Breaking News

ಕಾನ್ಪುರದ ರಾಮನಾಥ ಕೋವಿಂದ್, ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಮುಂದಿನ ಸಂಸತ್ ಚುನಾವಣೆಯ ಕಾರ್ಯತಂತ್ರವನ್ನು ಬಿಜೆಪಿ ಆರಂಭಿಸಿದೆ.
ದಲಿತ ಸಮುದಾಯದ ವ್ಯಕ್ತಿಯನ್ನು ದೇಶದ ಅತ್ಯುನ್ನತ ಹುದ್ದೆಯ ಅಭ್ಯರ್ಥಿಯಾಗಿ ಬಿಂಬಿಸುವ ಮೂಲಕ ಬಿಜೆಪಿ ಬಲವಾದ ಸಾಮಾಜಿಕ ಸಂದೇಶವನ್ನು ನೀಡಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದೊರೆತ ದಲಿತ ಸಮುದಾಯದ ಬೆಂಬಲವನ್ನು ಮುಂದಿನ ಸಾರ್ವತ್ರಿಕ ಚುನಾವಣೆವರೆಗೂ ಮುಂದುವರಿಸುವ ತಂತ್ರವನ್ನು ಹೆಣೆದಿದೆ. ಎನ್ಡಿ‌ಎ ಆಯ್ಕೆಯನ್ನು ತಿರಸ್ಕರಿಸುವುದು ಕಾಂಗ್ರೆಸ್, ಸಮಾಜವಾದಿ ಪಕ್ಷ, ಜೆಡಿಯು ಅಥವಾ ಬಿ‌ಎಸ್ಪಿಗೆ ಸುಲಭವಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜತೆ ಕೋವಿಂದ್ ಬಹಳ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ಕೋವಿಂದ್ ಅವರ ಆಯ್ಕೆಯನ್ನು ನಿತೀಶ್ ಅವರು ವಿರೋಧಿಸುವ ಸಾಧ್ಯತೆ ಕಡಿಮೆ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ?ಅವರು ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಕೋವಿಂದ್ ಅವರಿಗೆ ಅಭಿನಂದನೆ ಸಲ್ಲಿಸಿದ ಮೊದಲ ನಾಯಕ ನಿತೀಶ್. ಮೃದು ಮಾತಿನ ಕೋವಿಂದ್ ಅವರು ಕೋರಿ ಸಮುದಾಯಕ್ಕೆ ಸೇರಿದವರು. ಉತ್ತರ ಭಾರತದಲ್ಲಿ ಇದು ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ೧೯೯೪ರಲ್ಲಿ ರಾಜ್ಯಸಭೆ ಸದಸ್ಯರಾಗುವ ತನಕ ಅವರು ದೆಹಲಿಯ ಕಾಲಿಬಾಡಿಯಲ್ಲಿರುವ ಬಾಡಿಗೆ ಫ್ಲ್ಯಾಟ್ನಲ್ಲಿ ವಾಸವಿದ್ದರು. ವಿವಾದಗಳಿಂದ ಮಾರು ದೂರವಿರುವ ಕೋವಿಂದ್, ಬಿಜೆಪಿ ವಕ್ತಾರರಾಗಿದ್ದಾಗ ಎಂದೂ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡವರಲ್ಲ.
೧೨ ವರ್ಷ ರಾಜ್ಯಸಭಾ ಸದಸ್ಯರಾಗಿದ್ದ ಅವರು ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಶಾಲೆಗಳ ಮೂಲಸೌಕರ್ಯ ಆಭಿವೃದ್ಧಿಗೆ ಒತ್ತು ನೀಡಿದ್ದರು. ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಶಾಲಾ?ಕಟ್ಟಡಗಳನ್ನು ನಿರ್ಮಿಸಿದ್ದರು. ದುರ್ಬಲ ವರ್ಗಗಳು ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಮಹಿಳೆಯರಿಗೆ ಉಚಿತ ಕಾನೂನು ನೆರವು ಒದಗಿಸಲು ವಕೀಲರಾಗಿದ್ದಾಗ ಅವರು ಸಾಕಷ್ಟು ಶ್ರಮಿಸಿದ್ದರು.
೧೯೭೪ರಲ್ಲಿ ಸವಿತಾ ಅವರನ್ನು ಮದುವೆಯಾದರು. ಕೋವಿಂದ್ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ೨೦೧೫ರ ಆಗಸ್ಟ್ ೮ರಂದು ಬಿಹಾರ ರಾಜ್ಯಪಾಲರಾಗಿ ಕೋವಿಂದ್ ನೇಮಕಗೊಂಡಿದ್ದರು.

Related posts

Leave a Reply