Header Ads
Breaking News

ಕರಾವಳಿ ಸಮೂಹ ಸಂಸ್ಥೆಯಲ್ಲಿ ದೀಪಾವಳಿ ಆಚರಣೆ

ಕೋವಿಡ್ ಮಹಾಮಾರಿ ಈ ಬಾರಿ ಎಲ್ಲಾ ಸಂಭ್ರಮಗಳಿಗೆ, ಹಬ್ಬ,ಹರಿದಿನಗಳ ಆಚರಣೆಗೆ ಬ್ರೇಕ್ ಹಾಕಿದೆ. ದೀಪಾವಳಿಯ ವೇಳೆಗಾದರೂ ಪರಿಸ್ಥಿತಿ ಸುಧಾರಿಸಬಹುದು ಎಂದು ಅಂದುಕೊಂಡಿದ್ದವರು ನಿರಾಸೆಯ ಕಾರ್ಮೋಡದಲ್ಲೇ ದೀಪಗಳ ಹಬ್ಬವನ್ನು ಆಚರಿಸುವಂತೆ ಮಾಡಿದೆ. ಹೀಗಾಗಿ ಈ ಬಾರಿ ಎಲ್ಲೆಡೆ ಸರಳವಾಗಿ ಆಚರಣೆ ಕಂಡುಬಂದಿದ್ದು, ವರ್ಷಂಪ್ರತಿ ಅದ್ಧೂರಿ ದೀಪಾವಳಿ ಆಚರಣೆಗೆ ಸಾಕ್ಷಿಯಾಗುತ್ತಿದ್ದ ಮಂಗಳೂರಿನ ಕರಾವಳಿ ಸಮೂಹ ಸಂಸ್ಥೆಗಳಲ್ಲಿ ಸರಳವಾಗಿ ಹಬ್ಬ ಆಚರಿಸಲ್ಪಟ್ಟಿದೆ.

ಕಡಲನಗರಿ ಮಂಗಳೂರು ಹೇಳಿ ಕೇಳಿ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ನಗರ.ಇಲ್ಲಿ ನಡೆಯುವ ಪ್ರತಿಯೊಂದು ಹಬ್ಬ, ಹರಿದಿನ, ಆಚರಣೆಗಳೂ ವಿಭಿನ್ನ. ಎಲ್ಲಾ ಹಬ್ಬ ಹರಿದಿನಗಳಂತೆಯೇ ದೀಪಾವಳಿಯೂ ತನ್ನದೇ ಆದ ಆಚರಣೆಗಳ ಮೂಲಕ ಸಂಭ್ರಮಿಸಲ್ಪಡುತ್ತದೆ. ಆದರೆ ಈ ಬಾರಿ ಕೊರೋನಾ ಕರಿಛಾಯೆ ದೀಪಾವಳಿಯ ಸಂಭ್ರಮಕ್ಕೆ ಕಡಿವಾಣ ಹಾಕಿದೆ.ಜೊತೆಗೆ ಪಟಾಕಿಗಳ ಮೇಲೆ ಸರ್ಕಾರ ಹೇರಿರುವ ನಿರ್ಬಂಧವೂ ದೀಪಾವಳಿಯು ಸರಳವಾಗಿ ಹಣತೆ, ದೀಪಗಳಿಗೆ ಸೀಮಿತವಾಗುವಂತೆ ಮಾಡಿದೆ.ಅದರಂತೆ ವರ್ಷಂಪ್ರತಿ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸುತ್ತಿದ್ದ ಮಂಗಳೂರಿನ ಕರಾವಳಿ ಸಮೂಹ ಸಂಸ್ಥೆಯು ಈ ಬಾರಿ ಸರಳವಾಗಿ ಹಬ್ಬವನ್ನು ಆಚರಿಸಿದೆ.

ವರ್ಷಂಪ್ರತಿ ಕರಾವಳಿ ಕಾಲೇಜುಗಳ ಸಮೂಹ ಸಂಸ್ಥೆ ದೀಪಾವಳಿ ಆಚರಣೆ ಅದ್ಧೂರಿಯಾಗಿರುತ್ತಿತ್ತು. ಕ್ಯಾಂಪಸ್ ತುಂಬಾ ದೀಪಗಳ ಅಲಂಕಾರ, ವೆರೈಟಿ ವೆರೈಟಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಿವಿಗಡಚಿಕ್ಕುವಂತೆ ಬಣ್ಣಬಣ್ಣದ, ವೈವಿಧ್ಯಮಯ ಪಟಾಕಿಗಳು ಆಕಾಶದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸುತ್ತಿದ್ದವು.ಆದರೆ ಈ ಬಾರಿ ಅದ್ಯಾವುದೂ ಇಲ್ಲದೆ ಕೇವಲ ದೀಪಗಳಿಗೆ ಸೀಮಿತವಾಗಿ ಹಬ್ಬವು ಕ್ಯಾಂಪಸ್‌ನಲ್ಲಿ ಆಚರಿಸಲ್ಪಟ್ಟಿತು. ಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದ ಬೇಸರ ವಿದ್ಯಾರ್ಥಿಗಳ ಮುಖದಲ್ಲಿ ಕಾಣಿಸುತ್ತಿತ್ತು.

ಒಟ್ಟಿನಲ್ಲಿ ಈ ವರ್ಷದ ನಾಗರಪಂಚಮಿ, ಗಣೇಶ ಚತುರ್ಥಿ, ವರಮಹಾಲಕ್ಷ್ಮೀ, ದಸರಾ ಹೀಗೆ ಎಲ್ಲಾ ಹಬ್ಬಗಳ ಸಂಭ್ರಮವನ್ನು ಕಿತ್ತುಕೊಂಡ ಕಿಲ್ಲರ್ ಕೊರೊನಾ ದೀಪಾವಳಿಯ ಸಂಭ್ರಮವನ್ನೂ ಕಿತ್ತುಕೊಂಡಿದೆ. ಇನ್ನೇನು 2020ನೇ ವರ್ಷವೂ ಮುಗಿಯುತ್ತಾ ಬಂದಿದೆ. ವರ್ಷದಂತೆ ಕೊರೋನಾ ಕಂಟಕವೂ ಆದಷ್ಟು ದೂರವಾಗಲಿ, ಮುಂದಿನ ವರ್ಷದಲ್ಲಾದರೂ ಹಬ್ಬಗಳ ಸಂಭ್ರಮವನ್ನು ಸವಿಯುವಂತಾಗಲಿ ಎನ್ನುವುದು ಎಲ್ಲರ ಹಾರೈಕೆಯಾಗಿದೆ.

Related posts

Leave a Reply

Your email address will not be published. Required fields are marked *