Header Ads
Breaking News

ಈರುಳ್ಳಿ ದರ ಏರಿಕೆ ಹಿನ್ನೆಲೆ : ನೇಣು ಹಗ್ಗ ಪ್ರದರ್ಶಿಸಿ ಬಂದರು ಶ್ರಮಿಕರ ಸಂಘದಿಂದ ಪ್ರತಿಭಟನೆ

ಈರುಳ್ಳಿ ದರ ನಿಯಂತ್ರಿಸಲಾಗದ ಕೇಂದ್ರ ಸರಕಾರದ ನೀತಿಯ ವಿರುದ್ಧ ಹಾಗೂ ಸಂಕಷ್ಟಕ್ಕೀಡಾದ ಗ್ರಾಹಕರು-ಕಾರ್ಮಿಕರ ರಕ್ಷಣೆಗೆ ಒತ್ತಾಯಿಸಿ ಬಂದರು ಶ್ರಮಿಕರ ಸಂಘದಿಂದ ಬಂದರ್‍ನ ಕಾರ್ಮಿಕರ ಕಟ್ಟೆ ಬಳಿ ಇಂದು ಬೆಳಗ್ಗೆ ನೇಣು ಹಗ್ಗ ಪ್ರದರ್ಶಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಝ್ ಮಾತನಾಡಿ, ದೇಶದಲ್ಲಿ ಐದಾರು ತಿಂಗಳ ಹಿಂದೆ ಕೆಲ ರಾಜ್ಯಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಈರುಳ್ಳಿ ದರ ನಿಯಂತ್ರಣಕ್ಕೂ ಮೀರಿ ಏರಿಕೆಯಾಗಿದೆ. ಇದರಿಂದಾಗಿ ಮಂಗಳೂರಿಗೆ ಈರುಳ್ಳಿ ಸರಬರಾಜು ಆಗುತ್ತಿಲ್ಲ. ದರ ಏರಿಕೆಯು ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿದೆ. ಏರಿಕೆ ದರ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಆಡಳಿತಕ್ಕೆ ಬರುವ ಮೊದಲು ಮತದಾರರಿಗೆ ಕೊಟ್ಟ ಭರವಸೆಗಳೆಲ್ಲ ಹುಸಿಯಾಗಿವೆ. ಮೋದಿಯ ಆರು ವರ್ಷದ ಆಡಳಿತ ಕಳಪೆಯಾಗಿದೆ. ಈರುಳ್ಳಿ ದರ 200ರತ್ತ ಜಿಗಿಯುತ್ತಿದೆ. ಇದೆನಾ ಅಚ್ಚೇ ದಿನ್ ಎಂದು ಪ್ರಶ್ನಿಸಿದ ಅವರು, ದೇಶ ಆರ್ಥಿಕ ಹಿಂಜರಿತಕ್ಕೊಳಗಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ಪಾದನಾ ಕ್ಷೇತ್ರಗಳು ದೇಶದಲ್ಲಿ ಮುಚ್ಚಿ ಹೋಗುತ್ತಿವೆ. ನಿರುದ್ಯೋಗ ಸಮಸ್ಯೆ ವಿಪರೀತ ಎನ್ನುವಷ್ಟು ಹೆಚ್ಚಳ ಕಾಣುತ್ತಿದೆ. ಯುವಕರು ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಂದರು ಶ್ರಮಿಕರ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಉಪಾಧ್ಯಕ್ಷ ಹಸನ್ ಮೋನು, ಖಜಾಂಚಿ ಹರೀಶ್ ದೇರೆಬೈಲ್, ಕಾರ್ಮಿಕರಾದ ಯಲ್ಲಪ್ಪ ಉಮರ್ ಫಾರೂಕ್, ಹಂಝ, ಬಶೀರ್, ಸಿದ್ದೀಕ್, ಶರೀಫ್, ಸಮೀರ್ ಮತ್ತಿತರರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *