Header Ads
Header Ads
Breaking News

ಉಡುಪಿ ಮಂಚಿಕೆರೆಯಲ್ಲಿ ಭೂಮಿಯಲ್ಲಿ ಬಿರುಕು : ಎರಡು ಮನೆಗೆ ಹಾನಿ, ಆತಂಕ

 ಉಡುಪಿಯ ಅಲೆವೂರಿನ ಮಂಚಿಕೆರೆ ಎಂಬಲ್ಲಿ ಭೂಮಿ ಬಾಯ್ಬಿಟ್ಟಿದೆ. ಮಳೆ ಆರಂಭಾವಗುತ್ತಿದ್ದಂತೆ ಭೂಮಿಯಲ್ಲಿನ ಬಿರುಕು ಹೆಚ್ಚಾಗಿದ್ದು ಎರಡು ಮನೆಗೆ ಹಾನಿಯಾಗಿದೆ. ಭೂಮಿ ಬಾಯ್ಬಿಟ್ಟಿದ್ದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಇತ್ತ ಭೂಗರ್ಭ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ….

ಇಲ್ಲೇನೂ ಭೂಕಂಪವಾಗಿಲ್ಲ, ಆದರೂ ಈ ಭೂ ಪ್ರದೇಶವನ್ನು ನೋಡಿ, ಅಲ್ಲಲ್ಲಿ ಸೀಳಿ ಹೋದಂತೆ ಭೂಮಿ ಬಾಯ್ತೆರೆದು ಕುಳಿತಿದೆ. ನೂರಾರು ಮೀಟರ್ ಉದ್ದಕ್ಕೂ ಭೂಮಿ ಬಿರುಕುಬಿದ್ದಿದೆ. ಮುಕ್ಕಾಲು ಅಡಿ ಅಗಲ, ಇಪ್ಪತ್ತು ಅಡಿಗೂ ಹೆಚ್ಚು ಆಳದ ಬಿರುಕುಗಳು ಕುತೂಹಲದ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಮಣಿಪಾಲದ ಮಂಚಿಕೆರೆ ಎಂಬಲ್ಲಿನ ಬೋಳು ಗುಡ್ಡೆಯಲ್ಲಿ ಈ ಪ್ರಾಕೃತಿಕ ವಿಸ್ಮಯ ಉಂಟಾಗಿದೆ. ಕಳೆದ ಮೂರು ದಿನಗಳಲ್ಲಿ ಈ ಬಿರುಕು ವಿಸ್ತಾರಗೊಂಡಿದ್ದು ಪರಿಸರದ ಒಂದು ಮನೆಗೆ ಹಾನಿಯಾಗಿದೆ. ಬಾವಿಯ ಆವರಣ ಗೋಡೆಯೂ ಸೀಳಾಗಿದೆ. ಈ ಭಾಗದಲ್ಲಿ ಈ ರೀತಿಯ ಬಿರುಕು ಕಾಣಿಸಿಕೊಳ್ಳೋದು ಇದೇ ಮೊದಲಲ್ಲ, 2014 ರಲ್ಲೂ ಇದೇ ಮಾದರಿಯಲ್ಲಿ ಭೂಮಿ ಬಾಯ್ತೆರೆದಿತ್ತು. ಈ ಬಾರಿ ಹಳೇಯ ಬಿರುಕುಗಳು ಮತ್ತಷ್ಟು ವಿಸ್ತಾರಗೊಂಡಿದ್ದು, ಜೊತೆಗೆ ಹೊಸ ಬಿರುಕುಗಳು ಕಾಣಿಸಿಕೊಂಡಿದೆ.

ಇದು ಸಾಕಷ್ಟು ಜನವಸತಿ ಇರುವ ಪ್ರದೇಶ, ಹಾಗಾಗಿ ಬಿರುಕುಗಳ ಪ್ರಮಾಣ ಹೆಚ್ಚಾದ್ರೆ ಏನು ಮಾಡೋದು ಅಂತ ಸ್ಥಳೀಯರ ಚಿಂತೆ. ಮನೆಯ ಪಂಚಾಂಗವೇ ಕುಸಿಯುವ ಭೀತಿ ಕೆಲವರಿಗೆ. ಸ್ಥಳಕ್ಕೆ ಗಣಿ ಮತ್ತು ಭೂ ವಿ????ನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪರಿಶೀಲನೆ ನಡೆಸಿದ್ದಾರೆ. ಮಂಚಿಕೆರೆ ಪ್ರದೇಶವು ಕೆಂಪುಕಲ್ಲಿನಿಂದ ಆವೃತವಾಗಿದ್ದು, ಭೂತಳದಲ್ಲಿ ಉಷ್ಣಾಂಶ ಹೆಚ್ಚಿ ನಿರ್ವಾತ ಪ್ರದೇಶ ಉಂಟಾಗಿರುವ ಸಾಧ್ಯತೆ ಇದೆ. ಮಳೆ ಬಂದಾಗ ಈ ನಿರ್ವಾತ ಪ್ರದೇಶದಲ್ಲಿರುವ ಜೌಗುಮಣ್ಣು ಕೊಚ್ಚಿಹೋಗಿ ಕಲ್ಲಿನ ಪದರ ಕುಸಿದಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಕ್ಷಣಕ್ಕೆ ಅಪಾಯವಿಲ್ಲವಾದರೂ, ಡೇಂಜರ್ ಝೋನ್ ನಲ್ಲಿ ಬರುವ ಮನೆಗಳು ಸ್ಥಳಾಂತರಗೊಳಿಸಿದರೆ ಉತ್ತಮ ಅಂತಾರೆ ಅಧಿಕಾರಿಗಳು.

ಮಣಿಪಾಲ ಪ್ರದೇಶದಲ್ಲಿ ಪದೇ ಪದೇ ಇಂತಹಾ ನಿಗೂಢ ಬದಲಾವಣೆಗಳು ಉಂಟಾಗುತ್ತಿದೆ. ಬಿರುಕು ಕಾಣಿಸಿಕೊಳ್ಳೋದು, ಕಡು ಬೇಸಗೆಯಲ್ಲೂ ನೀರು ಚಿಮ್ಮುವುದು ಮುಂತಾದ ಪ್ರಕ್ರಿಯೆಗಳು ನಡೆಯುತ್ತಿದೆ. ಇದು ಯಾವುದೇ ಅಪಾಯದ ಮುನ್ಸೂಚನೆಯೋ ಅಥವಾ ಸಹಜ ಪ್ರಾಕೃತಿಕ ಬದಲಾವಣೆಯೋ  ವಿಶ್ಲೇಷಿಸಬೇಕಾಗಿದೆ.

Related posts

Leave a Reply

Your email address will not be published. Required fields are marked *