
ಬಂಟ್ವಾಳ: ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಲಾಲ ಯಾನೆ ಕುಂಬಾರ ಸಮುದಾಯದ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕರಾವಳಿ ಕುಲಾಲ, ಕುಂಬಾರ ವೇದಿಕೆಗಳ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ತಹಶೀಲ್ದಾರ್ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುಲಾಲ, ಕುಂಬಾರರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಹಲವು ಬಾರಿ ಒತ್ತಾಯಿಸಲಾಗಿತ್ತಾದರೂ ಈವರೆಗೆ ನಿಗಮ ಸ್ಥಾಪನೆಯಾಗಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರರಿಗೆ ನಿಗಮವನ್ನು ಸ್ಥಾಪಿಸಿ ಗರಿಷ್ಠ ಅನುದಾನ ನೀಡಿ ಕುಲಾಲ ಸಮುದಾಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಕುಲಾಲ ಹಿರಿಯ ನಾಗರೀಕರ ಶ್ರೇಯೋಭಿವೃದ್ದಿ ಸಂಘದ ಅಧ್ಯಕ್ಷ ಸುಂದರ್ ಬಿ., ಕಾರ್ಯದರ್ಶಿ ಟಿ. ಸೇಸಪ್ಪ ಮೂಲ್ಯ, ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಸತೀಶ್ ಜಕ್ರಿಬೆಟ್ಟು, ಕಾರ್ಯದರ್ಶಿ ಪುನೀತ್ ಮೊದಲಾದವರು ಉಪಸ್ಥಿತರಿದ್ದರು.