Header Ads
Breaking News

ಎಸ್.ಡಿ.ಎಂ ಝೇಂಕಾರ ಸ್ಟಾರ್‍ನೈಟ್ 2020 ವಾಸುಕಿ ‘ವೈಭವ’ದ ಅಲೆಯೊಂದಿಗೆ ಆದರ್ಶದ ಪ್ರಭೆ

ಉಜಿರೆ.ಫೆ, 13: ಮುಗ್ಧ ಮುಖ, ಅದಕ್ಕೆ ತಕ್ಕ ಕನ್ನಡಕ. ವೇದಿಕೆಯೆಡೆಗೆ ನಡೆದು ಬಂದು ಕಾಣಿಸಿಕೊಂಡಾಕ್ಷಣ ಅನುರಣನಗೊಂಡ ಕರತಾಡನ. ಕನ್ನಡ ಚಲನಚಿತ್ರ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಅವರ ಧ್ವನಿಯ ನಿನಾದ ಹರಡಿದಾಗಲಂತೂ ಅಲ್ಲಿದ್ದವರ ಖುಷಿಗೆ ಪಾರವೇ ಇರಲಿಲ್ಲ. ಒಂದಷ್ಟು ಮಾತು. ಮತ್ತೊಂದಿಷ್ಟು ಹಾಸ್ಯ. ಜೊತೆಜೊತೆಗೇ ಹೊರಹೊಮ್ಮಿದ ಅವರ ಗಾನಮಾಧುರ್ಯ ಯುವಮನಸುಗಳನ್ನು ಸೆಳೆಯಿತು. ಯಶಸ್ಸು ಮತ್ತು ವೃತ್ತಿಪರ ತೃಪ್ತಿಯ ಭಿನ್ನತೆಗಳನ್ನು ಗುರುತಿಸಿ ವ್ಯಾಖ್ಯಾನಿಸುವಾಗ ಅವರಿಂದ ಉಲ್ಲೇಖಿತವಾದ ಮಹಾತ್ಮಾ ಗಾಂಧಿ ಚಿಂತನೆಯ ನಮೂನೆ ಅಲ್ಲಿದ್ದವರಿಗೆಲ್ಲಾ ಪರಿಚಯವಾಯಿತು. ಜನಪ್ರಿಯ ವ್ಯಕ್ತಿತ್ವಗಳು ಹೊಸ ತಲೆಮಾರಿಗೆ ಆದರ್ಶವಾಗಬಹುದಾದ ಮಾದರಿ ನಿರೂಪಿತವಾಯಿತು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರವು ಆಯೋಜಿಸಿದ 2020ರ ಝೇಂಕಾರ ಕಾರ್ಯಕ್ರಮದ ಭಾಗವಾಗಿ ಬುಧವಾರ ಸಂಜೆ ಏರ್ಪಟ್ಟ ‘ಸ್ಟಾರ್ ನೈಟ್’ನ ಝಲಕ್ ಇದು. ಇದರ ಅತಿಥಿ ತಾರೆಯಾಗಿ ಪ್ರಮುಖ ಆಕರ್ಷಣೆಯಾಗಿದ್ದವರು ಖ್ಯಾತ ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್.ವಾಸುಕಿ ವೈಭವ್ ಅವರನ್ನು ನೋಡಬೇಕು, ಅವರು ಹಾಡುವುದನ್ನು ಕೇಳಬೇಕು ಎಂಬ ಕಾತುರತೆ ಕಿಕ್ಕಿರಿದು ನೆರೆದಿದ್ದ ವಿದ್ಯಾರ್ಥಿಗಳಲ್ಲಿತ್ತು. ವಾಸುಕಿ ವೈಭವ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಾಧ್ಯಾಪಕ ವೃಂದ ಸಹ ಮುಗಿಬಿದ್ದಿತು. ವಾಸುಕಿ ವೈಭವ್ ಅವರನ್ನು ವಿದ್ಯಾರ್ಥಿ ನಿರೂಪಕರಾದ ಅನುವಿತ್ ಮತ್ತು ವೇದಿಕೆಗೆ ಕರೆತರುವಾಗ ಪ್ರೇಕ್ಷಕರ ಉತ್ಸಾಹ ಮುಗಿಲುಮುಟ್ಟಿತ್ತು. ವಾಸುಕಿ ವೈಭವ್ ಅವರನ್ನು ಕಣ್ತುಂಬಿಕೊಳ್ಳಬೇಕೆಂಬ ಆತುರ ಮನೆಮಾಡಿತ್ತು. ಕುತೂಹಲಕಾರಿ ಪ್ರಶ್ನೆ-ಸಂವಾದದ ಮೂಲಕ ವಾಸುಕಿ ಅವರ ಜೀವನ, ಅನುಭವಗಳನ್ನು ತೆರೆದಿಡುತ್ತಾ ಹೋದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿನಿ ಸಾನಿಯಾ, ವಾಸುಕಿ ಅವರು ‘ಬಿಗ್ ಬಾಸ್’ಗೆ ತೆರಳುವ ಮೊದಲು ತಮಗೆ ಆತ್ಮೀಯ ಪರಿಚಯವಿತ್ತು ಎಂದು ನಾಟಕೀಯವಾಗಿ ನಿರೂಪಿಸಿದರು. ವಾಸುಕಿ ಅವರು  ನಾಟಕೀಯವಾಗಿ ‘ಸಾನೂ’ ಎಂದು ಕರೆದಾಗ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ನಂತರ ವಾಸುಕಿಯವರ ಕಣ್ಣಿಗೆ ಬಟ್ಟೆ ಕಟ್ಟಿ ವಿವಿಧ ತರಕಾರಿಗಳನ್ನು ಗುರುತಿಸುವ ಸವಾಲನ್ನು ನೀಡಲಾಯಿತು. ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಮೋಕ್ಷ ರೈ ಈ ಚಟುವಟಿಕೆಯನ್ನು ನಡೆಸಿಕೊಟ್ಟರು.

ಪದವಿ ವಿದ್ಯಾರ್ಥಿಗಳಾದ ಶ್ರೀರಕ್ಷಾ ಮತ್ತು ಸ್ವಾತಿ ನಡೆಸಿಕೊಟ್ಟ ಮುಂದಿನ ಕಾರ್ಯಕ್ರಮ ಸ್ವಾರಸ್ಯಕರವಾಗಿತ್ತು. ‘ಬಿಗ್ ಬಾಸ್’ ಅನುಭವದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ಹೊರ ಜಗತ್ತಿನ ಸಂಪರ್ಕವಿಲ್ಲದೆ ನೂರು ದಿನ ಬದುಕುವುದು ಸುಲಭವಲ್ಲ. ಹೊಸ ಅನುಭವ ಪಡೆಯಲು ಎಂದು ಬಿಗ್ ಬಾಸ್ ನಲ್ಲಿ ಭಾಗವಹಿಸಿದೆ’ ಎಂದರು. ಪದವಿ ವಿದ್ಯಾರ್ಥಿ ಶಶಾಂಕ ಕಾರ್ಯಕ್ರಮವನ್ನು ನಿರೂಪಿಸಿದರು.ಕಾಲೇಜಿನ ಬಿ.ವೋಕ್ ವಿದ್ಯಾರ್ಥಿಗಳು ನಿರ್ಮಿಸಿದ ‘ಪಂಚಾವತಾರ’ ವೆಬ್ ಸಿರೀಸ್‍ನ ಪ್ರೋೀಮೊ ಬಿಡುಗಡೆಗೊಳಿಸಲಾಯಿತು.

‘ಬಿಗ್‍ಬಾಸ್’ ಕಾರ್ಯಕ್ರಮದ ನಂತರ ಭೇಟಿ ನೀಡಿದ ಮೊದಲ ಕಾಲೇಜು ಎಸ್ ಡಿ ಎಂ. ಮೊದಲ ಸಂಬಳ, ಮೊದಲ ಶಾಲೆ ಇಷ್ಟವಾದ ಹಾಗೆ ಎಸ್ ಡಿ ಎಂ ಕಾಲೇಜು ಇಷ್ಟವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ‘ರಾಮಾ ರಾಮಾ ರೇ’ ಚಿತ್ರವನ್ನು ನೆನಪಿಸಿಕೊಂಡ ಅವರು ವೃತ್ತಿ ಜೀವನಕ್ಕೆ ತಿರುವು ನೀಡಿದ ಬಗೆಯನ್ನು ಹಂಚಿಕೊಂಡರು. ಸ್ಫೂರ್ತಿದಾಯಕವಾಗಿ ಮಾತನಾಡಿದ ವಾಸುಕಿ ವೈಭವ್ ‘ ಕೆಲಸದಲ್ಲಿ ಪರಿಶ್ರಮ ಮುಖ್ಯ. ಗೆಲುವಿಗಿಂತ ತೃಪ್ತಿ ಮುಖ್ಯ’ ಎಂದು ತಮ್ಮ ಸಂತೋಷಮಯ ಜೀವನದ ಗುಟ್ಟನ್ನು ವ್ಯಾಖ್ಯಾನಿಸಿದರು. ಮಹಾತ್ಮಾ ಗಾಂಧೀಜಿಯವರ ಆತ್ಮಕಥನದಲ್ಲಿ ಉಲ್ಲೇಖಿತವಾದ ವಿಶ್ಲೇಷಣೆಯನ್ನು ನೆನಪಿಸಿಕೊಂಡರು. ಯಶಸ್ಸು ಮತ್ತು ತೃಪ್ತಿಯ ಕುರಿತ ಗಾಂಧಿ ಚಿಂತನೆ ತಮ್ಮನ್ನು ಪ್ರಭಾವಿಸಿದ ಬಗೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ .ಸತೀಶ್ಚಂದ, ಡೀನ್ ಗಣಪಯ್ಯ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ‘ಕನಸು ಮಾರಾಟಕ್ಕಿದೆ’ ಚಿತ್ರ ತಂಡ ‘ಝೇಂಕಾರ 2020’ರ ಸ್ಟಾರ್ ನೈಟ್ ಕಾರ್ಯಕ್ರಮಕ್ಕೆ ಹೊಸ ಮೆರಗು ನೀಡಿತು. ಚಿತ್ರ ನಿರ್ದೇಶಕ ಸ್ಮಿತೇಶ್ ಭಾರ್ಯ, ಹಾಸ್ಯ ನಟ ಅನೀಶ್ ವೇಣೂರು, ಪ್ರಜ್ಞೇಶ್ ಶೆಟ್ಟಿ, ಸ್ವಸ್ತಿಕಾ ಪೂಜಾರಿ, ಸಂತೋ ಷ್  ಆಚಾರ್ ಮತ್ತು ದೀಕ್ಷಿತ್ ಪೂಜಾರಿ ಉಪಸ್ಥಿತರಿದ್ದರು. ‘ಕನಸಿನ ಮಾರಾಟದ’ ಪರಿಶ್ರಮ, ಅನುಭವಗಳನ್ನು ಹಂಚಿಕೊಂಡರು. ನಿರ್ದೇಶಕ ಸ್ಮಿತೇಶ್ ಭಾರ್ಯ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಚಿತ್ರದ ಟೀಸರ್ ಪ್ರದರ್ಶಿಸಲಾಯಿತು.

Related posts

Leave a Reply

Your email address will not be published. Required fields are marked *