Header Ads
Header Ads
Breaking News

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶತಸಿದ್ಧ ಹೇಳಿಕೆ:ಧಮ್ಕಿ ಹಾಕಿದ ಘಟನೆ ಖಂಡಿಸಿದ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್

ಬಂಟ್ವಾಳ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶತಸಿದ್ಧ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ಪೂಜಾರಿಯವರಿಗೆ ಕಾಂಗ್ರೆಸ್ ಕಾರ್ಯಕರ್ತನ ಹೆಸರಿನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದಲ್ಲದೆ ಎನ್‌ಕೌಂಟರ್ ಮಾಡಿ ಕೊಲ್ಲಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಧಮ್ಕಿ ಹಾಕಿರುವ ಘಟನೆಯನ್ನು ಖಂಡಿಸಿರುವ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಈ ವರೆಗೂ ಒಂದೇ ಒಂದು ಹೇಳಿಕೆ ನೀಡದೆ ಮೌನವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ಧುರೀಣ, ಅಪ್ಪಟ ಜಾತ್ಯಾತೀತವಾದಿ, ಗಾಂಧಿ ಸಿದ್ದಾಂತವನ್ನು ಮೈಗೂಡಿಸಿರುವ ಪೂಜಾರಿಯವರಿಗೆ ಅವಹೇಳನಗೈದಾತನನ್ನು ಪೊಲೀಸರು ತಕ್ಷಣ ಬಂಧಿಸಿ, ತಕ್ಕ ಶಾಸ್ತಿ ಮಾಡಬೇಕು, ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರೇ ನೋಡಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅವರ ಮನೆಗೆ ತೆರಳಿ ಅವರು ಕೈ, ಕಾಲು ಹಿಡಿದು ಆಶೀರ್ವಾದ ಬೇಡಿದವರು ಮತ್ತು ಅವರ ಪ್ಲೆಕ್ಸ್ ನಲ್ಲಿ ಅವರ ಭಾವಚಿತ್ರ ಹಾಕಿ ರಾಜಕೀಯ ಲಾಭ ಪಡೆದವರು ಹಾಗೆಯೇ ಪೂಜಾರಿಯವರಿಂದ ಲಾಭ ಪಡೆದ ಜಿಲ್ಲೆಯ ಬಿಲ್ಲವ ಸಂಘಟನೆಗಳು, ಮುಖಂಡರು ಇದರ ಬಗ್ಗೆ ಯಾಕೆ ಮಾತನಾಡಿತ್ತಿಲ್ಲ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಪೂಜಾರಿಯವರ ಹಿಂದೆ ಬಿಜೆಪಿ ಬೆಂಬಲವಾಗಿ ನಿಲ್ಲಲಿದೆ. ಗುರುವಾರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೈಬರ್ ಕ್ರೈಂ ನಲ್ಲಿ ದೂರು ದಾಖಲಿಸಲಿದೆ ಎಂದ ಅವರು ಅವಹೇಳನಗೈದಾತ ಧಮ್ ಇದ್ದರೆ ಹೊರಗೆ ಹೊರಗೆ ಬಂದು ಹೇಳಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ,ಜಿ.ಆನಂದ, ಪ್ರಭಾಕರ ಪ್ರಭು, ದಿನೇಶ್ ಅಮ್ಟೂರು, ಸುದರ್ಶನ್ ಬಜ,ಮಹಾಬಲ ಶೆಟ್ಡಿ ಉಪಸ್ಥಿತರಿದ್ದರು.

Related posts

Leave a Reply