
ಕೊಬುಡೋ ಬುಡೋಕಾನ್ ಕರಾಟೆ ಡೋ ಅಸೋಸಿಯೇಶನ್ ಕರ್ನಾಟಕ ಇವರ 13ನೇ ರಾಜ್ಯ ಮಟ್ಟದ ಕರಾಟೇ ಚಾಂಪಿಯನ್ ಶಿಪ್-2019 ಉದ್ಯಾವರ ಗ್ರಾಮ ಪಂಚಾಯಿತಿ ಕ್ರೀಡಾಂಗಣದಲ್ಲಿ ಇದೇ ಜನವರಿ 12 ಹಾಗೂ 13ರಂದ್ದು ನಡೆಯಲಿದೆ ಎಂಬುದಾಗಿ ಕರಾಟೆ ಬುಡೋಕಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಬೊಳ್ಜೆ ಹೇಳಿದ್ದಾರೆ.
ಕಾಪು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ 2500ಕ್ಕೂ ಅಧಿಕ ಕರಾಟೆ ಪಟುಗಳು ಆಗಮಿಸುವ ನಿರೀಕ್ಷೆ ಇದ್ದು ಇಷ್ಟರಲ್ಲೇ ನೋಂದಾಣಿ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸುವ ಕರಾಟೆ ಪಟುಗಳಿಗೆ ಊಟ ವಸತಿ ಉಚಿತವಾಗಿ ನೀಡಲಿದೆ ಎಂದರು, ಈ ಸ್ಪರ್ಧಾ ಕೂಟದಲ್ಲಿ ವಲ್ಡ್ ಕರಾಟೆ ಫೆಡರೇಶನ್ ನೀತಿ ನಿಯಮಗಳನ್ನು ಅಳವಡಿಸಲಾಗಿದೆ, ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ 10 ವಿಭಾಗಗಳಲ್ಲಿ ಕಟಾ, ಕುಮಿಟೆ ಸ್ಪರ್ಧೆಗಳು ನಡೆಯಲಿದೆ, ಹಾಗೂ ಗುಂಪು ಕಟಾ, ಆಯುಧ ಕಟಾ ಹಾಗೂ ಗ್ರ್ಯಾಂಡ್ ಚಾಂಪಿಯನ್ ಶಿಪ್ ಕೂಡಾ ನಡೆಯಲಿದೆ ಎಂದರು.
ಈ ಸಂದರ್ಭ ಕನ್ನಡ ಗಾನಕೋಗಿಲೆ ಖ್ಯಾತಿಯ ಮಾ|ಲಿಖಿತ್ ಉಮೇಶ್ ಕರ್ಕೇರ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾಮ ಪಾಲನ್ ಹಾಗೂ ಶಿಕ್ಷಣ ಇಲಾಖೆ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕರಾಟೆ ಪಟುಗಳನ್ನು ಸನ್ಮಾನಿಸಲಿದ್ದೇವೆ ಎಂದರು. ಕರಾಟೆ ಸ್ಪರ್ಧಾಕೂಟವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಲಿದ್ದಾರೆ, ಮುಖ್ಯ ಅಥಿತಿಗಳಾಗಿ ಜಿಲ್ಲೆಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ದಿಗಜ್ಜರು ಭಾಗವಹಿಸಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಕುಬುಡೋ ಬುಡೋಕಾನ್ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ಶಿಹಾನ್ ರವಿ ಕುಮಾರ್ ಉದ್ಯಾವರ್, ಕರಾಟೆ ಶಿಕ್ಷಕರಾದ ಉಮೇಶ್ ಕರ್ಕೇರ, ಸೀತಾರಾಮ್ ಪೂಜಾರಿ ಉದ್ಯಾವರ ಗ್ರಾ.ಪಂ. ಸದಸ್ಯ ಸೀತಾರಾಮ್ ಉಪಸ್ಥಿತರಿದ್ದರು.