Header Ads
Breaking News

ಕುಕ್ಕೆ ಕ್ಷೇತ್ರದಲ್ಲಿ ಲಕ್ಷದಿಪೋತ್ಸವ: ಲಕ್ಷ ದೀಪ ಪ್ರಜ್ವಲನ

ಇಂದು:ಕುಕ್ಕೆ ಕ್ಷೇತ್ರದಲ್ಲಿ ಲಕ್ಷದಿಪೋತ್ಸವ: ಲಕ್ಷ ದೀಪ ಪ್ರಜ್ವಲನ ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಸೋಮವಾರ(ಇಂದು) ಶ್ರೀ ದೇವರ ಲಕ್ಷದೀಪೋತ್ಸವ ನೆರವೇರಲಿದೆ. ಲಕ್ಷದೀಪೋತ್ಸವದೊಂದಿಗೆ ರಥಬೀದಿಯಲ್ಲಿ ಶ್ರೀ ದೇವರ ರಥೋತ್ಸವ ಆರಂಭವಾಗಲಿದೆ. ರಾತ್ರಿ ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲೋತ್ಸವ ನೆರವೇರಲಿದೆ. ಬೆಳಗ್ಗೆ ದೈವಗಳ ಭಂಡಾರವು ದೇವರಗದ್ದೆಯ ದೈವಸ್ಥಾನದಿಂದ ಶ್ರೀ ದೇವಳಕ್ಕೆ ಆಗಮಿಸಲಿದೆ.ಸಂಜೆ ಶ್ರೀ ದೇವಳದಲ್ಲಿ ಅಂಕುರಪೂಜೆ ನಡೆದ ಬಳಿಕ ಆದಿ ಸುಬ್ರಹ್ಮಣ್ಯದಲ್ಲಿ ರಂಗಪೂಜೆ ನೆರವೇರಲಿದೆ. ರಥೋತ್ಸವದ ಸಂದರ್ಭ ಲಕ್ಷ ಹಣತೆ ಪ್ರಜ್ವಲಿಸಲಾಗುತ್ತದೆ.ಅಲ್ಲದೆ ಕಾಶಿಕಟ್ಟೆ ವಿನಾಯಕ ಸನ್ನಿಧಾನದಲ್ಲಿ ಶ್ರೀ ದೇವರ ಗುರ್ಜಿಪೂಜೆ ನೆರವೇರಲಿದೆ.ನಂತರ ಸವಾರಿ ಮಂಟಪದಲ್ಲಿ ಪೂಜೆ ನಡೆಯಲಿದೆ.

10 ಗಂಟೆಯಿಂದ ಹಣತೆ ವಿತರಣೆ:
ಸಾರ್ವಜನಿಕ ಭಕ್ತರ ಸಹಕಾರದಿಂದ ಲಕ್ಷ ದೀಪಗಳನ್ನು ಹಚ್ಚಲು ದೇವಳದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಣ್ಣಿನ ಹಣತೆಯ ದೀಪಗಳು ರಥಬೀದಿಯಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ತನಕ, ದೇವಳದ ಆಡಳಿತ ಕಚೇರಿ, ಬೋಜನ ಶಾಲೆ, ಧರ್ಮಸಮ್ಮೇಳನ ಮಂಟಪ, ಸವಾರಿ ಮಂಟಪ, ಅಭಯ ಆಂಜನೇಯ ದೇವಸ್ಥಾನ ಮತ್ತು ಸಮೀಪದ ಪಾರ್ಕಿಂಗ್ ಸ್ಥಳ, ಪೋಲೀಸ್ ಠಾಣೆ, ಗ್ರಾ.ಪಂ. ಕಚೇರಿ, ಕುಮಾರಧಾರ ಸ್ನಾನಘಟ್ಟ, ಕುಮಾರಧಾರ ಸೇತುವೆ, ಬಿಲದ್ವಾರ, ಆದಿಸುಬ್ರಹ್ಮಣ್ಯದಲ್ಲಿ ಹಣತೆಗಳು ಪ್ರಜ್ವಲಿಸಲಿದೆ. ಏಕ ಕಾಲದಲ್ಲಿ ಹಣತೆಯನ್ನು ಉರಿಸಲು ಸ್ಥಳಿಯ ಭಕ್ತ ವೃಂದ ಸಿದ್ಧವಾಗಿದೆ. ಇದರ ವ್ಯವಸ್ಥೆ ನೋಡಿಕೊಳ್ಳುವ ಸಮಿತಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಸೋಮವಾರ 10 ಗಂಟೆಯ ನಂತರ ರಥಬೀದಿಯಲ್ಲಿ ನಿರ್ಮಿಸಿದ ತಾತ್ಕಾಲಿಕ ಟೆಂಟ್ ಕಟ್ಟಡದಲ್ಲಿ ದೇವಳದಿಂದ ಒದಗಿಸುವ ಹಣತೆ, ಬತ್ತಿ ಮತ್ತು ಎಣ್ಣೆಯನ್ನು ವಿತರಿಸಲಾಗುತ್ತದೆ.ಚಂದ್ರಮಂಡಲೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸುತ್ತಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿಮಡೆಸ್ನಾನ ಸೇವೆಯನ್ನು ಸ್ವಯಂಸ್ಪೂರ್ತಿಯಿಂದ ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ.

ವರದಿ : ರವೀಶ್ ರೈ ಸುಬ್ರಹ್ಮಣ್ಯ

Related posts

Leave a Reply

Your email address will not be published. Required fields are marked *