Header Ads
Breaking News

ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ಅಷ್ಟಬಂಧ ಬ್ರಹ್ಮಕಲಶೋತ್ಸವ; ಜಾತ್ರೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆ

ಬಂಟ್ವಾಳ: ಶ್ರದ್ಧಾ ಕೇಂದ್ರಗಳು ಉತ್ತಮವಾಗಿದ್ದರೆ ಭಕ್ತಿ, ಶ್ರದ್ಧೆ ಉತ್ತಮವಾಗಿರುತ್ತದೆ. ಕಕ್ಯಪದವಿನ ಗ್ರಾಮೀಣ ಪ್ರದೇಶದ ಜನರ ದಾನ, ಧರ್ಮದ ಗುಣದ ಹೃದಯ ವೈಶಾಲ್ಯತೆ, ಶ್ರದ್ಧೆ, ಅಚಲ ವಿಶ್ವಾಸ ಅನನ್ಯವಾದುದು. ಆದ್ದರಿಂದ ದೇವಸ್ಥಾನ ಅಭಿವೃದ್ಧಿಯಾಗಿದೆ ಎಂದು ಸುಬ್ರಹ್ಮಣ್ಯ ಶ್ರೀ ನರಸಿಂಹ ಮಠ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹೇಳಿದರು. 

ನವೀಕರಣಗೊಂಡ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಜಾತ್ರೆಯ ಪ್ರಯುಕ್ತ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ದೇವರಲ್ಲಿ ನಂಬಿಕೆಯಿರಿಸಿ ಶ್ರದ್ಧೆ, ಭಕ್ತಿಯಿಂದ ಸತ್ಯ-ಧರ್ಮದ ಮಾರ್ಗದಲ್ಲಿ ನಡೆದಾಗ ಉತ್ತಮ ಬದುಕು ಸಾಧ್ಯವಾಗುತ್ತದೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಈ ಹಿಂದೆ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಢ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇದೀಗ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರೂ ಆರ್ಥಿಕವಾಗಿ ಸ್ಥಿತಿವಂತರಾಗಿ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಮಾಡಿ ಕೊಟ್ಟಿದೆ. ತುಳುನಾಡಿನಲ್ಲಿ ಜನರಿಗೆ ಅತಿ ಹೆಚ್ಚು ಭೂಮಿ ಹಂಚಿಕೆಯಾಗಿರುವ ಪ್ರದೇಶವಾಗಿದೆ. ಇದರಿಂದಾಗಿ ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಪುನುರುತ್ಥಾನ ಸಾಧ್ಯವಾಗಿದೆ ಎಂದರು.

ಅಮೆರಿಕಾ ನ್ಯೂಜೆರ್ಸಿ ಶ್ರೀ ಕೃಷ್ಣ ಬೃಂದಾವನದ ಪ್ರ.ಅರ್ಚಕ ಯೋಗೇಂದ್ರ ಭಟ್ ಉಳಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ಸ್ಥಾಪಕಾಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬಾರ್ದಡ್ಡು ಗುತ್ತು ಮನೆತನದ ಮೊಕ್ತೇಸರ ರಾಜವೀರ ಜೈನ್, ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *