Header Ads
Header Ads
Breaking News

ಇಹಲೋಕ ತ್ಯಜಿಸಿದ ಕೇಂದ್ರದ ಮಾಜಿಸಚಿವ ಅರುಣ್ ಜೇಟ್ಲಿ

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲುವಿಕೆಯ ಕಹಿ ಇನ್ನೂ ಹಸಿಯಾಗಿ ಇರುವಾಗಲೇ ಮತ್ತೊಂದು ಸಾವಿನ ಆಘಾತ ಎದುರಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಬಳಲಿಕೆ ಮತ್ತು ಉಸಿರಾಟದ ಸಮಸ್ಯೆಗೆ ಒಳಗಾದ ಅರುಣ್ ಜೇಟ್ಲಿ ಅವರನ್ನು ಆಗಸ್ಟ್ ೯ರಂದು ಬೆಳಿಗ್ಗೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ಡಿಯೋಥೊರಾಸಿಕ್ ಮತ್ತು ನ್ಯೂರೋಸೈನ್ಸ್ ಕೇಂದ್ರದಲ್ಲಿ ಐಸಿಯುನಲ್ಲಿ ಇರಿಸಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಅವರಿಗೆ ಎಂಡೋಕ್ರಿನೋಲಾಜಿಸ್ಟ್, ನೆಪ್ರೋಲಾಜಿಸ್ಟ್ ಮತ್ತು ಕಾರ್ಡಿಯಾಲಜಿಸ್ಟ್‌ಗಳ ತಂಡವು ಚಿಕಿತ್ಸೆ ನೀಡಿತ್ತು. ಎರಡು ವಾರದಿಂದ ಅವರು ಏಮ್ಸ್‌ನಲ್ಲಿಯೇ ಇದ್ದರು. ತಜ್ಞ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ, ಚಿಕಿತ್ಸೆಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅರುಣ್ ಜೇಟ್ಲಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಸರ್ಕಾರದ ಪ್ರಮುಖರು, ಆರೆಸ್ಸೆಸ್ ನಾಯಕರು ಹಾಗೂ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ,. 

ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಅವರು ಕಳೆದ ವರ್ಷ ಮೂರು ತಿಂಗಳ ಕಾಲ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2019ರಲ್ಲಿ ಸಾಫ್ಟ್ ಟಿಶ್ಯೂ ಸರ್ಕೋಮಾ ಎಂಬ ಮೂತ್ರಕೋಶದ ಅಪರೂಪದ ಸಮಸ್ಯೆಗೆ ತುತ್ತಾಗಿದ್ದರು. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅನಾರೋಗ್ಯದ ಕಾರಣ ಅವರು ಮೋದಿ ನೇತೃತ್ವದ ಸರ್ಕಾರದ ಎರಡನೆಯ ಅವಧಿಯಲ್ಲಿ ಯಾವುದೇ ಸಚಿವ ಸ್ಥಾನದ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಮುಖಂಡರಿಗೆ ತಿಳಿಸಿದ್ದರು. ೧೯೮೨ರಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ಹಣಕಾಸು ಸಚಿವ ಗಿರಿಧರಿ ಲಾಲ್ ಡೋಗ್ರಾ ಅವರ ಮಗಳು ಸಂಗೀತಾ ಅವರನ್ನು ವಿವಾಹವಾಗಿದ್ದರು. ಮಗ ರೋಹನ್ ಜೇಟ್ಲಿ ಮತ್ತು ಮಗಳು ಸೊನಾಲಿ ಜೇಟ್ಲಿ ಇಬ್ಬರೂ ವಕೀಲಿ ವೃತ್ತಿ ನಡೆಸುತ್ತಿದ್ದಾರೆ.

1952ರ ಡಿಸೆಂಬರ್ 28ರಂದು ಜನಿಸಿದ್ದ ಜೇಟ್ಲಿ ಅವರು, ದೆಹಲಿ ವಿವಿಯಿಂದ 1977ರಲ್ಲಿ ಕಾನೂನು ಪದವಿ ಪಡೆದಿದ್ದರು. ಎಬಿವಿಪಿ ಸದಸ್ಯರಾಗಿದ್ದ ಅವರು, 1974ರಲ್ಲಿ ದೆಹಲಿ ವಿವಿಯ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಪಿ ಸಿಂಗ್ ಸರ್ಕಾರದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ಆಗಸ್ಟ್ 6ರಂದು ಬಿಜೆಪಿಯ ಹಿರಿಯ ನಾಯಕಿ, ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ನಿಧನರಾಗಿದ್ದರು. ಈ ದುಃಖ ಮರೆಯಾಗುವ ಮುನ್ನವೇ ಮತ್ತೊಂದು ಕಹಿ ಎದುರಾಗಿದೆ.

Related posts

Leave a Reply

Your email address will not be published. Required fields are marked *