Header Ads
Header Ads
Breaking News

ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದ ಸೇತುವೆ : ಇನ್ನೂ ಸಿಗದ ನಿರ್ಮಾಣ ಭಾಗ್ಯ

ಮಂಗಳೂರು:ಅದೊಂದು ಹಳ್ಳಿ. ಜಗತ್ತಿಗೆ ಸಂಪರ್ಕಿಸೋ ಆ ಊರಿನ ಸೇತುವೆ ಕಳೆದ ವರ್ಷದ ಮಳೆಗಾಲದ ವೇಳೆ ಕುಸಿದು ಬಿದ್ದಿತ್ತು. ಇದೀಗ ಮತ್ತೊಂದು ಮಳೆಗಾಲ ಬಂದಿದೆ. ಆದ್ರೆ ಭರವಸೆ ಕೊಟ್ಟ ಜನಪ್ರತಿನಿಧಿಗಳು ಮಾತ್ರ ಕಾಣೆ. ಜೊತೆಗೆ ಹೊಸ ಸೇತುವೆಗೆ ಟೆಂಡರೇ ಪ್ರಕ್ರಿಯೆನೇ ಮುಗಿದಿಲ್ಲ. ಇದೀಗ ಮತ್ತೆ ಆ ಊರಿನ ಜನ್ರಿಗೆ ದ್ವೀಪದಲ್ಲಿರಬೇಕಾದ ಪರಿಸ್ಥಿತಿ ಎದುರಾಗಿದೆ. ಆ ಊರು ಯಾವುದು..? ಅಲ್ಲಿನ ಜನ್ರ ಸಂಕಷ್ಟ ಏನು..?

ಮುರಿದು ಬಿದ್ದಿರೋ ಸೇತುವೆ.. ಮಣ್ಣಿನಿಂದ ನಿರ್ಮಿಸಿರೋ ಕಾಲುದಾರಿಯಲ್ಲಿ ಹೋಗ್ತಿರೋ ವಿದ್ಯಾರ್ಥಿಗಳು.. ಆಕ್ರೋಶ ವ್ಯಕ್ತಪಡಿಸುತ್ತಿರೋ ಜನ್ರು.. ಮಂಗಳೂರು-ಬಂಟ್ವಾಳವನ್ನು ಸಂಪರ್ಕಿಸುವ ಕುಪ್ಪೆಪದವು ಮೂಲರಪಟ್ನ ಸೇತುವೆ ಕುಸಿತಗೊಂಡು ಇದೇ ಜೂನ್ 25ಕ್ಕೆ ಒಂದು ವರ್ಷವಾಗಲಿದೆ. ಯೆಸ್. 2018ರ ಜೂನ್‌ನಲ್ಲಿ ಮೂಲರಪಟ್ನ ಸೇತುವೆ ಕುಸಿತಗೊಂಡ ಕಾರಣ ಸೋರ್ನಾಡು, ಅರಳ ನಿವಾಸಿಗಳು ಮಂಗಳೂರು ಸಂಪರ್ಕವನ್ನೆ ಕಳೆದುಕೊಂಡಿದ್ದರು. ಮೂಲರಪಟ್ನ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಗಡಿಭಾಗವಾಗಿದ್ದರೂ ಇಲ್ಲಿಯ ನಿವಾಸಿಗಳು ಮಂಗಳೂರು ನಗರವನ್ನೆ ಆಶ್ರಯಿಸಿದ್ದಾರೆ. ಪ್ರತಿನಿತ್ಯ ಸಾವಿರಾರು ಕಾರ್ಮಿಕರು, ವಿದ್ಯಾರ್ಥಿಗಳು ಬಸ್, ವಾಹನಗಳಲ್ಲಿ ನಗರಕ್ಕೆ ಬಂದು ಹೋಗುತ್ತಾರೆ. ಅಗತ್ಯ ವಸ್ತುಗಳಿಗೆ, ಬ್ಯಾಂಕ್ ವ್ಯವಹಾರಕ್ಕೆ ಕುಪ್ಪೆಪದವನ್ನೆ ಆಶ್ರಯಿಸಿದ್ದರು.ಮೂಲರಪಟ್ಣದಿಂದ ಕುಪ್ಪೆಪದವಿಗೆ 3 ಕಿ.ಮೀ. ಆದರೆ ಸೇತುವೆ ಮುರಿದ ಬಳಿಕ 30 ಕಿ.ಮೀ. ಸಂಚರಿಸಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಹೆಚ್ಚಿನವರು ರಿಕ್ಷಾ ಚಾಲಕರಾಗಿದ್ದು ಅವರಿಗೆ ವಾಹನದಲ್ಲಿ ಬರಬೇಕಾದರೆ ಸುತ್ತಿ ಬಳಸಿ ಬರಬೇಕು. ಹೀಗಾಗಿ ಸ್ಥಳೀಯ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಊರಿನ ಯುವಕರ ಸಾಮಾಜಿಕ ಸೇವಾ ಸಂಘಟನೆ ಜಿಎಚ್ ಎಂ ಫೌಂಡೇಶನ್ ನ ಸದಸ್ಯರು ನದಿಗೆ ಅಡ್ಡಲಾಗಿ ತಾವೇ ಸುಮಾರು 800 ಮೀಟರ್ ನಷ್ಟು ಉದ್ದದ ತಾತ್ಕಾಲಿಕ ಮಣ್ಣಿನ ರಸ್ತೆಯನ್ನು ನಿರ್ಮಿಸಿದ್ರು. ಇದೀಗ ಪೂರ್ಣ ಮಳೆ ಬಂದ್ರೆ ಇದು ಕೊಚ್ಚಿಹೋಗಲಿದೆ. ಇದ್ರಿಂದ ತೂಗು ಸೇತುವೆಯಲ್ಲಿ ಪಕ್ಕದ ಊರಿಗೆ ಹೋಗಬೇಕು. ಆದ್ರೆ ವಾಹನದಲ್ಲಿ ಹೋಗ್ಬೇಕಂದ್ರೆ ಸುತ್ತಿ ಬಳಸಿಯೇ ಹೋಗ್ಬೇಕು.

ಮೂಲ್ಲರಪಟ್ನ ಸೇತುವೆ ಮುರಿದು ಬಿದ್ದ ಆತಂಕದಲ್ಲಿ ಗುರುಪುರ ಸೇತುವೆಯನ್ನು ತಂತ್ರರ ಮುಖೇನ ಪರಿಶೀಲನೆ ನಡೆಸಿ ವರದಿ ತರಿಸಲಾಗಿತ್ತು. ಬಳಿಕ ಗುರುಪುರ ನೂತನ ಸೇತುವೆಗೆ ಶಿಲಾನ್ಯಾಸ ನಡೆದು ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಅಸಮಾಧಾನಗೊಂಡ ಮೂಲರಪಟ್ನ ನಾಗರಿಕರು ಮುರಿದದ್ದು ಮೂಲರಪಟ್ನ ಸೇತುವೆ. ನೂತನ ಸೇತುವೆ ಮಾತ್ರ ಗುರುಪುರಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲರಪಟ್ನ ಸೇತುವೆ ಕುಸಿತಕ್ಕೆ ಅಧಿಕಾರಿಗಳೇ ನೇರ ಹೊಣೆ. ಈ ಬಗ್ಗೆ ಇಲಾಖಾ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ತನಿಖೆ ಬಳಿಕ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ರಸ್ತೆಯಿಂದ 15 ಅಡಿ ಆಳದಲ್ಲಿದ್ದ ಸೇತುವೆ ಅಕ್ರಮ ಮರಳುಗಾರಿಕೆಯಿಂದ 30 ಅಡಿವರೆಗೆ ಆಳವಾಗಿತ್ತು. ಸೇತುವೆ ಪಿಲ್ಲರ್‌ಗಳ ಅಡಿಭಾಗ ಗೋಚರಿಸಿದರೂ, ಮರಳು ಖಾಲಿಯಾಗಿ ಬಂಡೆಗಳು ಕಾಣುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನವಹಿಸಿದ್ದರು. ಇನ್ನು ನೂತನ ಸೇತುವೆಗೆ 14.65 ಕೋಟಿ ಮಂಜೂರಾಗಿದೆ. ಆದ್ರೆ ಟೆಂಡರ್ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ನೂತನ ಸೇತುವೆ ಬಗ್ಗೆ ಬೆಂಗಳೂರಿನ ತಂತ್ರರೊಬ್ಬರು ಆಗಮಿಸಿ ಪರಿಶೀಲಿಸಿದ್ದಾರೆ. ಕೆಲವೊಂದು ತಾಂತ್ರಿಕ ಕಾರಣದಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಮಳೆಗಾಲದಲ್ಲಿ ಕಾಮಗಾರಿ ಆರಂಭಿಸುವುದು ಕಷ್ಟ. ಮಳೆ ಪ್ರಮಾಣ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.ವರ್ಷಗಳೇ ಕಳೆದ್ರೂ ಮೂಲರಪಟ್ನ ಊರಿಗೆ ಸೇತುವೆ ನಿರ್ಮಾಣ ಭಾಗ್ಯ ಸಿಕ್ಕಿಲ್ಲ…

Related posts

Leave a Reply

Your email address will not be published. Required fields are marked *