Header Ads
Breaking News

ಕಲ್ಲಬೆಟ್ಟು ಗ್ರಾಮಕರಣಿಕರ ಕಛೇರಿಯ ಮೇಲ್ಛಾವಣಿ ಕುಸಿತ; ಗಮನಹರಿಸದ ಕಂದಾಯ-ಪುರಸಭಾಧಿಕಾರಿಗಳು

ಮೂಡುಬಿದಿರೆ : ಕಳೆದ 35 ವರ್ಷಗಳಿಂದ ಕಲ್ಲಬೆಟ್ಟುವಿನಲ್ಲಿ ಕಾರ್ಯಚರಿಸುತ್ತಿದ್ದ ಗ್ರಾಮಕರಣಿಕರ ಕಛೇರಿಯ ಮೇಲ್ಛಾವಣಿಯು ಕಳೆದ ಒಂದು ವಾರದ ಹಿಂದೆ ಕುಸಿದುಬಿದ್ದಿದ್ದು ಈ ಬಗ್ಗೆ ಕಂದಾಯ ಮತ್ತು ಪುರಸಭಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಗ್ರಾಮಕರಣಿಕರು ತಮ್ಮ ಸಿಬಂದಿಗಳೊಂದಿಗೆ ಶಾಲೆಯ ಒಂದು ಕೋಣೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಪರಿಸ್ಥಿತಿ ಬಂದೊದಗಿದೆ.

ಕಲ್ಲಬೆಟ್ಟು ಶಾಲೆಯ ಆವರಣದ ಬಳಿ ಕಳೆದ 50 ವರ್ಷಗಳ ಹಿಂದೆ ಸರಕಾರದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರ್ಮಾಣಗೊಂಡಿರುವ ಸಮಾಜ ಮಂದಿರದ ಕಟ್ಟಡದಲ್ಲಿ ಈ ಹಿಂದೆ ಲೈಬ್ರರಿ, ಕಲ್ಲಬೆಟ್ಟು ಯುವಕ ಮಂಡಲಗಳು ಕರ್ತವ್ಯ ನಿರ್ವಹಿಸುತ್ತಿದ್ದವು ಮತ್ತು ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದವು. ನಂತರದ ದಿನಗಳಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಇಲಾಖೆಯ ಅಧಿಕಾರಿಗಳು ಈ ಕಟ್ಟಡವನ್ನು ಮಂಡಲ ಪಂಚಾಯತ್‍ಗೆ ಹಸ್ತಾಂತರಿಸಿದ್ದರು.

ಮಂಡಲ ಪಂಚಾಯತ್‍ಗೆ ಹಸ್ತಾಂತರಿಸಿದ ನಂತರ ಇಲ್ಲಿ ಕಂದಾಯಕ್ಕೆ ಸಂಬಂಧಪಟ್ಟಂತೆ ಕೆಲಸಗಳನ್ನು ನಿರ್ವಹಿಸಲು ಗ್ರಾಮಕರಣಿಕರ ಕಛೇರಿಯನ್ನು ತೆರೆಯಲಾಯಿತು. ಜನರಿಗೆ ಅನುಕೂಲವಾಗುವಂತೆ ಕಲ್ಲಬೆಟ್ಟು, ಮಾರೂರು ಹಾಗೂ ಕರಿಂಜೆ ಈ ಮೂರು ಗ್ರಾಮಗಳಿಗೆ ಸಂಬಂಧಿಸಿದ ಕಂದಾಯದ ಕೆಲಸಗಳನ್ನು ನಿರ್ವಹಿಸಲು ಇಲ್ಲಿ ಅವಕಾಶವನ್ನು ಕಲ್ಪಿಸಲಾಯಿತು. ನಂತರದ ದಿನಗಳಲ್ಲಿ ಈ ಮೂರು ಗ್ರಾಮಗಳನ್ನು ಮೂಡುಬಿದಿರೆ ಪುರಸಭೆಗೆ ಸೇರ್ಪಡೆಗೊಳಿಸಲಾಯಿತು.

ಆದ್ದರಿಂದ ಕಂದಾಯಕ್ಕೆ ಸಂಬಂಧಿಸಿದ ಹೆಚ್ಚಿನ ಕೆಲಸಗಳು ಮೂಡುಬಿದಿರೆಯಲ್ಲಿಯೇ ನಡೆಯುತ್ತಿವೆ ಆದರೆ ಗ್ರಾಮಕರಣಿಕರಿಗೆ ಮಾತ್ರ ಆ ಕಟ್ಟಡದಲ್ಲಿ ಕರ್ತವ್ಯವನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಕಛೇರಿಯ ಬಳಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಸಂಜೆ ವೇಳೆ ಮಕ್ಕಳು ಇಲ್ಲಿಯೇ ಆಟವಾಡುತ್ತಿರುತ್ತಾರೆ. ಕಟ್ಟಡದ ಮೇಲ್ಛಾವಣಿಯು ರಾತ್ರಿ ವೇಳೆ ಕುಸಿದು ಬಿದ್ದಿರುವುದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಹಗಲಿನ ವೇಳೆ ಕುಸಿದು ಬೀಳುತ್ತಿದ್ದರೆ ಹಲವು ಮಕ್ಕಳಿಗೆ ತೊಂದರೆಯಾಗುತ್ತಿತ್ತು.

ಕಟ್ಟಡದ ಒಂದು ಭಾಗ ಕುಸಿದು ಬಿದ್ದಿರುವುದರಿಂದ ಗ್ರಾಮಕರಣಿಕರು ಮತ್ತು ಸಿಬಂದಿಗಳಿಗೆ ಕಲ್ಲಬೆಟ್ಟು ಶಾಲೆಯ ಒಂದು ಕೋಣೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯವನ್ನು ನಿರ್ವಹಿಸಲು ಶಾಲಾ ಆಡಳಿತ ಮಂಡಳಿಯು ಅವಕಾಶವನ್ನು ಕಲ್ಪಿಸಿದೆ. ಆದರೆ ದಾಖಲೆ ಪುಸ್ತಕಗಳನ್ನು ಅಲ್ಲಿಯೇ ಇಡಲಾಗಿದೆ. ಆದರೆ ಇದೀಗ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ಶಾಲಾ ಮಕ್ಕಳು ತೊಂದರೆಯನ್ನು ಅನುಭವಿಸುವಂತ್ತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕುಸಿದು ಬಿದ್ದಿರುವ ಕಟ್ಟಡವನ್ನು ಸರಿಪಡಿಸಬೇಕಾಗಿದೆ ಅಥವಾ ಗ್ರಾಮಕರಣಿಕರಿಗೆ ಕರ್ತವ್ಯವನ್ನು ನಿರ್ವಹಿಸಲು ಬೇರೊಂದು ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ ಸಾರ್ವಜನಿಕರ ಅಭಿಪ್ರಾಯವಾಗಿದೆ.

Related posts

Leave a Reply

Your email address will not be published. Required fields are marked *