Header Ads
Breaking News

ಕುಂದಾಪುರದ ಬೆಣ್ಗೆರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ-ಸಮುದ್ರ ಪಾಲಾಗುವ ಭೀತಿಯಲ್ಲಿವೆ ಮೂವತ್ತಕ್ಕೂ ಅಧಿಕ ಮನೆಗಳು

 ಒಂದೆಡೆ ಭೋರ್ಗರೆಯುವ ಕಡಲು, ಮತ್ತೊಂದೆಡೆ ತುಂಬಿ ಹರಿಯುವ ಹೊಳೆ. ಇವೆರಡರ ಮಧ್ಯೆ ಬಂಧಿಯಾಗಿ, ಪ್ರತಿ ದಿನ ಆತಂಕದಲ್ಲೇ ಜೀವನ ಕಳೆಯುತ್ತಿರುವ ಜನ. ಇದು ಗುಜ್ಜಾಡಿ ಗ್ರಾಮದ ಮಡಿ ಬೆಣ್ಗೆರೆಯ ಸಮುದ್ರ ತೀರದ ನಿವಾಸಿಗಳ ಸಂಕಷ್ಟದ ಗೋಳು.

 

ಶನಿವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು, ಬೃಹದಾಕಾರದ ಅಲೆಗಳು ಸಮುದ್ರತೀರಕ್ಕೆ ಅಪ್ಪಳಿಸುತ್ತಿರುವ ಪರಿಣಾಮ ಅಲ್ಲಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಗುಜ್ಜಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಡಿ-ಬೆಣ್ಗೆರೆಯಲ್ಲಿ ಕಡಲ್ಕೊರೆತ ಬಿರುಸುಗೊಂಡಿದ್ದು, ಶಾಶ್ವತ ತಡೆಗೋಡೆ ಇಲ್ಲದ ಪರಿಣಾಮವಾಗಿ ಅಲೆಗಳು ನೇರವಾಗಿ ಕಡಲತೀರದಲ್ಲಿರುವ ಮನೆಗಳಿಗೆ ಬಂದಪ್ಪಳಿಸುತ್ತಿವೆ. ಪ್ರತೀ ವರ್ಷವೂ ಈ ಸಮಸ್ಯೆ ಎದುರಾಗುತ್ತಿದ್ದು, ಶಾಶ್ವತ ತಡೆಗೋಡೆ ನಿರ್ಮಿಸಿಕೊಡಿ ಎನ್ನುವ ಇಲ್ಲಿನ ನಿವಾಸಿಗಳ ಎರಡು ದಶಕಗಳ ಕೂಗಿಗೆ ಇಂದಿಗೂ ಸರ್ಕಾರ ಸ್ಪಂದಿಸಿಲ್ಲ. ಮಡಿ-ಬೆಣ್ಗೆರೆ ಕಡಲತೀರದಲ್ಲಿ ಸುಮಾರು ಮೂವತ್ತರಿಂದ ಮೂವತ್ತೈದು ಮನೆಗಳಿವೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡ ಇಲ್ಲಿನ ನಿವಾಸಿಗಳು ವಾಸವಾಗಿರುವ ಜಾಗಕ್ಕೆ ಕಾನೂನಿನ ತೊಡಕಿನಿಂದಾಗಿ ಇಂದಿಗೂ ಹಕ್ಕುಪತ್ರ ಸಿಕ್ಕಿಲ್ಲ. ಈ ಕೇರಿಯಲ್ಲಿ ಸರಿಸುಮಾರು ಇನ್ನೂರರಷ್ಟು ಮಂದಿ ವಾಸವಾಗಿದ್ದಾರೆ. ಪ್ರತೀ ಮಳೆಗಾದಲ್ಲೂ ಇಲ್ಲಿನ ನಿವಾಸಿಗಳು ರಾತ್ರಿ ನೆಮ್ಮದಿಯಿಂದ ಮಲಗಿದ್ದಿಲ್ಲ. ಈ ಮಳೆಗಾಲದಲ್ಲೂ ಕುಡಿಯುವ ನೀರು ದೂರದಿಂದ ಹೊತ್ತು ತರಬೇಕಾದ ಅನಿವಾರ್ಯತೆಯೂ ಇದೆ.

ಪಶ್ಚಿಮದಲ್ಲಿ ಭೋರ್ಗರೆಯುವ ಕಡಲು, ಪೂರ್ವದಲ್ಲಿ ತುಂಬಿ ಹರಿಯುವ ಹೊಳೆ. ಇದರ ಮಧ್ಯೆ ಬಂಧಿಯಾಗಿರುವ ಇಲ್ಲಿನ ನಿವಾಸಿಗಳು ಪ್ರತಿ ದಿನ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ. ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿ ಮನೆಗಳಿಗೆ ಬಂದಪ್ಪಳಿಸಿದ ಬಳಿಕ ಅಲೆಗಳು ಅಲ್ಲೇ ಅನತಿ ದೂರದಲ್ಲಿದ್ದ ನದಿಗೆ ಸೇರುತ್ತಿದೆ. ಕೆಲ ವರ್ಷಗಳ ಹಿಂದೆ ಪುಟ್ಟ ಮಗುವೊಂದು ಅಲೆಗೆ ಕೊಚ್ಚಿಹೋಗಿತ್ತು. ಸ್ಥಳೀಯರ ಸಮಯಪ್ರಜ್ಙೆಯಿಂದ ಮಗುವನ್ನು ರಕ್ಷಿಸಲಾಯಿತು ಎಂದು ಸ್ಥಳೀಯರು ಕೆಲ ವರ್ಷಗಳ ಹಿಂದೆ ನಡೆದ ಘಟನೆಯನ್ನು ಮೆಲಕು ಹಾಕಿದ್ದಾರೆ. ಈ ಹಿಂದೆ ಇಲ್ಲಿ ನೆಲೆಸಿದ್ದ ಭಾಸ್ಕರ ಖಾರ್ವಿ ಅವರು ಕೆಲ ಸಮಯ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಪತ್ನಿಯೂ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಇವರಿಬ್ಬರ ಪುಟ್ಟ ಮಕ್ಕಳಿದ್ದು, ಅವರು ಪಾಲಕರ ಪೋಷಣೆಯಲಿದ್ದಾರೆ. ಆದರೆ ಅವರಿದ್ದ ಮನೆಗೆ ೧೦ ದಿನಗಳ ಹಿಂದೆ ಅಲೆಗಳು ಬಂದು ಅಪ್ಪಳಿಸಿದ್ದರಿಂದ ಮನೆಗೆ ಹಾನಿಯಾಗಿದ್ದು, ಸಂಪೂರ್ಣ ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಎರಡು ದಶಕಗಳಿಂದಲೂ ಶಾಸಕರು, ಸಂಸದರಿಗೆ ಶಾಶ್ವತ ತಡೆಗೋಡೆಗಾಗಿ ಮಾಡುತ್ತಿರುವ ಮನವಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಎನ್ನುವ ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿದೆ ಬಿಟ್ಟರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಅಪಾಯ ಸಂಭವಿಸುವ ಮುನ್ನವೇ ಶಾಸಕರು ಎಚ್ಚೆತ್ತುಕೊಂಡು ಇಲ್ಲಿನ ನಿವಾಸಿಗಳ ಕೂಗಿಗೆ ಧ್ವನಿಯಾಗಬೇಕಿದೆ.

 

Related posts

Leave a Reply

Your email address will not be published. Required fields are marked *