
ಕುಂದಾಪುರ: ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಭಾನುವಾರ ನಡೆಯಲಿದ್ದು, ಇದರ ಮಸ್ಟರಿಂಗ್ ಕಾರ್ಯವು ಕುಂದಾಪುರದ ಭಂಡಾರ್ಸ್’ಕಾರ್ಸ್ ಕಾಲೇಜಿನಲ್ಲಿ ನಡೆಯಿತು.
ಬೆಳಿಗ್ಗೆಯಿಂದ ಮಸ್ಟರಿಂಗ್ ಪ್ರಕ್ರಿಯೆಗಳು ನಡೆದಿದ್ದು ಮಧ್ಯಾಹ್ನದ ಬಳಿಕ ಮತ ಪೆಟ್ಟಿಗೆಯೊಂದಿಗೆ ಮತ ಕೇಂದ್ರಗಳಿಗೆ ಅಧಿಕಾರಿ ಸಿಬ್ಬಂದಿಗಳು ತೆರಳಿದರು. ಸಹಾಯಕ ಚುನಾವಣಾಧಿಕಾರಿ, ಅಧ್ಯಕ್ಷಾಧಿಕಾರಿ, ಪ್ರಥಮ ಚುನಾವಣಾಧಿಕಾರಿ, 2ನೇ ಹಾಗೂ 3ನೇ ಚುನಾವಣಾಧಿಕಾರಿಗಳ ಜೊತೆಗೆ ಡಿ ಗ್ರೂಫ್ ಹಾಗೂ ಪೊಲೀಸ್ರು ಆಯಾಯ ಮತಗಟ್ಟೆಗಳಿಗೆ ಬಿಸಿಲ ಝಳದ ನಡುವೆ ಉತ್ಸಾಹದಿಂದ ತೆರಳಿದರು. ಕುಂದಾಪುರ ಮಸ್ಟರಿಂಗ್ ಕೇಂದ್ರಕ್ಕೆ ಉಡುಪಿ ಡಿಸಿ ಭೇಟಿ ನೀಡಿ ಪರಿಶೀಲನೆನಡೆಸಿದರು. ಈ ವೇಳೆಯಲ್ಲಿ ಸಾಮಾಜಿಕ ಅಂತರ ಕಾಪಾಡದ, ಮಾಸ್ಕ್ ಧರಿಸದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಭಾನುವಾರ ನಡೆಯಲಿರುವ ಮತದಾನ ಪ್ರಕ್ರಿಯೆಗೆ ಓರ್ವ ಡಿವೈಎಸ್ಪಿ, ನಾಲ್ವರು ಸಿಪಿಐ, ವಿವಿಧ ಠಾಣೆಗಳ ಒಟ್ಟು ಹನ್ನೆರಡು ಮಂದಿ ಪಿಎಸ್ಐ, 32 ಎಎಸ್ಐ, 300 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಒಂದು ಕೆಎಸ್ಆರ್ಪಿ, ಒಂದು ಡಿಎಆರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಡಿ ಗ್ರೂಫ್ ನೌಕರರು ಇರಲಿದ್ದು ಈ ಬಾರಿ ಕೊರೋನಾ ಹಿನ್ನೆಲೆ ಮತದಾನ ದಿನದಂದು ಎಲ್ಲಾ 266 ಮತಗಟ್ಟೆಯಲ್ಲಿ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಿಕೊಂಡು ಸ್ಯಾನಿಟೈಸಿಂಗ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ.266 ಮತಗಟ್ಟೆಗಳ ಪೈಕಿ ಎಪ್ಪತ್ತು ಸೂಕ್ಷ್ಮ ಹಾಗೂ ಇಪ್ಪತ್ತು ನಕ್ಸಲ್ ಪೀಡಿತ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸಸ್ತ್ರಮೀಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.