
ಉಳ್ಳಾಲ: ಅಬ್ಬಕ್ಕ ಭವನಕ್ಕೆ ತಾಗಿಕೊಂಡು ಬ್ಯಾರಿ ಭವನ ಖಂಡಿತಾ ಬೇಡ. ಉಳ್ಳಾಲ ಅನ್ನುವುದು ಅತಿಸೂಕ್ಷ್ಮ ಪ್ರದೇಶ. ಸಣ್ಣ ಹುಡುಗ ಕಲ್ಲು ಬಿಸಾಡಿದರೂ ಗಲಭೆ ನಡೆಯುವಂತಹ ಸ್ಥಳ. ಇಂತಹ ವಾತಾವರಣ ಇರುವ ಸಂದರ್ಭ ವಿಭಿನ್ನ ವ್ಯವಸ್ಥೆಗಳ ಭವನ ಒಟ್ಟೊಟ್ಟಿಗೆ ಆದಲ್ಲಿ ಮುಂದಿನ ದಿನದಲ್ಲಿ ಬಹಳಷ್ಟು ತೊಂದರೆಯಾಗಲಿದೆ ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಶಿಲನ್ಯಾಸ ನೆರವೇರಿ 9 ವರ್ಷಗಳಾದರೂ ಇನ್ನೂ ನಿರ್ಮಾಣವಾಗದ ಅಬ್ಬಕ್ಕ ಭವನದ ಕಾಮಗಾರಿ ಶೀಘ್ರವೇ ಆರಂಭಿಸುವಂತೆ ಹಾಗೂ ಸಮೀಪದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ತೊಕ್ಕೊಟ್ಟು ಹೊಸ ಬಸ್ಸು ನಿಲ್ದಾಣ ಬಳಿ ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ಪ್ರದೇಶದಲ್ಲಿ ಶುಕ್ರವಾರ ಹಮ್ಮಿಕೊಂಡ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಬ್ಯಾರಿ ಭವನಕ್ಕೆ ವಿರೋಧವಿಲ್ಲ. ಅರ್ಧ ಕಿ.ಮೀ ದೂರದಲ್ಲಾದರೂ ನಿರ್ಮಿಸಲಿ. ಕಲ್ಲಾಪು, ಉಳ್ಳಾಲ, ಕೋಡಿ ಭಾಗಗಳಲ್ಲಿ ನಿರ್ಮಿಸಲಿ. ಆಧರೆ 9 ವರ್ಷದ ಹಿಂದೆ ಶಿಲನ್ಯಾಸ ನೆರವೇರಿಸಿದ ಅಬ್ಬಕ್ಕ ಭವನ ತಕ್ಷಣ ನಿರ್ಮಿಸಿ. ಈಗಾಗಲೇ ಸರಕಾರ ಸಂಪೂರ್ಣ ಹಣವನ್ನು ನೀಡಿದೆ. ಆದರೆ ಜಿಲ್ಲಾಧಿಕಾರಿಗಳು ಯಾಕೆ ವಿಳಂಬ ಮಾಡುತ್ತಿದ್ದಾರೆ ಅನ್ನುವುದು ಪ್ರಶ್ನಾತೀತ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂಟ ಮಾತನಾಡಿ ಅಬ್ಬಕ್ಕ ಭವನ ಸಾತ್ವಿಕ ಸ್ವರೂಪದ ರಾಷ್ಟ್ರಕ್ಕೆ ಸಂಬಂಧಿಸಿದ ಅಭಿಮಾನದ ಸಂಕೇತದ ವಿಚಾರ. ಇತರೆ ಜಿಲ್ಲೆಗಳಲ್ಲಿ ಇರುವಂತೆ ದ.ಕ ಜಿಲ್ಲೆಯಲ್ಲಿರುವ ಸಮುದಾಯ ಭವನಗಳು ತೀರಾ ಕಡಿಮೆ. ಈ ನಿಟ್ಟಿನಲ್ಲಿ ಬ್ಯಾರಿ ಭವನ ,ಕನ್ನಡ ಭವನದ ನಿರ್ಮಾಣ ಅಗತ್ಯ ಆಗಬೇಕು. ಆದರೆ ಒಟ್ಟೊಟ್ಟಿಗೆ ನಿರ್ಮಿಸುವುದರಲ್ಲಿ ಅರ್ಥವಿಲ್ಲ ಎಂದರು.
ಅಖಿಲ ಭಾರತ ಹಿಂದು ಮಹಾಸಭಾದ ರಾಜೇಶ್ ಪುತ್ರನ್ ಮಾತನಾಡಿ 9 ವರ್ಷಗಳ ಹಿಂದೆ ಶಂಕು ಸ್ಥಾಪಿಸಿದ ಅಬ್ಬಕ್ಕ ಭವನದ ನಿರ್ಮಾಣವೇ ಮಾಡದೇ ತುರಾತುರಿಯಲ್ಲಿ ಬ್ಯಾರಿ ಭವನ ಶಂಕುಸ್ಥಾಪನೆಗೆ ಮುಂದಾಗಿರುವುದು ಖಂಡನೀಯ. ಅಬ್ಬಕ್ಕ ಭವನದ ಬಳಿ ಬ್ಯಾರಿ ಭವನದ ನಿರ್ಮಾಣವನ್ನು ಸಹಿಸುವುದಿಲ್ಲ ಎಂದರು.
ಈ ಸಂದರ್ಭ ಪದ್ಮಶ್ರೀ ಪುರಸ್ಕøತ , ಅಕ್ಷರ ಸಂತ ಹರೇಕಳ ಹಾಜಬ್ಬ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ಪದಾಧಿಕಾರಿಗಳಾದ ಸದಾನಂದ ಬಂಗೇರ, ಪವಿತ್ರ ಗಟ್ಟಿ, ಶಶಿಕಲಾ ಗಟ್ಟಿ, ರತ್ನಾವತಿ ಬೈಕಾಡಿ, ಆನಂದ ಕೆ ಅಸೈಗೋಳಿ, ಮಾದವಿ ಉಳ್ಳಾಲ್, ಮಲ್ಲಿಕಾ ಭಂಡಾರಿ, ಲತಾ ಶ್ರೀಧರ್ , ಶಶಿಕಾಂತಿ ಉಳ್ಳಾಲ್, ಸೀತಾರಾಮ ಬಂಗೇರ, ಸತೀಶ್ ಭಂಡಾರಿ, ಮುಂತಾದವರು ಉಪಸ್ಥಿತರಿದ್ದರು.