
ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಚ್ಚಮೊಗರು ಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಗಣಿಗಾರಿಕೆ ಮಾಡುತ್ತಿದ್ದು, ಆ ಪರಿಸರದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಸಿಡಿಸುವುದರಿಂದ ಮನೆಗಳು ಹಾನಿಗೊಂಡಿವೆ. ಅಲ್ಲದೆ ಕ್ರಷರ್ನ ಜಲ್ಲಿಕಲ್ಲು ಮಿಶ್ರಿತ ತ್ಯಾಜ್ಯ ನೀರನ್ನು ಪಲ್ಗುಣಿ ನದಿಗೆ ಬಿಡುತ್ತಿರುವುದರಿಂದ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರವಾಗಿ ಹೋರಾಟವನ್ನು ಮಾಡಲಾಗುವುದು ಎಂದು ಪುಚ್ಚಮೊಗರು, ಇರುವೈಲು ಗ್ರಾಮಸ್ಥರು ಸೋಮವಾರ ಎಚ್ಚರಿಸಿದ್ದಾರೆ. ಗಣಿಗಾರಿಕೆ ನಡೆಯುವ ಪರಿಸರದಲ್ಲಿ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಗ್ರಾಮಸ್ಥ ಪ್ರದೀಪ್ ಮಾತನಾಡಿ, ಖಾಸಗಿ ಜಾಗವಲ್ಲದೇ, ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕ್ರಷರ್ನವರು ಗಣಿಗಾರಿಕೆ ಮಾಡುತ್ತಿದ್ದು, ಸ್ಥಳೀಯರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಕಂಪೆನಿಯವರಲ್ಲಿ ಕೇಳಿದರೆ, ಸೂಕ್ತ ಉತ್ತರ ನೀಡುವ ಬದಲು ಬೆದರಿಕೆಯೊಡ್ಡುತ್ತಿದ್ದಾರೆ. ಸ್ಥಳೀಯಾಡಳಿತ, ಸಂಬಂಧಪಟ್ಟ ಇಲಾಖೆಗಳಿಗೆ ಹಲವಾರು ಬಾರಿ ಇಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಕ್ರಶರ್ ಹತ್ತಿರದಲ್ಲೇ 15ಕ್ಕೂ ಅಧಿಕ ಮನೆಗಳಿದ್ದು, ಅವುಗಳು ತೀವ್ರ ರೀತಿಯಲ್ಲಿ ಹಾನಿಗೊಳಗಾಗಿವೆ. ಡೀಮ್ಡ್ ಫಾರೆಸ್ಟ್ನಲ್ಲಿ ಬಡವರ ಮನೆ ಕಟ್ಟಿದರೆ ಅವರನ್ನು ಅಲ್ಲಿಂದ ಎಬ್ಬಿಸುವ ಕೆಲಸ ಮಾಡುವ ಅಧಿಕಾರಿಗಳು, ಇಲ್ಲಿನ ಡೀಮ್ಡ್ ಫಾರೆಸ್ಟ್, ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಗಣಿಗಾರಿಕೆ ಮಾಡುತ್ತಿರುವುದನ್ನು ತಡೆಯುವುದಿಲ್ಲ ಯಾಕೆ? ಎಂದು ಪ್ರಶ್ನಿಸಿದರು. ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯವರು ಶೀಘ್ರ ಸ್ಪಂದಿಸದಿದ್ದಲ್ಲಿ ಗ್ರಾಮಸ್ಥರೆಲ್ಲ ಸೇರಿ ಉಗ್ರರೂಪದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸ್ಥಳೀಯರಾದ ಕಿರಣ್, ಹರೀಶ್ ಪೂಜಾರಿ ನಾಡಿಬೆಟ್ಟು, ಪ್ರಸಾದ್ ಪೂಜಾರಿ ನಾಡಿಬೆಟ್ಟು, ಪ್ರವೀಣ್ ಸುವರ್ಣ, ವೀರೇಂದ್ರ ಪೂಜಾರಿ, ಉಮೇಶ್, ಇಮ್ರಾನ್ ಎಲಿಯಾ, ದಯಾನಂದ ಬಂಗೇರ ಮತ್ತಿತರರು ಹಾಜರಿದ್ದರು.