Header Ads
Header Ads
Breaking News

ಗಬ್ಬೆದ್ದು ನಾರುತ್ತಿರುವ ಸುಳ್ಯ ನಗರಾಡಳಿತ : ಕಸ ವಿಲೇವಾರಿಗೆ ಜಾಗ ಹುಡುಕದ ಅಧಿಕಾರಿಗಳು

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾದ ಹಸಿಕಸ ಮತ್ತು ಒಣ ಕಸವನ್ನು ವಿಲೇವಾರಿ ಮಾಡಲು ಪ್ರತ್ಯೇಕ ಜಾಗ ಇಲ್ಲದೆ ಸುಮಾರು ಒಂದೂವರೆ ವರ್ಷದಿಂದ ನಗರ ಪಂಚಾ ಯತ್ ಆವರಣದಲ್ಲೇ ಹಾಕಿ ಕಸ ವಿಂಗಡಣೆ ಕಾಮಗಾರಿ ನಡೆಸುತ್ತಿರುವುದರಿಂದ ಮತ್ತು ವಿಂಗಡಿತ ಕಸವನ್ನು ಬೇರೆಲ್ಲಿಗೂ ಕೊಂಡೊಯ್ಯಲಾರದೆ ಅಲ್ಲೇ ಇರಿಸಬೇಕಾಗಿ ಬಂದಿರುವುದರಿಂದ ನ.ಪಂ. ಕಚೇರಿ ಆವರಣ ಡಂಪಿಂಗ್ ಯಾರ್ಡ್ ಆಗಿರುವ ಪರಿವರ್ತನೆಯಾಗಿದ್ದು ಗಬ್ಬೆದ್ದು ನಾರುತ್ತಿದೆ.
 ಹೌದು.. ಸುಳ್ಯ ನಗರ ಪಂಚಾಯತ್ 20 ವಾರ್ಡ್‌ಗಳಿಂದ ಕೂಡಿ ವೇಗವಾಗಿ ಅಭಿವೃದ್ದಿ ಆಗುತ್ತಿರುವ ನಗರ. ಆದರೆ ಅಭಿವೃದ್ದಿ ಆಗುವುದಕ್ಕಿಂತ ಹೆಚ್ಚಿನ ಸಮಸ್ಯೆಗಳ ಪಟ್ಟಿ ಸುಳ್ಯ ನಗರದಲ್ಲಿದೆ. ಆದರೆ ಇಲ್ಲಿಯವರೆಗೆ ನಗರದಲ್ಲಿ ಸುಸಜ್ಜಿತವಾದ ಘನತ್ಯಾಜ್ಯ ಘಟಕ ಇಲ್ಲ. ಸುಳ್ಯ ನಗರಾಡಳಿತಕ್ಕೆ ನಗರದಲ್ಲಿ ಬೀಳುವ ಕಸಗಳನ್ನು ಎಲ್ಲಿ ವಿವೇವಾರಿ ಮಾಡಬೇಕು ಎನ್ನುವುದು ದೊಡ್ಡ ಸಮಸ್ಯೆ ಆಗಿದೆ. ನಗರದ ಹೊರ ವಲಯದ ಕಲ್ಚರ್ಪೆಯಲ್ಲಿ ತ್ಯಾಜ್ಯಗಳನ್ನು ಹಾಕುವ ಸಲುವಾಗಿ ತ್ಯಾಜ್ಯ ಘಟಕಗಳನ್ನು ಮಾಡಿ ನಗರದ ಕಸವನ್ನು ತೆಗೆದುಕೊಂಡು ಹೋಗಿ ಸುರಿಯಲಾಯಿತು ಆದರೆ. ದಿನದಿಂದ ದಿನಕ್ಕೆ ಅಲ್ಲಿ ಸಮಸ್ಯೆ ಹೆಚ್ಚಗತೊಡಗಿತ್ತು. ನಗರದ ಕಸವನ್ನು ಸುರಿಯಲು ಜಾಗ ಸಾಕಾಗದಿದ್ದಾಗ ಮತ್ತು ಸರಿಯಾಗಿ ವಿವೇವಾರಿ ಆಗದೇ ಸಮಸ್ಯೆ ಉದ್ಭವವಾಯಿತು. ತ್ಯಾಜ್ಯ ಘಟಕಕ್ಕೆ ಸುರಿದ ಲಕ್ಷಾಂತರ ರೂಪಾಯಿ ತ್ಯಾಜ್ಯದೊಂದಿಗೆ ಮಣ್ಣು ಪಾಲಾಯಿತು.

ಕಲ್ಚರ್ಪೆಯಲ್ಲಿ ಕಸ ವಿವೇವಾರಿ ನಿಲ್ಲಿಸಿದ ನಂತರ ಒಣ ಕಸವನ್ನು ನಗರ ಪಂಚಾಯತ್‌ನ ಆವರಣದಲ್ಲೇ ಇರುವ ವಾಹನ ನಿಲುಗಡೆಯ ಶೆಡ್‌ನಲ್ಲೇ ಕಸ ಹಾಕಲು ಆರಂಭಿಸಲಾಯಿತು. ಆದರೆ ಇನ್ನು ಒಂದೆರಡು ತಿಂಗಳು ಕಳೆದರೆ ಕಚೇರಿಯೊಳಗೆ ಸಿಬ್ಬಂದಿ ಕೆಲಸ ಮಾಡಲು ಅಸಾಧ್ಯವಾಗುತ್ತದೆ. ಅಕ್ಕಪಕ್ಕದ ನಿವಾಸಿಗಳು ಪ್ರತಿರೋಧದ ಧ್ವನಿ ಎತ್ತುತ್ತಾರೆ. ಕಸವಿಲೇವಾರಿಗೆ ಅತ್ಯಂತ ನಿಧಾನಗತಿಯ ಉಪಕ್ರಮ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಇಚ್ಛಾಶಕ್ತಿ ತೋರದೆ ತಮಗೂ ನಗರದ ಕಸಕ್ಕೂ ಸಂಬಂಧವೇ ಇಲ್ಲದಂತೆ ಇರುವ ಉನ್ನತ ಜನಪ್ರತಿನಿಧಿಗಳು ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾಗಿ ಬರುತ್ತದೆ.
ನಗರ ಪಂಚಾಯತ್‌ನ ಎದುರುಗಡೆ ವಾಹನ ನಿಲುಗಡೆಗಾಗಿ ನಿರ್ಮಿಸಲಾಗಿರುವ ದೊಡ್ಡ ಶೆಡ್‌ನಲ್ಲಿ ಹಸಿಕಸ-ಒಣಕಸ ವಿಂಗಡಿಸಲು ಆರಂಭಿಸಿ ಒಂದು ವರ್ಷ ಕಳೆದಿದೆ ಅಲ್ಲಿ ವಿಂಗಡಿಸಲ್ಪಟ್ಟ ಹಸಿಕಸವನ್ನು ಹಳೆಗೇಟಿನ ಸಮೀಪದ ವಿನೋದ್‌ಗ ಲಸ್ರಾದೊರವರ ತೋಟಕ್ಕೆ ಕೊಂಡೊಯ್ದು ಕಳೆದ 11ತಿಂಗಳಿನಿಂದ ಹಾಕಲಾಗುತ್ತಿತ್ತು. ಇದೀಗ ಸ್ವಚ್ಛ ನಗರ ವಾಟ್ಸಾಪ್ ಗ್ರೂಪಿನಲ್ಲಿ ಮಹನೀಯರೊಬ್ಬರು ಮಾಡಿದ ಆರೋಪದಿಂದ ಅಸಮಾಧಾನಿತರಾದ ವಿನೋದ್‌ರವರು ಆ ಆರೋಪದ ಬಗ್ಗೆ ವಿಚಾರಣೆ ನಡೆಯಲಿಲ್ಲವೆಂದು ಬೇಸರಗೊಂಡು ಹಸಿಕಸವನ್ನು ತನ್ನ ತೋಟಕ್ಕೆ ತಂದು ಹಾಕುವುದು ಬೇಡವೆಂದು ಹೇಳಿದ್ದರಿಂದ, ಒಂದು ವಾರದಿಂದ ಹಸಿಕಸ ಅವರ ತೋಟಕ್ಕೆ ಹೋಗುತ್ತಿಲ್ಲ. ಅದು ಅ.12 ರಿಂದ ಕಲ್ಚರ್ಪೆ ಕಸ ಹಾಕುವ ಸ್ಥಳಕ್ಕೆ ಮತ್ತೆ ಹೋಗ ತೊಡಗಿರುವುದರಿಂದ ಅಲ್ಲಿನವರು ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
ಕಲ್ಚರ್ಪೆಯ ಸ್ಥಳಕ್ಕೆ ಕಸ ಕೊಂಡೊಯ್ಯಲು ಆಗದೆ ಸ್ಥಗಿತಗೊಳಿಸಿ ಒಂದು ವರ್ಷವಾದರೂ ಪರ್ಯಾಯ ಸ್ಥಳದ ಹುಡುಕಾಟ ಇನ್ನು ಆಗದಿರುವುದು ಆಶ್ಚರ್ಯದ ವಿಚಾರ. ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಾಗವೂ ಆಗಿಲ್ಲ – ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರ ಕೂಡಾ ಬಂದಿಲ್ಲ. ಪ್ರಸ್ತಾವ ಮಾತ್ರ ಹಲವು ವರ್ಷಗಳಿಂದ ನ.ಪಂ. ಮುಂದಿದೆ. ತಹಶೀಲ್ದಾರರೇ ಆಡಳಿತಾಧಿಕಾರಿಯಾಗಿರುವ ಈಗಲಾದರೂ ಕಸಕ್ಕೆ ಸ್ಥಳ ಕಾದಿರಿಸುವ ಪ್ರಕ್ರಿಯೆ ನಡೆಯುವುದೇ ಎಂದು ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಬಗ್ಗೆ ನಗರ ಪಂಚಾಯತ್ ಆರೋಗ್ಯ ಅಧಿಕಾರಿ ರವಿಕೃಷ್ಣ ಪ್ರತಿಕ್ರಿಯೆ ನೀಡಿ ಸುಳ್ಯ ನಗರದ ವಾರ್ಡ್‌ಗಳಿಂದ ಸಂಗ್ರಹಿಸಿದ ಕಸಗಳನ್ನು ಎಲ್ಲಿಯೂ ಹಾಕಲು ಸ್ಥಳದ ಕೊರತೆಯಿಂದ ಕಚೇರಿಯ ಎದುರಿನಲ್ಲಿ ಇರುವ ವಾಹನ ಶೆಡ್‌ನ ಒಳಗೆ ಒಣ ಕಸ ಮತ್ತು ಹಸಿ ಕಸಗಳನ್ನು ವಿಂಗಡನೆ ಮಾಡಿ ಹಾಕಲಾಗುತ್ತಿದೆ. ಈ ಬಗ್ಗೆ ಆಡಳಿತಾಧಿಕಾರಿ ತಹಶೀಲ್ದಾರ್ ಅವರಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗ ಗುರುತು ಮಾಡಲು ಮನವಿ ಮಾಡಿದ್ದೇವೆ. ತಹಶೀಲ್ದಾರ್ ಕೂಡ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ಹೇಳಿದರು.ಇನ್ನಾದ್ರೂ ಸಂಬಂಧಪಟ್ಟವರು ಈ ಸಮಸ್ಯೆಗೆ ಮುಕ್ತಿ ನೀಡ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.

Related posts

Leave a Reply

Your email address will not be published. Required fields are marked *