Header Ads
Breaking News

 ಅತೀ ದೊಡ್ಡ ಕ್ರೀಡಾಂಗಣಕ್ಕೆ ಸರ್ಕಾರಿ ಬಾವಿ ಗ್ರಹಣ!

ಇದು ಸರ್ಕಾರಿ ಶಾಲೆಗಳಲ್ಲೇ ಅತೀ ದೊಡ್ಡದ ಆಟದ ಮೈದಾನ. ಯೋಗ ಪ್ರದರ್ಶನ ಮೂಲಕ ಗಿನ್ನಿಸ್ ದಾಖಲೆಗೆ ಸೇರಿದ ಕ್ರೀಡಾಂಗಣಕ್ಕೆ ಇದೀಗ ಸಾರ್ವಜನಿಕ ಬಾವಿಯ ಗ್ರಹಣ ಹಿಡಿದಿದೆ. ಜನಪ್ರತಿನಿಧಿಗಳ ಬೆಂಬಲ, ಅಧಿಕಾರಿಗಳ ಸಹಾಯಹಸ್ತ ಸಿಕ್ಕರೆ ಏನೂ ಆಗುತ್ತದೆ ಎನ್ನೋದಕ್ಕೆ ಬಿಜೂರು ಶಾಲಾ ಮೈದಾನ ಸಾಕ್ಷಿ. ಜಿಲ್ಲೆಯ ಅತೀ ದೊಡ್ಡ ಕ್ರೀಡಾಂಗಣಕ್ಕೆ ಸರ್ಕಾರಿ ಬಾವಿ ಗ್ರಹಣ!.

 

ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಸೇರಿ ಪರಿಸರದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರದ ಅನುದಾನದಿಂದ ನಾಲ್ಕು ಬಾವಿ ನಿರ್ಮಾಣಗೊಂಡರೂ ಐದನೇ ಬಾವಿಗೆ ಮೈದಾನದ ಜಾಗ ಫಿಕ್ಸ್ ಮಾಡಲಾಗಿದೆ. ಶಾಲೆಯಲ್ಲಿ ಬಾವಿ ಇದ್ದರೂ ಸರ್ಕಾರದ ನಿಯಮ ಉಲ್ಲಂಘಿಸಿ, ಮತ್ತೊಂದು ತೆರೆದ ಬಾವಿ ತೆರೆಯುತ್ತಿರುವಿದೇ ವಿಶೇಷ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸರ್ವೆ ನಡೆಸದೆ ಬಾವಿ ತೋಡಿದರೆ ನೀರು ಸಿಗುತ್ತದಾ? ಎಷ್ಟು ನೀರು ಸಿಗುತ್ತದೆ? ಎಂಬ ಯಾವುದೇ ಸರ್ಟಿಫಿಕೇಟ್ ಇಲ್ಲದೆ ಬಾವಿ ತೆಗೆಯಲು ಮುಂದಾಗಿದ್ದು, ಜನರ ಉಪಯೋಗಕ್ಕಾಗಿ ಅನುದಾನವೋ ಗುತ್ತಿಗೆದಾರರ ಹಿತಾಸಕ್ತಿಗೆ ಕಾಮಗಾರಿಯೋ ಎನ್ನುವಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಜೂರು ಶಾಲೆ 1914-15ರಲ್ಲಿ ಆರಂಭವಾಗಿದ್ದು, ಶತಮಾನ ಕಂಡಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಹಾಜರಾತಿ ಏರಿಸಿಕೊಳ್ಳುತ್ತಿದ್ದು, ಪ್ರಸಕ್ತ 111 ಮಕ್ಕಳಿದ್ದಾರೆ. ಅದಲ್ಲಿ 61 ಗಂಡು 50 ಹೆಣ್ಣು ಮಕ್ಕಳಿದ್ದು, ಐದು ಜನ ಶಿಕ್ಷರಿದ್ದು, ಮುಖ್ಯಶಿಕ್ಷಕರ ಕೊರತೆಯಿದೆ. ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಆಟಕ್ಕೆ ಹೋದರೆ ಮಕ್ಕಳ ಕಾಯೋದೇ ಶಿಕ್ಷಕರ ಕೆಲಸ! ಶಾಲಾ ಎದುರಿಗಿನ ಮೈದಾನದಲ್ಲೇ ಸಾರ್ವಜನಿಕರಿಗೆ ನೀರು ಪೂರೈಕೆಗಾಗಿ ದೊಡ್ಡ ಮಟ್ಟದ ನೀರಿನ ಟ್ಯಾಂಕ್ ಇರುವುದೇ ಈ ಎಲ್ಲಾ ವೈರುಧ್ಯಕ್ಕೆ ಕಾರಣ. ನೀರಿನ ಟ್ಯಾಂಕ್ ಏರಲು ನಿರ್ಮಿಸಿದ ಏಣಿಯೇ ಮಕ್ಕಳ ಪಾಲಿಗೆ ವಿಲನ್ ಆಗಿಬಿಟ್ಟಿದೆ. ಮಕ್ಕಳ ಆಟಕ್ಕೆ ಬಿಟ್ಟ ನಂತರ ಶಿಕ್ಷಕರು ಮಕ್ಕಳು ಏಣಿ ಏರದಂತೆ ಸುತ್ತಲೂ ಕಾವಲಾಗಿ ನಿಲ್ಲುತ್ತಾರೆ. ಅದೆಷ್ಟೋ ಮಕ್ಕಳು ಏಣಿ ಏರುವ ದುಸ್ಸಾಹಸಕ್ಕೆ ಕೈಹಾಕಿ ಕೆಳಕ್ಕೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ.

ಅಂಗನವಾಡಿ ಮಕ್ಕಳು, ಒಂದು ಮತ್ತು ಎರಡನೇ ತರಗತಿ ಮಕ್ಕಳು ತಿಳಿಯದೆ ಏಣಿ ಏರಿ ಕಳೆಕ್ಕೆ ಇಳಿಯಲಾಗದೆ ಶಿಕ್ಷಕರೇ ಸುರಕ್ಷಿತವಾಗಿ ಇಳಿಸಿದ್ದೂ ಇದೆ. ಎಲ್ಲಾದರೂ ಹೆಚ್ಚು ಕಮ್ಮಿಯಾದರೆ ಶಿಕ್ಷಕರು ಹೊಣೆಯಾಗಬೇಕು. ನೀರಿನ ಟ್ಯಾಂಕ್ ನಿರ್ಮಿಸಿದ ಸಮಸ್ಯೆಯೇ ಸಾಕು ಇನ್ನು ಬಾವಿ ಮಾಡಿ ಮಕ್ಕಳು ಎಲ್ಲಾದರೂ ಓಡುತ್ತಾ ಹೋಗಿ, ಬಾವಿಗೆ ಬಿದ್ದರೆ, ಬಾವಿ ಇಣಿಕಿ ನೋಡುವ ಭರದಲ್ಲಿ ಹೆಚ್ಚು ಕಮ್ಮಿಯಾದರೆ ಹೊಣೆ ಯಾರು ಎನ್ನೋದು ಶಿಕ್ಷಕರ ಪ್ರಶ್ನೆ. ಕೊನೆ ಪಕ್ಷ ಮಕ್ಕಳು ಏಣಿ ಏರದಂತೆ ತಡೆ ನಿರ್ಮಿಸುವ ಕೆಲಸ ಕೂಡಾ ಆಗಿಲ್ಲ.
ಬಿಜೂರು ಕ್ರೀಡಾಂಗಣ ಗಿನ್ನಿಸ್ ದಾಖಲೆ ಯೋಗ ಪ್ರದರ್ಶನ ನೀಡಿದ್ದು ಬಿಜೂರಿನ ಹೆಮ್ಮೆ. ಸ್ಥಳೀಯರ ಅಭಿಪ್ರಾಯ ಕೇಳದೆ ಸರ್ವಾಧಿಕಾರಿ ನಿಟ್ಟಿನಲ್ಲಿ ಬಾವಿ ನಿರ್ಮಾಣ ಮಾಡಲು ಜನಪ್ರತಿನಿಧಿಗಳು ಮುಂದಾಗಿದ್ದು ಸ್ಥಳೀಯರು, ಹಳೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೂರು ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆದಿದ್ದು, ಜಿಲ್ಲಾ ಪಂಚಾಯಿತಿ ಪ್ರತಿನಿಧಿಯೇ ಅದೆಷ್ಟೋ ಕ್ರೀಡಾಕೂಟ ಉದ್ಘಾಟಿಸಿ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕರೆಕೊಟ್ಟವರೇ ಕ್ರೀಡಾಂಗಣದೊಳಗೆ ಬಾವಿ ತೋಡಲು ಮುಂದಾಗಿರುವುದು ದುರಂತವೇ ಸರಿ. ಇನ್ನು ಈ ಶಾಲೆಯನ್ನು ದತ್ತು ಪಡೆದು ಸಂಪೂರ್ಣ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ಮೈದಾನದಲ್ಲಿ ಬಾವಿ ತೆಗೆಯಲು ಮುಂದಾಗಿರುವುದು ಇದಕ್ಕೆ ಹಿನ್ನೆಡೆಯಾಗಿದೆ. ಕುಡಿಯುವ ನೀರಿಗೆ ನಮ್ಮ ಆಕ್ಷೇಪವೇನಿಲ್ಲ. ಶಾಲಾ ಮೈದಾನ ಬಿಟ್ಟು ಬೇರೆ ಸರ್ಕಾರಿ ಜಾಗದಲ್ಲಿ ಬಾವಿ ನಿರ್ಮಿಸಿದರೆ ನಮ್ಮ ಅಭ್ಯಂತರವಿಲ್ಲ ಎನ್ನುತ್ತಾರೆ ಬಿಜೂರು ಶಾಲಾ ಹಳೆ ವಿದ್ಯಾರ್ಥಿಗಳು.
ಕೊನೆಗೂ ಸ್ಥಳೀಯರ ಹಾಗೂ ಹಳೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಡಿಸಿದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಬಾವಿ ನಿರ್ಮಿಸುವ ಕೆಲಸ ಕೈಬಿಡಲಾಗಿದ್ದು, ಮುಂದೆಯೂ ಕೂಡ ಇಂತಹ ಯೋಜನೆಗಳನ್ನು ಜನಪ್ರತಿನಿಧಿಗಳು ಹಾಕಿಕೊಳ್ಳಬಾರದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಬಾವಿ ನಿರ್ಮಾಣ ಕೈಬಿಡುವುದರ ಜೊತೆಗೆ ಹಾಳುಬಿದ್ದ ಮೈದಾನವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲೂ ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನ ಹರಿಸಲಿ ಎನ್ನುವುದೇ ಈ ವರದಿಯ ಆಶಯ.

-ಶ್ರೀಕಾಂತ ಹೆಮ್ಮಾಡಿ ವಿ4 ನ್ಯೂಸ್ 24/7 ಕುಂದಾಪುರ

Related posts

Leave a Reply

Your email address will not be published. Required fields are marked *