್ಲಿ ಆರು ಪರಿಶಿಷ್ಟ ಜಾತಿ ಹಾಗೂ ಎರಡು ಹಿಂದುಳಿದ ವರ್ಗದ ಮನೆ ಸೇರಿದಂತೆ ಒಟ್ಟು ಎಂಟು ಮನೆಗಳಿದ್ದು, ಮಕ್ಕಳು ಮರಿ ಎಲ್ಲಾ ಸೇರಿ ಐವತ್ತರಷ್ಟು ಜನ ಸಂಖ್ಯೆಯಿದೆ. ಒಬ್ಬೊಬ್ಬರಿಗೆ ಅರ್ಧ, ಮುಕ್ಕಾಲು ಎಕ್ರೆ ಜಾಗವಿದ್ದು, ಅಡಿಕೆ, ತೆಂಗು ಕೃಷಿಯಿದೆ. ಜತೆಗೆ ಕೃಷಿ ಕೂಲಿ ಕೂಡಾ ಇವರು ನೆಚ್ಚಿಕೊಂಡು ಬಂದಿದ್ದಾರೆ. ಸರ್ವೆ ನಂಬರ್ 114ರ ಭೂಮಿ ಕಂದಾಯ ಇಲಾಖೆ ಸೇರಿದ್ದು, ಹಿಂದಿನ ತಲೆ ಮಾರಿನ ಜನ ಮನೆಕಟ್ಟಿ ಎರಡು ಬೆಟ್ಟದ ನಡುವಿನ ಜಾಗದಲ್ಲಿ ಕೃಷಿ ಮಾಡಿಕೊಂಡು ಬಂದಿದ್ದರು. ನಮ್ಮನ್ನು ಎತ್ತಂಗಡಿ ಮಾಡಿದರೆ ಬೇರೆ ಎಲ್ಲೂ ವಾಸಕ್ಕೆ ಒಂದು ಇಂಚು ಜಾಗವಿಲ್ಲದಿದ್ದರಿಂದ ನಾವೆಲ್ಲಾ ಅರಣ್ಯ ಇಲಾಖೆ ಎದುರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲದೆ ಬೇರೆ ದಾರಿಯಿಲ್ಲ ಎಂದು ಸ್ಥಳೀಯರು ಅವಲತ್ತು ಕೊಂಡಿದ್ದಾರೆ.94ಸಿ, 94ಸಿಸಿ, 50, 53 ರಲ್ಲಿ ಜಿಲ್ಲೆಯಲ್ಲಿ 23 ಸಾವಿರಕ್ಕೂ ಮಿಕ್ಕಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 15 ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ. 94,94ಸಿಸಿ,50,53ರಲ್ಲಿ ಒತ್ತವರಿ ಮಾಡಿಕೊಂಡು ಮನೆಕಟ್ಟಿಕೊಂಡ ಬಡವರ ಹಾಗೂ ಜಾಗವಿಲ್ಲದವರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಜಾರಿಗೆ ತಂದಿದ್ದರೂ, ಮಂಜೂರಾದ ಜಾಗ ಸರ್ಕಾರಿ ನಿಯಮಕ್ಕೆ ವಿರುದ್ಧವಾಗಿದೆ. ರಾಜಕೀಯ ಪಕ್ಷಗಳು ಬಡವರ ಮುಂದಿಟ್ಟುಕೊಂಡು ತಾಲೂಕು ಕಚೇರಿ ಮುಂದೆ ಹೋರಾಟ ನಡೆಸಿದ್ದು, ಬಿಟ್ಟರೆ ಪ್ರಯೋಜನ ಎತ್ತಿದವರು ದೊಡ್ಡ ಹಿಡುವಳಿದಾರರು ಹಾಗೂ ಭೂ ಮಾಫಿಯಾಗಳು. ಸರ್ಕಾರ ಈಗ ಮತ್ತೊಂದು ಹೊಸ ಅವಕಾಶ ತಂದಿದ್ದು, 57 ನಮೂನೆಯಲ್ಲಿ ಜಾಗ ಮಂಜೂರಿಗೆ ಅರ್ಜಿ ಹಾಕುವುದು. ಕುಂದಾಪುರ ತಾಲೂಕಿನಲ್ಲಿ 57ರÀಲ್ಲಿ 13 ಸಾವಿರ ಅರ್ಜಿ ಬಂದಿದೆ. ಅದೆಲ್ಲಾ ಕುಮ್ಕಿ, ಕಂದಾಯ, ಡೀಮ್ಡ್ ಫಾರೆಸ್ಟ್ ಜಾಗ ಬರುತ್ತಿದೆ. ಅರ್ಜಿ ಹಾಕಿದವರು ದೊಡ್ಡ ಹಿಡುವಳಿದಾರರು ರಾಜಕೀಯ ಹಿಂಬಾಲಕರು ಎನ್ನೋದು ವಿಶೇಷ. ಒಂದು ಕಡೆ ಸರ್ಕಾರ ದೊಡ್ಡ ಹಿಡುವಳಿದಾರರ ಅನುಕೂಲಕ್ಕೆ ಬಡವರ ಹೆಸರಲ್ಲಿ ಯೋಜನೆ ರೂಪಿಸುತ್ತದೆ ಮತ್ತೊಂದು ಕಡೆ ನೂರಾರು ವರ್ಷದಿಂದ ಕೃಷಿ ಮಾಡಿ ಕೂತವರ ಒಕ್ಕಲೆಬ್ಬಿಸುತ್ತದೆ!

ಇನ್ನು ತಾರಿಕೊಡ್ಲು ನಿವಾಸಿಗಳ ಬೆನ್ನಿಗೆ ಸ್ಥಳೀಯಾಡಳಿತ ಟೊಂಕ ಕಟ್ಟಿ ನಿಂತಿದೆ. ತಾರಿಕೊಡ್ಲು ನಿವಾಸಿಗಳ ಒಕ್ಕಲೆಬ್ಬಿಸುವ ವಿಚಾರದಲ್ಲಿ ಜಡ್ಕಲ್ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆ ಆಯೋಜಿಸಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಹಾಜರಿರುವಂತೆ ಸೂಚಿಸಿ, ತಾರಿಕೊಡ್ಲು ನಿವಾಸಿಗಳ ಒಕ್ಕಲೆಬ್ಬಿಸದಂತೆ ಮನವರಿಕೆ ಮಾಡಲಾಗುತ್ತೇವೆ. ಸರ್ವೆ ನಂಬರ್ 144 ಪ್ರದೇಶ ಕಂದಾಯ ಇಲಾಖೆಗೆ ಒಳಪಟ್ಟಿದ್ದು, 2003ರಲ್ಲಿ ಕಂದಾಯ ಜಾಗ ವೈಲ್ಡ್ ಲೈಫ್‍ಗೆ ಸೇರಿಸಲಾಗಿದ್ದು, ಅದಕ್ಕಿಂತಲೂ ಹಿಂದಿನಿಂದ ವಾಸಮಾಡಿಕೊಂಡು ಕೃಷಿ ಮಾಡಿಕೊಂಡ ಜನರ ಒಕ್ಕಲೆಬ್ಬಿಸಿದರೆ ಅವರು ಎಲ್ಲಿಗೆ ಹೋಗಬೇಕು. ಅಡಕೆ, ತೆಂಗಿನ ಮರಗಳು ಇಲ್ಲಿ ಎಷ್ಟೆ ವರ್ಷಗಳಿಂದ ಜನ ವಾಸಮಾಡುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟಸಾಕ್ಷಿ ನೀಡುತ್ತಿದೆ. ವೈಲ್ಡ್ ಲೈಫ್ ಬಲತ್ಕಾರವಾಗಿ ಎತ್ತಂಗಡಿ ಮಾಡಲು ಮುಂದಾದರೆ ಕಾನೂನು ಹಾಗೂ ಹೋರಾಟದ ಮೂಲಕ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಜಡ್ಕಲ್ ಗ್ರಾ.ಪಂ ಅಧ್ಯಕ್ಷ ಅನಂತಮೂರ್ತಿ.ದೊಡ್ಡ ದೊಡ್ಡ ಹಿಡುವಳಿದಾರರ, ಉಳ್ಳವರ, ರಾಜಕೀಯ ಹಿಂಬಾಲಕರರಿಗೆ ಬೇಕಾದಷ್ಟು ಜಾಗವಿದ್ದರೂ ಅಕ್ರಮ ಸಕ್ರಮ ಹಾಗೂ ವಿವಿಧ ಯೋಜನೆಗಳಲ್ಲಿ ಸರ್ಜಾರ ಜಾಗ ಮಂಜೂರು ಮಾಡಿ ಅನುಕೂಲ ಮಾಡಿಕೊಡುತ್ತಿದ್ದು, ತಲತಲಾಂತರದಿಂದ ವಾಸಮಾಡಿಕೊಂಡು ಬಂದ ಬಡವರ ಎತ್ತಂಗಡಿ ಎಷ್ಟರ ಮಟ್ಟಿಗೆ ಸರಿ? ಇನ್ನಾದರೂ ಸಂಬಂಧಪಟ್ಟ ಇಲಾಖೆ ಗಮನಹರಿಸಿ ತಾರಿಕೊಡ್ಲು ನಿವಾಸಿಗಳ ಒಕ್ಕಲೆಬ್ಬಿಸುವ ಆದೇಶ ಹಿಂಪಡೆಯಲಿ ಎನ್ನುವುದೇ ಈ ವರದಿಯ ಆಶಯ.

Related posts

Leave a Reply

Your email address will not be published. Required fields are marked *