

ಎಲ್ಲರೂ ಬಹು ನಿರೀಕ್ಷೆಯಿರಿಸಿದ್ದ ಕೊರೊನಾ ಲಸಿಕೆ ಅಂತೂ ಮಂಗಳೂರು ತಲುಪಿದೆ. ಬೆಂಗಳೂರಿನಿಂದ ಮೈಸೂರು ಮೂಲಕ ರಸ್ತೆ ಮಾರ್ಗವಾಗಿ ಲಸಿಕೆಯನ್ನು ತರಲಾಗಿದ್ದು ಮಂಗಳೂರಿನ ಜಿಲ್ಲಾ ಔಷಧ ಉಗ್ರಾಣದಲ್ಲಿ ತಂದಿಡಲಾಗಿದೆ.
ಒಟ್ಟು 42,500 ಕೋವಿಶೀಲ್ಡ್ ಲಸಿಕೆಗಳು ಬಂದಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಹೀಗೆ ಮೂರು ಜಿಲ್ಲೆಗಳಿಗೆ ಮಂಗಳೂರಿನಿಂದ ವಿತರಣೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 24500, ಚಿಕ್ಕಮಗಳೂರು ಜಿಲ್ಲೆಗೆ 6000 ಮತ್ತು ಉಡುಪಿ ಜಿಲ್ಲೆಗೆ 12000 ಕೋವಿಶೀಲ್ಡ್ ಲಸಿಕೆಗಳ ಪೂರೈಕೆಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.
ಜನವರಿ 16 ರಂದು ದೇಶಾದ್ಯಂತ ಏಕಕಾಲದಲ್ಲಿ ಮೊದಲ ಹಂತದ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು ಅದಕ್ಕಾಗಿ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಲಸಿಕೆ ತಲುಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಮತ್ತು ವೈದ್ಯಕೀಯ ಸಿಬಂದಿಗೆ ಲಸಿಕೆ ನೀಡಲು ಸರಕಾರ ಯೋಜನೆ ಹಾಕಿದೆ. ಈಗಾಗ್ಲೇ ಲಸಿಕೆ ನೀಡುವ ಬಗೆ ಹೇಗೆ, ಅದರ ಪ್ರಕ್ರಿಯೆ ಹೇಗಿರುತ್ತೆ, ಲಸಿಕೆ ಪಡೆದವರು ಯಾವ ರೀತಿಯ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ವೈದ್ಯಕೀಯ ಸಿಬಂದಿಗೆ ತರಬೇತಿ ನೀಡಲಾಗಿದೆ. ಒಬ್ಬ ವ್ಯಕ್ತಿಗೆ ಎರಡು ಹಂತದಲ್ಲಿ ಲಸಿಕೆ ನೀಡಲಿದ್ದು ದ್ವಿತೀಯ ಹಂತದ ಪ್ರಕ್ರಿಯೆ ಜನವರಿ ಕೊನೆಯಲ್ಲಿ ನಡೆಯಲಿದೆ.