Header Ads
Header Ads
Breaking News

ಅಪಾಯದಲ್ಲಿ ಸುಳ್ಯದ ಕಾಂತಮಂಗಲ ಸೇತುವೆ

ಸುಳ್ಯದಿಂದ ಮಂಡೆಕೋಲು ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಈ ಅಂತಾರಾಜ್ಯ ರಸ್ತೆಯಲ್ಲಿ ದಿನಂಪ್ರತಿ ಹಗಲು ರಾತ್ರಿ ಎನ್ನದೆ ನೂರಾರು ವಾಹನಗಳು ಸಂಚಾರ ಮಾಡುತ್ತಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಸೇತುವೆ ಸಮಸ್ಯೆಗಳ ಆಗಾರವಾಗಿದೆ. ಸುಳ್ಯದ ಕಾಂತಮಂಗಲ ಸೇತುವೆ ಬಿರುಕು ಬಿಟ್ಟಿದ್ದು, ಸೇತುವೆ ಮೇಲೆ ಕೇವಲ ಹೊಂಡ ಗುಂಡಿಗಳೇ ರಾರಾಜಿಸುತ್ತಿದೆ. ಸೇತುವೆ ಮಧ್ಯದಲ್ಲಿಯೇ ಬಾಯ್ದೆರೆದು ನಿಂತ ಹೊಂಡಗಳು ಮೃತ್ಯುಕೂಪದಂತೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅಲ್ಲದೇ ಸುಳ್ಯ- ಅಜ್ಜಾವರ-ಮಂಡೆಕೋಲು ಮೂಲಕ ಕೇರಳದ ಅಡೂರುಗೆ ಹಾದು ಹೋಗುವ ಅಂತಾರಾಜ್ಯ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಜನತೆ ಎದುರಿಸುತ್ತಿದ್ದಾರೆ.ಮಳೆಗಾಲ ಆರಂಭವಾದಾಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಸೇತುವೆ ಮೇಲೆ ಕಾಲಿಡುವಾಗಲೇ ಬೃಹತ್ ಗಾತ್ರದ ಹೊಂಡಗಳ ದರ್ಶನ ವಾಗುತ್ತದೆ. ಹೊಂಡಕ್ಕೆ ಬೀಳುವ ವಾಹನಗಳ ಚಕ್ರ ಮೇಲೇಳಬೇಕಾದರೆ ಚಾಲಕ ಪ್ರಯಾಸ ಪಡಬೇಕು. ಅಲ್ಲದೇ ಸೇತುವೆಯ ಮಧ್ಯ ಭಾಗದಲ್ಲಿ ಬೃಹತ್ ಗಾತ್ರದಲ್ಲಿ ಬಿರುಕು ಬಿಟ್ಟಿದ್ದು ಅಪಾಯದ ಕರೆಗಂಟೆ ಬಾರಿಸುತ್ತಿದೆ. ಈ ಸೇತುವೆ ತುಂಬ ಕಿರಿದಾಗಿದ್ದು ಒಂದು ಕಡೆಯಿಂದ ಒಂದೇ ವಾಹನಗಳು ಚಲಿಸಲು ಸಾಧ್ಯ. ಒಂದು ಬದಿಯ ವಾಹನಗಳು ಚಲಿಸಿದ ಬಳಿಕ ಮತ್ತೊಂದು ಬದಿಯ ವಾಹನಗಳು ಚಲಿಸಬಹುದು.ಈ ಸೇತುವೆಯನ್ನು ಪಯಸ್ವಿನಿ ಹೊಳೆಗೆ ಅಜ್ಜಾವರ ಮಂಡೆಕೋಲು ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸಲು ಸುಮಾರು ೩೪ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅಜ್ಜಾವರ ಮಂಡೆಕೋಲು ಗ್ರಾಮವು ಸೇರಿದಂತೆ ಕಾಸರಗೋಡು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮೂಲಕ ಕಾಂತಮಂಗಲ ಸೇತುವೆ ಅಂತರ್ ರಾಜ್ಯ ಸೇತುವೆಯಾಗಿ ಇಂದು ಗಮನ ಸೆಳೆದಿದೆ. ಸೇತುವೆ ಸುಮಾರು75 ಮೀಟರ್ ಉದ್ದವಿದ್ದು ಇದರ ಪಿಲ್ಲರ್‌ಗಳು ಸುಮಾರು ೩೦ ಫೀಟ್ ಎತ್ತರವಿದೆ.

ಸೇತುವೆಯಲ್ಲಿ ವಾಹನಗಳು ಚಲಿಸುವಾಗ ಸೇತುವೆ ಅಲ್ಲಾಡುತ್ತಿದ್ದು ಪ್ರಯಾಣಿಕರಿಗೆ ಭಯವನ್ನುಂಟುಮಾಡುತ್ತಿದೆ. ಸೇತುವೆ ಪಿಲ್ಲರ್‌ಗಳ ತಳ ಭಾಗ ಸವೆದು ನಿಂತಿವೆ. ಸೇತುವೆಯ ಅಡಿಭಾಗದ ಸ್ಲ್ಯಾಬ್ ಅಲ್ಲಲ್ಲಿ ಬಿರುಕು ಬಿಟ್ಟುಕೊಂಡಿದ್ದು ಸ್ಲ್ಯಾಬ್ ತುಂಡು ತುಂಡಾಗಿ ಉದುರುತ್ತಿದೆ. ಸ್ಲ್ಯಾಬ್‌ಗೆ ಅಳವಡಿಸಲಾದ ಕಬ್ಬಿಣಗಳು ಕಾಣುತ್ತಿದ್ದು ಅದು ತುಕ್ಕು ಹಿಡಿದು ಅದರ ಗಾತ್ರ ಕಿರಿದಾಗಿದೆ. ಈ ಸೇತುವೆ ಬಹಳ ಅತ್ಯಗತ್ಯ ಸೇತುವೆಯಾಗಿರುವ ಕಾರಣ ಸೇತುವೆ ಕುಸಿತಗೊಂಡರೆ ಸುಳ್ಯದ ಅಜ್ಜಾವರ ಮತ್ತು ಮಂಡೆಕೋಲು ಗ್ರಾಮದವರು, ಕೇರಳ ಭಾಗದ ಕೆಲ ಜನರು ಈ ಸೇತುವೆಯ ಮೂಲಕ ಸಂಪರ್ಕ ಕಳೆದುಕೊಳ್ಳುತ್ತಾರೆ. ಮಂಡೆಕೋಲು ಅಜ್ಜಾವರ ಭಾಗದಿಂದ ಶಾಲಾ ಕಾಲೇಜುಗಳಿಗೆ ಸಾಕಷ್ಟು ಸಾವಿರಾರು ವಿದ್ಯಾರ್ಥಿಗಳು, ಜನರು ಸುಳ್ಯ ತಾಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ. 1980 ಸುಮಾರಿಗೆ ಅಲ್ಲಿಯ ಜನರು ದೋಣಿ ಮೂಲಕ ಪ್ರಯಾಣಿಸಿ ಸುಳ್ಯಕ್ಕೆ ಬರುತ್ತಿದ್ದರು.

ನಂತರದ ದಿನದಲ್ಲಿ ಸೇತುವೆ ನಿರ್ಮಾಣವಾದ ಬಳಿಕ ಇದು ಅಂತರ್ ರಾಜ್ಯ ರಸ್ತೆಯಾಗಿ ಸಂಪರ್ಕ ಬೆಳೆಯಿತು. ಕಾಂತಮಂಗಲ ಸೇತುವೆ ಅಜ್ಜಾವರ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು ಪಂಚಾಯತ್ ವತಿಯಿಂದ ಇದರಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದರೂ ಘನ ವಾಹನಗಳು ಸಂಚಾರಿಸುತ್ತಿವೆ.ಸೇತುವೆ ಕುಸಿಯುವ ಮೊದಲು ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖಾಧಿ ಕಾರಿಗಳು ಎಚ್ಚೆತ್ತುಕೊಂಡು ಇದಕ್ಕೆ ಬದಲಿ ವ್ಯವಸ್ಥೆ ಮಾಡಬೇಕಾಗಿದೆ. ಜತೆಗೆ ಅಜ್ಜಾವರ ಮಂಡಕೋಲು ರಸ್ತೆ ತುಂಬಾ ಹದಗೆಟ್ಟಿದ್ದು ಈ ರಸ್ತೆಯಲ್ಲಿ ವಾಹನ ಚಲಾಯಿಸುವುದೆಂದರೆ ತ್ರಾಸದಾಯಕವಾದ ಕೆಲಸವಾಗಿದೆ.

ರಸ್ತೆ ಅಭಿವೃದ್ದಿಗೆ ಕೇಂದ್ರ ಸರಕಾರದಿಂದ ಸಿ.ಆರ್.ಎಫ್ ಯೋಜನೆಯಲ್ಲಿ 6ಕೋಟಿ ಹಣ ಬಿಡುಗಡೆಯಾಗಿದ್ದು ಬಿ.ಜೆ.ಪಿ ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ಕಚ್ಚಾಟದಿಂದ ಅದು ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಪ್ರತಿಕ್ರೀಯೆ ನೀಡಿ ಕಳೆದ ಹಲವು ವರ್ಷಗಳಿಂದ ಸೇತುವೆಯ ದುರಸ್ತಿಗೆ ಮತ್ತು ಹೊಸ ಸೇತುವೆ ನಿರ್ಮಾಣ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ವರ್ಷ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ. ಶಾಸಕರು ವಿಶೇಷವಾಗಿ ಬಜೆಟ್ ಅನುದಾನದಲ್ಲಿ ಸೇರಿಸುತ್ತೇನೆ ಎಂದು ಹೇಳಿದ್ದಾರೆ. ಜಿ.ಪಂ ಸದಸ್ಯೆ ಪುಷ್ಪಾವತಿ ಬಾಳಿಲ ಪ್ರತಿಕ್ರೀಯೆ ನೀಡಿ ಕಾಂತಮಂಗಲದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಅಲ್ಲದೇ ಶಾಸಕರ ಮೂಲಕ ಸಂಸದರಿಗೂ ಈ ಬಗ್ಗೆ ಮನವಿ ಮಾಡಲಾಗುವುದು.

Related posts

Leave a Reply