
ಮೂಡುಬಿದಿರೆ: ಬೆಳುವಾಯಿ ಗ್ರಾ.ಪಂಚಾಯತ್ ವ್ಯಾಪ್ತಿಯ ಕರಿಯಣ್ಣಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ತುರ್ತಾಗಿ ಓರ್ವ ಶಿಕ್ಷಕರನ್ನು ನೀಡುವಂತೆ ವಿದ್ಯಾರ್ಥಿಗಳ ಪಾಲಕರು, ಪೋಷಕರು ಮತ್ತು ಹಳೇ ವಿದ್ಯಾರ್ಥಿಗಳು ಶಿಕ್ಷಣಾಧಿಕಾರಿ ಆಶಾ ಅವರಲ್ಲಿ ಆಗ್ರಹಿಸಿದ್ದಾರೆ.
ಹಳೇ ವಿದ್ಯಾರ್ಥಿ, ಬೆಳುವಾಯಿ ಗ್ರಾಪಂ ಸದಸ್ಯ ಶಾಹಬಾಜ್ ಅಹಮದ್, ಮಾಧ್ಯಮದವರ ಜೊತೆ ಮಾತನಾಡಿ, 1983ರಲ್ಲಿ ಪ್ರಾರಂಭವಾದ ಕರಿಯಣ್ಣಂಗಡಿ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದಿದ್ದಾರೆ. ಶಿಕ್ಷಕರಿಲ್ಲದ ಕಾರಣ ಮಕ್ಕಳ ಸಂಖ್ಯೆ ಕಡಿಮೆಯಾಗಿ ಇತರ ಶಾಲೆಗಳಿಗೆ ಪರಿಸರದ ಮಕ್ಕಳು ಹೋಗುವಂತಾಗಿದೆ. ತುರ್ತಾಗಿ ಓರ್ವ ಶಿಕ್ಷಕರನ್ನು ನಿಯೋಜಿಸುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದೇವೆ. 10 ಮಂದಿ ಶಿಕ್ಷಕರಿರುವ ಕೆಸರುಗದ್ದೆ ಮೈನ್ ಶಾಲೆಯಿಂದ ಒರ್ವ ಶಿಕ್ಷಕಿಯನ್ನು ಇಲ್ಲಿಗೆ ಶಿಕ್ಷಣ ನಿಯೋಜಿಸುವ ಆದೇಶ ಬಂದು, ತದನಂತರ ಅದನ್ನು ಹಿಂಪಡೆಯಲಾಗಿದೆ. ಒರ್ವ ಶಿಕ್ಷಕರನ್ನು ಇಲ್ಲಿ ನಿಯೋಜಿಸಿದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬಹುದು. ಶಾಲೆಯ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದೇವೆ ಎಂದರು.
ಸದ್ಯಕ್ಕೆ ಮುಖ್ಯ ಶಿಕ್ಷಕರ ಜವಬ್ದಾರಿ ಇರುವ ಶಿಕ್ಷಕಿಯು ರಜೆ, ತರಬೇತಿಗಳಿಗೆ ಹೊರ ಹೋದಲ್ಲಿ ಕೆಸರುಗದ್ದೆ ಮೈನ್ ಶಾಲೆಯ ಒರ್ವ ಶಿಕ್ಷಕರನ್ನು ಆ ದಿನ ನಿಯೋಜಿಸಲಾಗುವುದು. ಶಾಲೆಯಲ್ಲಿ 30 ವಿದ್ಯಾರ್ಥಿಗಳಿದ್ದರೇ ಇನ್ನೊಬ್ಬರು ಶಿಕ್ಷಕರನ್ನು ಖಂಡಿತ ನಿಯೋಜಿಸುತ್ತೇವೆ. ಶಾಲೆಯಲ್ಲಿ ಹಾಜರಾತಿ ಹೆಚ್ಚಿಸುವ ಬಗ್ಗೆಯು ಪೋಷಕರು ಗಮನಹರಿಸಬೇಕೆಂದರು.
ಎಸ್ಡಿಎಂಸಿ ಅಧ್ಯಕ್ಷೆ ಶಾಲಿನಿ ಪೂಜಾರಿ, ಎಸ್ಡಿಎಂಸಿ ಸದಸ್ಯರಾದ ಆನಂದ ನಾೈಕ್, ಮಾಮ್ತಾಜ್, ಆಶಾ, ಮಂಗಳ, ಸುಮತಿ, ದಯಾನಂದ, ಹಳೇ ವಿದ್ಯಾರ್ಥಿಗಳಾದ ಉಮೇಶ್, ನಿತಿನ್, ಹ್ಯಾರಿಸ್ ಮತ್ತಿತರರು ಉಪಸ್ಥಿತರಿದ್ದರು.