
ಕಾರ್ಕಳ : ಪುರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರಲ್ಲಿ ತಿದ್ದುಪಡಿಯಾದಂತೆ 2021-22ರ ಸಾಲಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ವಿಧಿಸಿ ಜಾರಿಗೊಳಿಸುವ ಕುರಿತು ಕೌನ್ಸಿಲ್ ನಿರ್ಣಯವನ್ನು ಪಡೆಯಲಾಗಿತ್ತು. ಈ ಕುರಿತು ಸದಸ್ಯ ಅಶ್ಪಕ್ ಅಹ್ಮದ್ ಮಾತನಾಡಿ, ತೆರಿಗೆ ಹೆಚ್ಚಳದಿಂದ ಜನತೆಗೆ ತೊಂದರೆಯಾಗಿದೆ. ಇದೀಗ ಸರಕಾರದ ಆದೇಶದಿಂದಾಗಿ ಪುರಸಭಾ ವ್ಯಾಪ್ತಿಯ ಜನತೆ ಮತ್ತಷ್ಟು ತೊಂದರೆ ಅನುಭವಿಸುವಂತಾಗಲಿದೆ. ತೆರಿಗೆ ಹೆಚ್ಚಳಕ್ಕೆ ನನ್ನ ವಿರೋಧವಿದೆ ಎಂದರು.
ಪ್ರತಿಮ ರಾಣೆ ಮಾತನಾಡಿ, ನೀವು ಸರಕಾರದ ಆದೇಶವನ್ನು ಅನುಷ್ಠಾನ ಮಾಡಲು ಹೊರಟಿರುವಿರಿ. ಆದರೆ ಜನತೆ ನಮ್ಮನ್ನು ಪ್ರಶ್ನಿಸುತ್ತಾರೆ. ಬಡವರ ಮೇಲೆ ಈ ರೀತಿ ಹೊರೆ ಹೊರಿಸುವುದು ಸರಿಯಲ್ಲ ಎಂದರು. ರೆಹಮತ್ ಎನ್. ಶೇಕ್ ಮಾತನಾಡಿ, ಬಾಕಿ ತೆರಿಗೆಗೆ ಬಡ್ಡಿ ವಿಧಿಸುವ ಕ್ರಮ ಕೂಡಾ ಒಪ್ಪುವಂಥದಲ್ಲ ಎಂದರು.
ಸದಸ್ಯ ಸೋಮನಾಥ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿರುವ ಸರಕಾರಿ ಕಚೇರಿಗಳಿಂದ ಪುರಸಭೆಗೆ ಬರುವ ಆದಾಯ ಸಮರ್ಪಕವಾಗಿ ಬರುತ್ತಿದ್ದೇಯೇ ಎಂದು ಪ್ರಶ್ನಿಸಿದರು. ಟ್ಯಾಕ್ಸ್ ಹೊರತುಪಡಿಸಿ ಉಳಿದ ರೀತಿಯ ಆದಾಯ ಸಂಗ್ರಹವಾಗುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯಾಧಿಕಾರಿ ರೇಖಾ ಶೆಟ್ಟಿ ಉತ್ತರಿಸಿ ತೆರಿಗೆ ಕುರಿತಂತೆ ಸರಕಾರದ ತಿದ್ದುಪಡಿ ಆದೇಶವನ್ನು ನಾವು ಪಾಲಿಸಲೇಬೇಕು. ಇಲ್ಲವಾದಲ್ಲಿ ಸರಕಾರದಿಂದ ಬರುವ ಅನುದಾನ ಕಡಿತವಾಗುವುದು ಎಂದರು. ಮಾ. 12ರೊಳಗಾಗಿ ಕೌನ್ಸಿಲ್ ತೀರ್ಮಾನವನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಿಕೊಡಲು ಸರಕಾರ ಸೂಚಿಸಿರುವ ಬಗ್ಗೆ ತಿಳಿಸಿದರು.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.