

ಮಂಜೇಶ್ವರ: ಉಪ್ಪಳ ಫತ್ವಾಡಿ ಹೊಳೆಯಿಂದ ಅನಧಿಕೃತ ಮರಳು ಸಾಗಾಟ ನಡೆಸಲು ಮಾಫಿಯಾಗಳು ರಹಸ್ಯವಾಗಿ ರಸ್ತೆ ನಿರ್ಮಿಸುತ್ತಿರುವುದನ್ನು ಮಂಜೇಶ್ವರ ಪೊಲೀಸರು ಪತ್ತೆ ಹಚ್ಚಿ ಮಾಫಿಯಾಗಳ ಅಟ್ಟಹಾಸಕ್ಕೆ ತಡೆಯೊಡ್ದಿದ್ದಾರೆ.
ಕಳೆದ ರಾತ್ರಿ ಮಂಜೇಶ್ವರ ಎಸ್ಸೈ ಗಸ್ತು ತಿರುಗಾಟದಲ್ಲಿರುವ ಸಂದರ್ಭದಲ್ಲಿ ಮಾಫಿಯಾಗಳ ಈ ಕೃತ್ಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದಾಗ ರಸ್ತೆ ನಿರ್ಮಾಣದ ವಿರುದ್ದ ಕ್ರಮ ಜರಗಿಸುವಂತೆ ಎಸ್ಸೈ ಗೆ ಆದೇಶಿಸಿರುವುದಾಗಿ ತಿಳಿದು ಬಂದಿದೆ. ಇದರ ಮುಂದುವರಿದ ಭಾಗವಾಗಿ ಎಸ್ಸೈ ಘಟನಾ ಸ್ಥಳಕ್ಕೆ ತಲುಪಿದಾಗ ಅಲ್ಲೊಂದು ಬುಲ್ ಡಜರ್ ಮರಳನ್ನು ಜೋಡಿಸಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅದಕ್ಕೆ ಕಡಿವಾಣ ಹಾಕಿದ ಎಸ್ಸೈ ಹೊಳೆಯನ್ನು ಮೊದಲಿನ ರೀತಿಯಲ್ಲೇ ಯಥಾ ಸ್ಥಿತಿ ಕಾಪಾಡುವಂತೆ ತಿಳಿಸಿದ್ದಾರೆ.
ಲಾರಿ ಅಥವಾ ಜೆಸಿಬಿಯನ್ನು ನೇರವಾಗಿ ಹೊಳೆಗೆ ಇಳಿಸಿ ಮರಳನ್ನು ಸಾಗಿಸುವ ಉದ್ದೇಶದಿಂದ ಈ ದಾರಿಯನ್ನು ಮಾಡಿರಲಾಗುವುದಾಗಿ ಎಸ್ಸೈ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮರಳು ಮಾಫಿಯಾಗಳ ಹೊಸ ತಂತ್ರಕ್ಕೂ ಹಿನ್ನಡೆಯಾಗಿದೆ. ಮಂಜೇಶ್ವರ ಠಾಣೆಗೆ ಹೊಸತಾಗಿ ಅಧಿಕಾರವನ್ನು ಸ್ವೀಕರಿಸಿದ ಎಸ್ಸೈ ರಾಘವನ್ ರವರ ಕಾರ್ಯಾಚರಣೆಯಿಂದ ಬಹುತೇಕ ಭಾಗಗಳಲ್ಲೂ ಮರಳು ಮಾಫಿಯಾಗಳ ಸದ್ದಡಗಿದೆ. ಮರಳು ಮಾಫಿಯಾಗಳ ಅಟ್ಟಹಾಸದಿಂದ ನದಿ ಹಗೂ ಹೊಳೆಗಳು ಸಂಪೂರ್ಣವಾಗಿ ಇಲ್ಲದಂತಾಗುವ ಸ್ಥಿತಿ ಒದಗುತ್ತಿರುವುದಗಿಯೂ ಇದಕ್ಕೆ ಕೆಲವೊಂದು ಅಧಿಕಾರಿಗಳು ಸಾಥ್ ನೀಡುತ್ತಿರುವುದಾಗಿಯೂ ಇಂತಹ ಘಟನೆಗಳು ಮಾರುಕಳಿಸಿದಂತೆ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿಯೂ ಎಸ್ಸೈ ರಾಘವನ್ ತಿಳಿಸಿದರು.