Header Ads
Header Ads
Breaking News

ಅಪಾಯದ ಅಂಚಿನಲ್ಲಿದೆ ಸುಳ್ಯದ ಕಲ್ಮಕಾರು ಶೆಟ್ಟಿಕಜೆ ಸೇತುವೆ

ಸುಳ್ಯ: ನಲವತ್ತು ವರ್ಷ ಹಿಂದೆ ಹೇಗಿತ್ತೋ ಇಂದು ಕೂಡ ಹಾಗೆಯೇ ಇದೆ. ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದಿದ್ದರೂ ಈ ಹಳ್ಳಿಯ ಸ್ಥಿತಿ ಬದಲಾಗಿಲ್ಲ. ಮುಂಗಾರು ಆರಂಭವಾಯಿತು ಎಂದರೆ ಇಲ್ಲಿಯವರಿಗೆ ಸಂಕಷ್ಟದ ಸರಮಾಲೆಗಳ ಅವಧಿ. ಮಕ್ಕಳಿಗೆ ಹೊಳೆ ದಾಟುವ ಚಿಂತೆ. ಪೋಷಕರಿಗೆ ಮಕ್ಕಳ ಪ್ರಾಣದ ಭೀತಿ. ಘಡಘಡ ಅಲುಗುತ್ತಿರುವ ಬಿದಿರಿನ ತೂಗು ಸೇತುವೆ ಮೇಲೆ ಪ್ರಾಣ ಪಣಕ್ಕೆ ಇಟ್ಟು ಸಾಗುವ ಆತಂಕಕಾರಿ ಸ್ಟೋರಿ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಶೆಟ್ಟಿಕಜೆ ಎಂಬಲ್ಲಿ ನಮಗೆ ಸಿಗುತ್ತದೆ.

ಕಲ್ಮಕಾರು ಗ್ರಾಮದಿಂದ ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಭಾಗಗಳನ್ನು ತಲುಪಲು ಶೆಟ್ಟಿಕಜೆ ಎಂಬ ಸ್ಥಳದಲ್ಲಿ ಹರಿಯುವ ಕಲ್ಮಕಾರು ಹೊಳೆ ದಾಟಿ ತೆರಳಬೇಕು. ಮಳೆಗಾಲದಲ್ಲಿ ಈ ಹೊಳೆ ನೆರೆಯಿಂದ ತುಂಬಿ ಹರಿಯುತ್ತಿದೆ. ಇದರಿಂದ ಈ ಭಾಗದವರಿಗೆ ಸಮಸ್ಯೆ ಆಗುತ್ತದೆ. ಈ ಪ್ರದೇಶದಿಂದ ಕಲ್ಮಕಾರು ಅಂಗನವಾಡಿ ಪ್ರಾಥಮಿಕ ಶಾಲೆ, ಹಾಗೂ ಇತರೆಡೆಯ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿದ್ದಾರೆ. ಅವರಿಗೆ ಮಳೆಗಾದಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಮಳೆಗಾಲದಲ್ಲಿ ಹೊಳೆ ದಾಟುವುದಕ್ಕೆ ಸಾಧ್ಯವಿಲ್ಲ ಎಂದು ಸ್ಥಳಿಯರು ತಾತ್ಕಾಲಿಕ ಬಿದಿರಿನೆ ತೂಗು ಸೇತುವೆ ನಿರ್ಮಿಸಿಕೊಂಡಿದ್ದಾರೆ. ಅದು ಅಪಾಯದ ಸ್ಥಿತಿಯಲ್ಲಿದೆ. 
ಇಲ್ಲಿ ನಿವಾಸಿಗಳು ಜೀವ ಕೈಯಲ್ಲಿ ಇಟ್ಟಕೊಂಡು ಸೇತುವೆ ದಾಟುವ ಸಾಹಸ ಮಾಡುತ್ತಿದ್ದಾರೆ. ಇಲ್ಲಿಗೆ ಶಾಶ್ವತವಾಗಿ ಸೇತುವೆಯೊಂದನ್ನು ನಿರ್ಮಿಸಿಕೊಡಿ ಎಂದು ನಲವತ್ತು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ ಇಲ್ಲಿಯ ನಾಗರಿಕರು. ಇವರ ಬೇಡಿಕೆಗೆ ಜನಪ್ರತಿನಿಧಿಗಳ ಮನ: ಕರಗಲಿಲ್ಲ. ವರ್ಷಂಪ್ರತಿ ನೀಡುವ ಭರವಸೆ ಮಾತ್ರ ಬಂಡೆ ಕಲ್ಲಿನ ಮೇಲೆ ನೀರು ಸುರಿದಂತೆ ಆಗಿದೆ. ಇದುವರೆಗೆ ಪ್ರಯೋಜನಕ್ಕೆ ಬಂದಿಲ್ದ.
ಇಲ್ಲಿನ ಮಕ್ಕಳ, ಪೋಷಕರ ವ್ಯಥೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳದ್ದು ಹಾಗಾಗಿ ಈ ಭಾಗದ ಮಕ್ಕಳ ಯಾತನೆ ಇಲ್ಲಿಯ ಕಲ್ಮಕಾರು ಶಾಲೆಯಷ್ಟೆ ಇತಿಹಾಸ ಹೊಂದಿದೆ. ತಾತ್ಕಾಲಿಕ ತೂಗು ಸೇತುವೆ ನಿರ್ಮಾಣಕ್ಕೂ ಮೊದಲು ಮಕ್ಕಳು ಇಲ್ಲಿ ಹರಿಯುವ ನೀರಿನ ಪ್ರಮಾಣದ ಅಂದಾಜಿಲ್ಲದೆ ದಾಟುವ ಪ್ರಂiiತ್ನ ನಡೆಸಿ ಅಪಾಯಕ್ಕೆ ಸಿಲುಕಿಕೊಂಡ ಘಟನೆಗಳು ಇಲ್ಲಿ ನಡೆದಿದೆ.
ಈ ರಸ್ತೆ ಬಿಟ್ಟರೆ ಸುತ್ತು ಬಳಸಿ ತೆರಳಬೇಕು. ಆದರೆ ಸುತ್ತು ಬಳಸುವ ರಸ್ತೆಯಲ್ಲಿ ಕೂಡ ಹೊಳೆ ಸಿಗುತ್ತದೆ ಇದು ಕೂಡ ಮಳೆಗಾಲ ನೆರೆಗೆ ತುಂಬಿ ಹರಿಯುವುದರಿಂದ ಆ ರಸ್ತೆಯೂ ಪ್ರಯೋಜನಕ್ಕೆ ಬರುತಿಲ್ಲ. ಕುಟುಂಬಗಳು ವಾಸವಿರುವ ಈ ಪ್ರದೇಶದ ಸುತ್ತ ಹೊಳೆ ಹರಿಯುತ್ತಿರುವದರಿಂದ ಈ ಊರು ದ್ವೀಪದಂತಿದೆ.
ಇಲ್ಲಿಯ ಜ್ವಲಂತ ಸಮಸ್ಯೆ ಕುರಿತು ಇಲ್ಲಿಯವರು ಸಚಿವರು, ಸಂಸದರು, ಶಾಸಕರು ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಎಲ್ಲರಿಗೂ ಮನವಿ ನೀಡಿ ಅವರೆಲ್ಲರ ಗಮನಕ್ಕೆ ತಂದಿದ್ದಾರೆ. ಗ್ರಾಮ ಸಭೆಗಳಲ್ಲೂ ಪ್ರಸ್ತಾಪ ಮಾಡಿದ್ದಾರೆ. ಸಂಸದರು, ಶಾಸಕರು ಇತರೆ ಜನಪ್ರತಿನಿಧಿಗಳು ಹೀಗೆ ಇವರೆಲ್ಲರೂ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಸ್ಪಂದಿಸುವ ಭರವಸೆ ಇತ್ತು ಹೋಗಿದ್ದು ಬಿಟ್ಟರೆ ಇದುವರೆಗೆ ಪರಿಹಾರದ ಕುರಿತು ಗಮನಹರಿಸಿಲ್ಲ.
ಸಮಸ್ಯೆ ಬಗ್ಗೆ ಸ್ಥಳೀಯ ನಿವಾಸಿ ಶಿವರಾಮ ಪ್ರತಿಕ್ರೀಯೆ ನೀಡಿ ಮಕ್ಕಳು ಶಿಕ್ಷಣ ಪಡೆಲು ಮುಖ್ಯವಾಗಿ ಬೇಕಿರುವುದು ಮೂಲಸೌಕರ್‍ಯ. ಆದರೆ ಈ ಭಾಗದಿಂದ ಅನೇಕ ಮಂದಿ ವಿದ್ಯಾಥೀಗಳು ಶಿಕ್ಷಣ ಪಡೆಯಲು ಸ್ಥಳಿಯ ಹಾಗೂ ದೂರದ ಕಾಲೇಜುಗಳಿಗೆ ತೆರಳುತ್ತಾರೆ. ಅವರೆಲ್ಲರ ಶಿಕ್ಷಣ ಸೇತುವೆ ಕೊರತೆ ಸಮಸ್ಯೆಯಿಂದ ಕುಂಠಿತವಾಗುತ್ತಿದೆ. ಹಾಗಾಗಿ ಇಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು .
ಸುಬ್ರಹ್ಮಣ್ಯ ಪದವಿ ಕಾಲೇಜು ವಿದ್ಯಾರ್ಥಿ ಸಂದೀಪ್ ಪ್ರತಿಕ್ರೀಯೆ ನೀಡಿ ಹಲವು ವರ್ಷಗಳಿಂದ ಸೇತುವೆ ಇಲ್ಲದೇ ಬಿದಿರು ಮತ್ತು ಮರದ ತೂಗು ಸೇತುವೆಯಲ್ಲಿ ಸೇತುವೆ ದಾಟುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಣ್ಣ ಮಕ್ಕಳನ್ನು ಪೋಷಕರೇ ಬಂದು ಸೇತುವೆ ದಾಟಿಸುತ್ತಿದ್ದಾರೆ. ಇಲ್ಲಿಯವರೆಗೆ ಸಮಸ್ಯಗೆ ಯಾರು ಸ್ಪಂದನೆ ಮಾಡಿಲ್ಲ. ಆದಷ್ಟೂ ಬೇಗ ಸೇತುವೆ ಮಾಡಿಕೊಡಬೇಕು ಎಂದುದು ನಮ್ಮ ಆಗ್ರಹ. ಮಳೆಗಾಲದಲ್ಲಿ ಈ ತಾತ್ಕಾಲಿಕ ಸೇತುವೆ ಏನಾದರೂ ಕೈ ಕೊಟ್ಟರೆ ತ್ರಿಶಂಕು ಸ್ಥಿತಿ. ಮಕ್ಕಳಿಗೆ ಶಾಲೆಗೆ ತೆರಳಲು ಕಷ್ಟವಾಗಿ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳಬೇಕು. ಕೆಲ ಪೋಷಕರು ಈ ಸಂಕಷ್ಟ ಬೇಡಪ್ಪ ಅಂತ ತಮ್ಮ ಮಕ್ಕಳನ್ನು ನೆಂಟರ ಮನೆಯಲ್ಲಿ, ಹಾಸ್ಟೇಲ್‌ಗಳಲ್ಲಿ ಸೇರಿಸಿ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಮನೆಯಲ್ಲಿದ್ದುಕೊಂಡು ಶಾಲೆಗೆ ತೆರಳುವವರ ಸ್ಥಿತಿ ಶೋಚನೀಯ!

Related posts

Leave a Reply

Your email address will not be published. Required fields are marked *