Header Ads
Breaking News

ಇತಿಹಾಸ ಸೃಷ್ಟಿಸಿದ ಸರ್ಕಾರಿ ಶಾಲೆ : ರಾಜ್ಯದ ಗಮನ ಸೆಳೆಯಿತು ಮುಚ್ಚುವ ಹಂತದಲ್ಲಿದ್ದ ಶಾಲೆ

ಬಂಟ್ವಾಳದಲ್ಲಿ 2019-20 ನೇ ಶೈಕ್ಷಣಿಕ ವರ್ಷ ಮುಕ್ತಾಯವಾಗಿಲ್ಲ, ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಮುಂದಿನ ಶೈಕ್ಷಣಿಕ ವರ್ಷಕ್ಕೆ (2020-21) ಒಂದನೇ ತರಗತಿಯ ದಾಖಲಾತಿ ಪೂರ್ಣಗೊಂಡಿದೆ.

ಇದ್ಯಾವುದೋ ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಯಾಗಿದ್ದಿರಬಹುದು ಎನ್ನುವ ಊಹೆ ನಿಮ್ಮದಾಗಿದ್ದರೆ ಅದು ತಪ್ಪು. ಬದಲಾಗಿ ಈ ಹೊಸ ದಾಖಲೆ ಸೃಷ್ಟಿಸಿರುವುದು ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ.

2015ರಲ್ಲಿ 33ಮಕ್ಕಳಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆ 2019ರ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ 108 ಮಕ್ಕಳನ್ನು ದಾಖಲಿಸಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಈ ವರ್ಷವೂ ಯಾವುದೇ ಬ್ಯಾನರ್ ಪ್ರಚಾರವಿಲ್ಲದೆ, ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸದೇ ಇದ್ದರೂ ಕೂಡ ಅವಧಿಗಿಂತ ಮುನ್ನವೇ ಶಾಲೆಯ ಒಂದನೇ ತರಗತಿ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳಿಗೆ ದಾಖಲಾತಿ ಪ್ರಕೃಯೆ ಪೂರ್ಣಗೊಂಡಿದೆ. ನಿರೀಕ್ಷೆಗಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಶಾಲೆಯ ಪ್ರವೇಶ ಬಯಸಿದ್ದಾರೆ. ಈಗಾಗಲೇ ಒಂದನೇ ತರಗತಿಗೆ 111 ಮಕ್ಕಳು, ಎಲ್‍ಕೆಜಿಗೆ 70 ಹಾಗೂ ಯುಕೆಜಿಗೆ 83 ಮಕ್ಕಳು ದಾಖಲಾಗಿದ್ದು ಒಂದನೇಗೆ ಎ, ಬಿ, ಸಿ, ತರಗತಿಗಳನ್ನು ತೆರೆಯಲಾಗಿದೆ. ಮಕ್ಕಳ ಕೊರತೆಯಿಂದ ಸರಕಾರಿ ಶಾಲೆ ಮುಚ್ಚುತ್ತಿದೆ ಎನ್ನುವ ಈ ಕಾಲಘಟ್ಟದಲ್ಲಿ ಹೊಸ ಶಿಕ್ಷಣ ಕ್ರಾಂತಿಗೆ ದಡ್ಡಲಕಾಡು ಶಾಲೆ ಮುನ್ನುಡಿ ಬರೆದಿದೆ.

ರಾಜ್ಯದ ಕೆಲವೊಂದು ಪ್ರತಿಷ್ಠಿತ ಶಾಲೆ, ಕಾಲೇಜುಗಳಲ್ಲಿ ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಹಿತದೃಷ್ಟಿಯಿಂದ  ಪೋಷಕರು ಹೆಚ್ಚುವರಿ ಡೋನೇಷನ್ ನೀಡಿ ಮುಂಗಡವಾಗಿ ಸೀಟು ಕಾಯ್ದಿರಿಸುವುದು ಸಾಮಾನ್ಯ. ಅಲ್ಲದೆ ಅಂತಹ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿರುವ ಸೌಲಭ್ಯಗಳ ಬಗ್ಗೆ ಸಾಕಷ್ಟು ಪ್ರಚಾರವನ್ನು ಮಾಡಿರುತ್ತದೆ. ಆದರೆ ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ಅಂತಹ ಯಾವುದೇ ಪ್ರಚಾರದ ಅಬಬ್ರ ಇಲ್ಲದೇ ಇದ್ದರೂ ಕೂಡ  ಪೋಷಕರು ತಮ್ಮ ಮಕ್ಕಳನ್ನು ಈ ಸರಕಾರಿ ಶಾಲೆಗೆ ಸೇರಿಸಲು ಉತ್ಸಾಹ ತೋರುತ್ತಿದ್ದಾರೆ.

ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ, ಸರಕಾರದಿಂದ ಮಾತ್ರವಲ್ಲದೆ ಶಾಲಾ ದತ್ತು ಸಂಸ್ಥೆಯಿಂದಲೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಸಮವಸ್ತ್ರ ಹಾಗೂ ಪುಸ್ತಕಗಳ ವಿತರಣೆ, ಸುಂದರ ಶಾಲಾ ಪರಿಸರ, ಮೂರು ಅಂತಸ್ತಿನಲ್ಲಿರುವ ಸುಸಜ್ಜಿತ ಶಾಲಾ ಕೊಠಡಿ, ತರಗತಿಗೊಬ್ಬರಂತೆ ಶಿಕ್ಷಕರ ನಿಯೋಜನೆ, ಕರಾಟೆ, ಯೋಗ, ಸಂಗೀತ ಮೊದಲಾದ ಪಠ್ಯೇತರ ಚಟುವಟಿಕೆಗಳ ಉಚಿತ ತರಬೇತಿ, ವಿದ್ಯಾರ್ಥಿಗಳನ್ನು ಕರೆದೊಯ್ಯಲು 4 ಬಸ್ಸಿನ ವ್ಯವಸ್ಥೆ. ಹೀಗೆ ಖಾಸಗಿ ಶಾಲೆಯ ವ್ಯವಸ್ಥೆಯನ್ನು ಮೀರಿಸುವ ಸೌಲಭ್ಯಗಳು ಈ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವುದರಿಂದ ಸಹಜವಾಗಿಯೇ  ಪೋಷಕರ ಆಕರ್ಷಣೆ ದಡ್ಡಲಕಾಡು ಶಾಲೆಯತ್ತ ಸೆಳೆದಿದೆ.

ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಶಾಲೆಯನ್ನು ದತ್ತು ಸ್ವೀಕರಿಸಿದ ಬಳಿಕ ಶಾಲೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಂಟು ನೂರರ ಗಡಿ ದಾಟಿದೆ. ಖಾಸಗಿ ಸಂಘ ಸಂಸ್ಥೆಗಳ ಸಹಕಾರ, ಸಮುದಾಯದ ಸಹಭಾಗಿತ್ವ ಇದ್ದರೆ ಸರಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲು ಸಾಧ್ಯವಿದೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿದೆ. ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆ ಮತ್ತೆ ಫೀನಿಕ್ಸ್ ನಂತೆ ಎದ್ದು ನಿಂತಿದ್ದು ಶಾಲೆಯ ಗತ ಇತಿಹಾಸ ಮರುಕಳಿಸಿದೆ.

Related posts

Leave a Reply

Your email address will not be published. Required fields are marked *