Header Ads
Header Ads
Header Ads
Header Ads
Header Ads
Header Ads
Breaking News

ಅನುಷ್ಠಾನಬದ್ಧತೆಯಿಂದ ಸ್ವಚ್ಛ ಸಮಾಜ ನಿರ್ಮಾಣ : ಡಿ ಹರ್ಷೇಂದ್ರಕುಮಾರ್

ಉಜಿರೆ, ಅ.4: ಎಲ್ಲಾ ಸಾಮಾಜಿಕ ಹಾಗೂ ಶಿಕ್ಷಣ ಸಂಸ್ಥೆಗಳು ಸ್ವಚ್ಛತೆಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸಿದರೆ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜು ಗುರವಾರ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ‘ಸ್ವಚ್ಛ ಎಸ್.ಡಿ.ಎಂ ಅಭಿಯಾನ’ದ ವಿಸ್ತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್.ಡಿ.ಎಂ ಸಂಸ್ಥೆ ‘ಸ್ವಚ್ಛ ಎಸ್.ಡಿ.ಎಂ’ ಉದ್ಘೋಷದಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ವಿದ್ಯಾಸಂಸ್ಥೆಗಳೂ ಗಮನಹರಿಸಬೇಕು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತೆಯ ಕುರಿತಾದ ಜಾಗೃತಿಯನ್ನು ಮೂಡಿಸಬೇಕು ಎಂದರು.
ವಿದ್ಯಾವಂತ ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತಿನ ಅಳವಡಿಕೆಯ ಜೊತೆಗೆ, ಸ್ವಚ್ಛ ಎಂಬ ಪದದ ಅರ್ಥ ಮನದಟ್ಟಾದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುವುದು. ಇಂದಿನ ಯುವಪೀಳಿಗೆಯು ಎಚ್ಚೆತ್ತುಕೊಂಡು ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಗಿದರೆ ಗಾಂಧೀಜಿ ತತ್ವಕ್ಕೆ ಯಶಸ್ಸು ದೊರಕಿಸಿಕೊಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪರಿಸರ ಕಾಳಜಿಯ ಜೊತೆಗೆ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಆ ಮೂಲಕ ಪ್ಲಾಸ್ಟಿಕ್ ಬಳಕೆ ತಡೆಯಬೇಕಿದೆ. ಕಸವನ್ನು ಕಂಡ ಕಂಡಲ್ಲಿ ಎಸೆಯದೇ ಸುತ್ತಮುತ್ತಲಿನ ಪರಿಸರದ ರಕ್ಷಣೆಯ ಕುರಿತು ಅರಿವು ಮೂಡಿಸುವ ದೃಷ್ಟಿಕೋನದಲ್ಲಿ ‘ಸ್ವಚ್ಛ ಎಸ್.ಡಿ.ಎಂ’ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಅವರು ’ಸ್ವಚ್ಛ ಎಸ್‌ಡಿಎಂ ಅಭಿಯಾನ’ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ಸಾಂಕೇತಿಕವಾಗಿ ಕೈಪಿಡಿ ಹಂಚುವುದರ ಮೂಲಕ ಸ್ವಚ್ಛ ಅಭಿಯಾನದ ಸಂದೇಶ ಸಮಾಜದ ವಿವಿಧ ವಲಯಗಳಿಗೆ ತಲುಪಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಬಿ ಯಶೋವರ್ಮ ಮಾತನಾಡಿದರು. ಶ್ರೀಮತಿ ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಸತೀಶ್ಚಂದ್ರ, ಎಸ್.ಡಿ.ಎಂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು. ಎಸ್.ಡಿ.ಎಂ ಇಂಜನಿಯರಿಂಗ್ ಕಾಲೇಜಿನ ಆಕಾಶ್ ಮತ್ತು ದಿಲೀಪ್ ನಿರೂಪಿಸಿದರು. ಎನ್.ಎಸ್.ಎಸ್ ಸಂಘಟಕ ಕೆ.ಎಸ್ ಲಕ್ಷ್ಮೀನಾರಾಯಣ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

Related posts

Leave a Reply

Your email address will not be published. Required fields are marked *