

ಮಂಗಳೂರಿನ ಎ.ಜೆ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯಲ್ಲಿ 2021ನೇ ಸಾಲಿನ ಪದವಿ ಪ್ರದಾನ ಸಮಾರಂಭವು ಎಜೆ ಅಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 105 ಪದವೀಧರರು ಮತ್ತು 18 ಮಂದಿ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
ವಾಯ್ಸ್: ಪದವಿ ಪ್ರದಾನ ಕಾರ್ಯಕ್ರಮವನ್ನು ಮಣಿಪಾಲ್ ಸಮೂಹ ಆರೋಗ್ಯ ಸೇವಾ ಸಂಸ್ಥೆಗಳ ವೈದ್ಯಕೀಯ ಸಲಹಾ ಮಂಡಳಿಯ ಅಧ್ಯಕ್ಷ ಹಾಗೂ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಆಂಡ್ ಯೂರಾಲಜಿಯ ನಿರ್ದೇಶಕ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಶೇ.75ರಷ್ಟು ಆರೋಗ್ಯ ಸೇವೆ ಖಾಸಗಿ ರಂಗದಲ್ಲಿದೆ. ಕೊರೊನಾ ಸಂದರ್ಭ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಜತೆಗೂಡಿ ಕಾರ್ಯನಿರ್ವಹಿಸಿದ ಕಾರಣ ಈ ರೋಗವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಸಾಧ್ಯವಾಗಿದೆ ಎಂದರು.
ಎ.ಜೆ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅಧ್ಯಕ್ಷತೆ ವಹಿಸಿದ್ದರು. 105 ಪದವೀಧರರು ಹಾಗೂ 18 ಮಂದಿ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.
ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ರವೀಶ್ ತುಂಗ ಸ್ವಾಗತಿಸಿದರು. ಡೀನ್ ಡಾ. ಅಶೋಕ್ ಹೆಗ್ಡೆ ಪ್ರಸ್ತಾವನೆ ಗೈದು ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭ ಮಾಜಿ ಡೀನ್ ಡಾ. ರಮೇಶ್ ಪೈ, ಅಸೋಸಿಯೇಟ್ ಡೀನ್ ಡಾ. ಪ್ರಾನ್ಸಿಸ್ ಎನ್.ಪಿ. ಮೊಂತೆರೋ, ಡಾ. ರಾಯನ್, ಡಾ. ನಿಶಿತಾ ಉಪಸ್ಥಿತರಿದ್ದರು.