
ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆಯಲ್ಲದೇ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಪುರಸಭೆ ಮಹತ್ವಾಕಾಂಕ್ಷೆ ಯೋಜನೆ ನಿರಂತರ ನೀರು ಪೂರೈಕೆ ಕಾಮಗಾರಿ ಕುರಿತು ವಿವರಣೆ ನೀಡಬೇಕಿದ್ದ ಅಧಿಕಾರಿ ಸಭೆಗೆ ಗೈರಾಗಿದ್ದಾರೆ. ಅವರಿಲ್ಲದೆ ಈ ಯೋಜನೆ ಕುರಿತು ಚರ್ಚೆ ಅಸಾಧ್ಯ. ಅಧಿಕಾರಿ ಸಮಯ ಪಡೆದು ಮತ್ತೊಮ್ಮೆ ಸಭೆ ಕರೆಯಬೇಕು. ಅಲ್ಲಿಯ ತನಕ ನಡೆಯುತ್ತಿರುವ ಕಾಮಗಾರಿಯೂ ಬಂದ್ ಮಾಡಬೇಕು ಎಂದು ಹಿರಿಯ ಸದಸ್ಯ ಮೋಹನ್ದಾಸ್ ಶೆಣೈ ಆಕ್ರೋಶ ವ್ಯಕ್ತಪಡಿಸಿದರು.
ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರು ಹಾಗೂ ಒಳ ಚರಂಡಿ ಯೋಜನೆ ಕುರಿತು ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರುವಾರಗಳ ಮೊದಲೇ ಅಧಿಕಾರಿಗಳಿಗೆ ಸಭೆಯ ಬಗ್ಗೆ ಮಾಹಿತಿ ನೀಡಿದರೂ ಸಭೆಗೆ ಬಾರದೆ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಚುನಾಯಿತ ಸದಸ್ಯರ ಮಾತಿಗೆ ಅಧಿಕಾರಗಳು ಮನ್ನಣೆ ಕೊಡೋದಿಲ್ಲ ಎಂದಾದರೆ ಸಾಮಾನ್ಯ ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಾರೆ. ಇದು ಸುದೀರ್ಘ ಚರ್ಚೆ ನಡೆಯಬೇಕಾದ ವಿಚಾರ. ಸಾಮಾನ್ಯಸಭೆಯಲ್ಲಿ ಸಮಯಾವಕಾಶದ ಕೊರತೆ ಇರುವುದರಿಂದ ಅಲ್ಲಿ ನಮ್ಮ ದಿಕ್ಕು ತಪ್ಪಿಸಿ ನಡೆಯುತ್ತಾರೆ. ಸುದೀರ್ಘ ಚರ್ಚೆ ನಡೆಸುವುದಕ್ಕೋಸ್ಕರವಾಗಿಯೇ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಹಠಕ್ಕೆ ಬಿದ್ದು ನಾವೆಲ್ಲರೂ ಸೇರಿ ವಿಶೇಷ ಸಭೆಯನ್ನು ನಡೆಸಲು ಹೇಳಿದ್ದೇವೆ. ಹಲವು ವರ್ಷಗಳ ಕನಸಿದು. ಜನರಿಗೆ 24 ಗಂಟೆಯೂ ಕುಡಿಯುವ ನೀರು ಸಿಗಬೇಕೆನ್ನುವುದು. ಮೇಲಾಧಿಕಾರಿಗಳು ಸಭೆಗೆ ಎಲ್ಲಿಯ ತನಕ ಬರುವುದಿಲ್ಲವೋ ಅಲ್ಲಿಯ ತನಕ ಕಾಮಗಾರಿ ನಿಲ್ಲಿಸಲು ಆದೇಶ ನೀಡಿ ಎಂದು ಅಧ್ಯಕ್ಷರಿಗೆ ಸದಸ್ಯ ಮೋಹನ್ದಾಸ್ ಶೆಣೈ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಗಿರೀಶ್ ಜಿ.ಕೆ, ಶೇಖರ ಪೂಜಾರಿ, ದೇವಕಿ ಸಣ್ಣಯ್ಯ ಸಭೆಗೆ ಅರೆಬರೆ ಮಾಹಿತಿ ನೀಡಿದರೆ ಆಗೋದಿಲ್ಲ. ಮೇಲಾಧಿಕಾರಿಗಳ ಗೈರಿನಲ್ಲಿ ಜಲಸಿರಿ ಯೋಜನೆ ಚರ್ಚೆಯೇ ಅಪ್ರಸ್ತುತ. ಅಧಿಕಾರಿಗಳು ಬಂದ ನಂತರ ಚರ್ಚೆ ಮಾಡುವಂತೆ ಒತ್ತಾಯಿಸಿದರು. ಬಳಿಕ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಅಧಿಕಾರಿಗಳು ಬಂದ ಮೇಲೆ ಮತ್ತೊಮ್ಮೆ ಸಭೆ ನಡೆಸುವ ಘೋಷಣೆ ಮಾಡಿದ ನಂತರ ಜಲಸಿರಿ ಯೋಜನೆ ಚರ್ಚೆ ಕೈಬಿಡಲಾಯಿತು. ಸದಸ್ಯ ಚಂದ್ರಶೇಖರ್ ಖಾರ್ವಿ ಮುಂದಿನ ಸಭೆ ನಡೆಯುವ ತನಕ ಕಾಮಗಾರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು.
ಪುರಸಭೆ ಒಳಚರಂಡಿ ಯೋಜನೆ ಆರಂಭದಲ್ಲಿ 48.14 ಕೋಟಿ ರೂ.ಇದ್ದು, ಪ್ರಸಕ್ತ ಯೋಜನೆ ಅನುದಾನ 55.6 ಕೋಟಿ ಆಗಿದ್ದು, 24 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ವೆಟ್ವೆಲ್, ಎಸ್ಟಿಪಿ ಕೆಲಸ ಬಾಕಿಯಿದ್ದು, ಪುರಸಭೆ ಜಾಗ ಒದಗಿಸಿದರೆ ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ಯುಜಿಡಿ ಅಭಿಯಂತರ ರಕ್ಷಿತ್ ಹೇಳಿದರು.ಈಗಾಗಲೇ ಪುರಸಭೆ ಮೂರು ವೆಟ್ವೆಲ್ಲಿಗೆ ಜಾಗ ಕ್ಲಿಯರ್ ಮಾಡಿದ್ದು, ಇನ್ನೆರಡು ವೆಟ್ವೆಲ್ಗೆ ಜಾಗದ ಸಮಸ್ಯೆ ಪರಿಹರಿಸಿ ನೀಡಲಾಗುತ್ತದೆ. ಒಂದು ವಾರದಲ್ಲಿ ಭೂಮಿ ಕ್ಲಿಯರ್ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾದಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದರು. ಒಟ್ಟಾರೆ ಕುಂದಾಪುರ ಪುರಸಭೆಯ ಎರಡು ಬೃಹತ್ ಗಾತ್ರದ ಯೋಜನೆಗೆ ಗ್ರಹಣ ಬಡಿದಿದೆ.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.