Header Ads
Breaking News

ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಕೆದೂರು ಗ್ರಾಮದ ಕೊರಗರ ಕುಟುಂಬ

ಈ ಜೋಪಡಿಯಲ್ಲಿ ಮನುಷ್ಯರಾದವರು ನಿಂತುಕೊಳ್ಳಲು ಸಾಧ್ಯವಿಲ್ಲ. ಮಲಗುವುದಾದರೆ ಕೈಕಾಲು ಮಡಚಿಕೊಂಡೇ ಮಲಗಬೇಕು. ಇನ್ನು ವಿದ್ಯುತ್ ಕನಸಿನ ಮಾತು ಬಿಡಿ. ಇರುವುದೊಂದೇ ಚಿಕ್ಕ ಜೋಪಡಿಯಲ್ಲಿ ಅಡುಗೆ ಮಾಡಿಕೊಳ್ಳಬೇಕು, ಮಗುವಿನ ತೊಟ್ಟಿಲು ತೂಗಾಡಬೇಕು. ತೆಂಗಿನ ಮರಗಳಿಗೆ ಬಣ್ಣಬಣ್ಣದ ಹರಕಲು ಸೀರೆಗಳನ್ನು ಸುತ್ತಿದ ಸ್ನಾನಗೃಹ ನೋಡಿದರೆ ಎಂತವರಿಗೂ ಕಣ್ಣೀರು ಬಾರದೇ ಇರದು. ಇರಲೊಂದು ಸುಸಜ್ಜಿತ ಮನೆಯಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕೊರಗ ಕುಟುಂಬಗಳ ಕಣ್ಣೀರಿನ ಸ್ಟೋರಿಯನ್ನು ನೀವೊಮ್ಮೆ ನೋಡಲೇಬೇಕು.

 ಕೊರಗರನ್ನಾಗಿ ನೋಡದೆ ಅವರು ನಮ್ಮಂತೆ ಮನುಷ್ಯರು ಎಂಬ ಭಾವನೆ ಬದಲಾಗುವ ತನಕ ಮೂಲನಿವಾಸಿಗಳ ಬದುಕು ಸುಧಾರಿಸೋದಿಲ್ಲ. ಮೂಲನಿವಾಸಿಗಳ ಜೀವನ ಮಟ್ಟ ಸುಧಾರಿಸುವ ಸಲುವಾಗಿಯೇ ಇರುವ ಐಟಿಡಿಪಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನೈಜ ಕಾಳಜಿ, ಬದ್ದತೆ ಇದ್ದರೆ ಮಾತ್ರ ಕೊರಗರು ಎಲ್ಲರಂತೆ ಮನುಷ್ಯರಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನೋದು ಒಪ್ಪುವ ಮಾತು. ಮೂಲನಿವಾಸಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯವೂ ಇಲ್ಲದೆ ಹೀಗೂ ಬದುಕಲು ಸಾಧ್ಯವಾ ಎನ್ನುವ ಪ್ರಶ್ನೆ ೨೧ನೇ ಶತಮಾನದ ಅಂಚಿನಲ್ಲಿಯೂ ಹುಟ್ಟಿಕೊಳ್ಳುತ್ತಿದೆ ಎಂದರೆ ಕೊರಗರನ್ನು ನೋಡುವ ದೃಷ್ಟಿ, ಅಧಿಕಾರಿಗಳ ಕಾಳಜಿ, ಜನಪ್ರತಿನಿಧಿಗಳ ಆಸಕ್ತಿ ಬದಲಾಗಿಲ್ಲ ಎನ್ನೋದಕ್ಕೆ ಸಾಕ್ಷಿ. ಮನುಷ್ಯ ಜೀವನಕ್ಕೆ ಬೇಕಾಗುವ ಕನಿಷ್ಠ ಸೌಲಭ್ಯವೂ ಸಿಗದೆ ಬದುಕುತ್ತಿರುವ ಮೂಲನಿವಾಸಿಗಳ ಜೀವನ ನಿಜಕ್ಕೂ ಕರುಣಾಜನಕ. ಅತ್ಯಂತ ಕನಿಷ್ಠ ಬದುಕಿಗೆ ಕಾರಣ ಹುಡುಕಿ ಹೊರಟರೆ ಸಿಗುವ ಉತ್ತರ ವ್ಯವಸ್ಥೆಯ ವೈಪರಿತ್ಯ.

ಹೌದು.. ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯಿತಿ ಹೊಸಮಠ ಕೊರಗ ಕಾಲನಿಯೇ ವೈರುಧ್ಯಗಳ ತವರು. ವಿದ್ಯುತ್, ಕುಡಿಯುವ ನೀರು, ರೇಶನ್ ಕಾರ್ಡ್ ಕೊರತೆಗಳ ಪಟ್ಟಿಯ ಲಿಸ್ಟ್‌ಗಳು. ಕಳಚಿಕೊಂಡ ಕಿಟಕಿ, ಹಾಳಾದ ಪಕಾಸಿ, ರೀಪಿಗೆ ತೂಗಾಡುವ ಹೆಂಚು, ಮನೆ ಅರ್ಧ ಮಾಡಿಗೆ ಹೆಂಚಿದ್ದರೆ, ಮತ್ತರ್ಧ ಅಂಗಾತ ಮಲಗಿ ನಕ್ಷತ್ರ ಎಣಿಸಬಹುದು. ನಾಲ್ಕು ಮನೆಗಳಿಗೆ ಶೌಚಾಲಯ ಇದ್ದರೆ, ಉಳಿದ ನಾಲ್ಕು ಮನೆಗೆ ಎರಡೇ ಶೌಚಾಲಯ! ತೆಂಗಿನ ಮರಕ್ಕೆ ಹಳೇ ಸೀರೆ ಸುತ್ತಿಕೊಂಡಿದ್ದರಿಂದ ಅದೇ ಬಣ್ಣಬಣ್ಣದ ಸ್ನಾನಗೃಹ. ಬಯಲೇ ಅಡುಗೆ ಕೊಠಡಿ! ಈ ಕಾಲನಿಯ ಹಿರಿಯ ಜೀವ ಲಕ್ಷ್ಮೀಯ ಪುತ್ರ ಪ್ರಭಾಕರ ಹಾಗೂ ಪತ್ನಿ ವಾಸಿಸುವ ಮನೆ ಟಾರ್ಪಲ್ ಹೊದಿಸಿದ ಚಿಕ್ಕ ಜೋಪಡಿ, ಗಾಳಿ ಬೆಳಕಿಲ್ಲದೆ, ಒಂದು ಹಾಲುಗಲ್ಲದ ಹಸುಗೂಸು ಸೇರಿ ಇಬ್ಬರು ಬುಡ್ಡಿದೀಪದ ಬೆಳಕಲ್ಲಿ ಬದುಕುತ್ತಿದ್ದಾರೆ. ರೇಶನ್ ಕಾರ್ಡ್‌ಗೆ ಅರ್ಜಿ ಕೊಟ್ಟರೂ ರೇಶನ್ ಕಾರ್ಡ್ ಸಿಗದಿದ್ದರಿಂದ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ. ಒಟ್ಟಾರೆ ಮೂಲನಿವಾಸಿಗಳ ಬದುಕು ಮೂಲಭೂತ ಸೌಲಭ್ಯ ವಂಚಿತ ಎನ್ನೋದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕೊನೆಯಪಕ್ಷ ಕನಿಷ್ಠ ಸೌಲಭ್ಯವಾದ ಮನೆಯೂ ಇಲ್ಲಾ ಎಂದರೆ ಬದುಕುವುದು ಹೇಗೆ?
ವಾಯ್ಸ್೩: ಕೊರ್ಗಿ ಹಾಗೂ ಕೆದೂರು ಗ್ರಾಮ ಪಂಚಾಯಿತಿ ನಡುವಿನ ಹೊಸಮಠದಲ್ಲಿ ಇರುವ ಮೂಲನಿವಾಸಿಗಳ ಮೂಲ ಸುಣ್ಣಾರಿ. ಏಳು ದಶಕದ ಹಿಂದೆ ಮೂಲನಿವಾಸಿಗಳು ಬಂದು ಕೂತಿದ್ದು ಹೊಸಮಠದಲ್ಲಿ. ಸುಮಾರು ಒಂದೆ ಎಕ್ರೆ ಜಾಗದಲ್ಲಿ ಮೊದಲು ಒಂದು ಕುಟುಂಬ ಬಂದು ನೆಲೆಸಿದರೂ ಕುಟುಂಬ ವಿಸ್ತರಣೆಯಿಂದ ಒಂದು ಮನೆ ಎಂಟಾಗಿದೆ. ಇಬ್ಬರಿದ್ದ ಮನೆಯಲ್ಲಿ ಜನ ಸಂಖ್ಯೆ ಒಟ್ಟು ನಲವತ್ತೊಂದು. ಒಂಟಿ ಮನೆ ಬದಲು ಈಗ ಕಾಲನಿಯಾಗಿದೆ! ಹೊಸಮಠಕ್ಕೆ ಮೊದಲು ಬಂದು ಕೂತಿದ್ದು ಲಕ್ಷ್ಮೀ ಹಾಗೂ ಕಾಳ ದಂಪತಿ. ಕಾಳ ನಿಧನ ಹೊಂದಿದ್ದು, ಲಕ್ಷ್ಮೀ ಕಾಲನಿ ಹಿರಿಯ ಮಹಿಳೆ. ಲಕ್ಷ್ಮೀ ದಂಪತಿಗೆ ನಾಲ್ಕು ಗಂಡು ನಾಲ್ಕು ಹೆಣ್ಣು ಮಕ್ಕಳಿದ್ದು, ಒಬ್ಬಳು ಮಗಳು ಮೃತಪಟ್ಟಿದ್ದಾಳೆ. ನಾಲ್ಕು ಗಂಡು ಮಕ್ಕಳು ನಾಲ್ಕು ಹೆಣ್ಣುಮಕ್ಕಳು ಅವರ ಕುಟುಂಬ ವಿಸ್ತರಿಸಿಕೊಂಡು ಜನಸಂಖ್ಯೆ ನಲವತ್ತೊಂದಕ್ಕೆ ಮುಟ್ಟಿದೆ. ಒಟ್ಟು ಎಂಟು ಮನೆಯಲ್ಲಿ ಎಲ್ಲರೂ ವಾಸಮಾಡುತ್ತಿದ್ದು, ಒಬ್ಬರು ಪ್ಲಾಸ್ಟಿಕ್ ಜೋಪಡಿಯಲ್ಲಿ ವಾಸಮಾಡುತ್ತಿದ್ದು, ಮತ್ತೊಬ್ಬರು ಈಗಲೋ ಆಗಲೋ ಬೀಳುವ ಮನೆಯಲ್ಲಿ ಭಯದ ನೆರಳಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹಾಗಂತ ಉಳಿದ ಮನೆ ಸರಿಯಿದೆ ಅಂತಲ್ಲ. ಅತ್ಯಂತ ಶೀಘ್ರವೇ ಎರಡು ಮನೆಗಳ ನಿರ್ಮಾಣ ಕಾರ್ಯ ಆಗಬೇಕಿದೆ. ಐಟಿಡಿಪಿ ಇಲಾಖೆಯಲ್ಲಿ ಕೊರಗರ ಅಭಿವೃದ್ಧಿಗೆ ಹಣದ ಕೊರತೆ ಇಲ್ಲಾ ಎಂದು ಅಧಿಕಾರಿಗಳು ಹೇಳುತ್ತಾರೆ. ಕಾಲನಿ ಅಭಿವೃದ್ಧಿ ಅನುದಾನದಲ್ಲಿ ಉಳ್ಳವರ ಮನೆ ಸಂಪರ್ಕಕ್ಕೆ ರಸ್ತೆ ಮಾಡುವ ಮೂಲಕ ಕೊರಗರ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬರುವುದು ಸತ್ಯ. ಹೊಸಮಠ ಕಾಲನಿ ಕುಮಾರ್ ಎಂಬವರ ಮಗಳು ಕೆದೂರು ಪ್ರೌಢಶಾಲೆಯಲ್ಲಿ9ನೇ ತರಗತಿ ಓದಿದ್ದು, ಕಾರಣಾಂತರದಿಂದ ಶಾಲೆ ಬಿಟ್ಟಿದ್ದಾಳೆ. ವಿ4 ವಾಹಿನಿಯ ಮಧ್ಯಸ್ಥಿಕೆಯಲ್ಲಿ ಬಾಲಕಿ ಗುರುವಾರದಿಂದ ಮರಳಿ ಶಾಲೆ ಮೆಟ್ಟಿಲೇರಲಿದ್ದಾಳೆ. ವಿ4 ಪ್ರತಿನಿಧಿ ಕೊರಗ ಕಾಲನಿ ಭೇಟಿ ಸಂದರ್ಭ ಬಾಲಕಿ ಶಾಲೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಗಮನಕ್ಕೆ ತರಲಾಗಿದೆ. ಬಾಲಕಿ ಜತೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿದ್ದರಿಂದ ಮತ್ತೆ ಶಾಲೆಗೆ ಹೋಗುವ ಇಚ್ಛೆ ಬಾಲಕಿ ವ್ಯಕ್ತ ಪಡಿಸಿದ್ದಾಳೆ ಕೆದೂರು ಪ್ರೌಢಶಾಲೆ ಮುಖ್ಯಶಿಕ್ಷಕರ ಜೊತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ ಬಾಲಕಿಗೆ ಶಾಲೆಗೆ ಅಡ್ಮಿಶನ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಾಲಕಿಗೆ 17 ವರ್ಷ ಆಗುತ್ತಿರುವುದರಿಂದ ಶಾಲೆಯಲ್ಲಿ ನೇರವಾಗಿ ಎಸೆಸ್ಸೆಲ್ಸಿ ಕೂರಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಓಟು ಬಂದಾಗ ಮಾತ್ರ ಕೊರಗ ಕಾಲನಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಕೊರಗರ ಕಷ್ಟ ಸುಖ ಆಲಿಸಿ ಅಂಗೈಯಲ್ಲಿ ಆಕಾಶ ತೋರಿಸಿ ಹೋದವರು ಮತ್ತೆ ಈ ಕಡೆ ಮುಖ ಹಾಕೋದಿಲ್ಲ. ಪಡಿತರ ಚೀಟಿ ಸಿಕ್ಕಿಲ್ಲ. ಮನೆಯೂ ಇಲ್ಲದೆ ಜೋಪಡಿಯಲ್ಲಿ ವಿದ್ಯುತ್ ಇಲ್ಲದೆ ಕಾಲ ಕಳೆಯುವುದು ಕಷ್ಟಕರ. ಇನ್ನಾದರೂ ಐಟಿಡಿಪಿ ಇಲಾಖೆ, ಜನಪ್ರತಿನಿಧಿಗಳು ಕೊರಗರ ಕೊರಗನ್ನು ಆಲಿಸಿ ಶೀಘ್ರವೇ ನೆರವಿಗೆ ಧಾವಿಸಬೇಕಿದೆ.

Related posts

Leave a Reply

Your email address will not be published. Required fields are marked *