Header Ads
Breaking News

ಗಾಜಿಪುರ್‌ ಘಟನೆ: ಮುಜಫ್ಪರ್‌ನಗರದ ಕಿಸಾನ್‌ ಮಹಾ ಪಂಚಾಯತ್‌ನಲ್ಲಿ ಎದ್ದ ರೈತರ ಹೋರಾಟದ ಹೊಸ ಅಲೆ

ನವದೆಹಲಿ, ಜ. 29: ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ ಪರೇಡ್‌ ವೇಳೆ ನಡೆದ ಅಹಿತಕರ ಬೆಳವಣಿಗೆಗಳು ದೇಶದ ರೈತರನ್ನು ಭಾವನಾತ್ಮಕವಾಗಿ ಬಡಿದ್ದೆಬಿಸಿವೆ. ರೈತ ಹೋರಾಟ ಹೊಸ ತಿರುವು ಪಡೆಯುತ್ತಿದ್ದು ಶುಕ್ರವಾರ ಉತ್ತರ ಪ್ರದೇಶದ ಮುಜಫ್ಪರ್‌ ನಗರದಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ನೆರೆದು ಒಕ್ಕೊರಲಿನಿಂದ ರೈತ ಹೋರಾಟಕ್ಕೆ ದನಿಗೂಡಿಸಿದ್ದಾರೆ.

ಗುರುವಾರ ರಾತ್ರಿ ಸಿಂಘುಗಡಿಯಲ್ಲಿ ರೈತರನ್ನು ಒಕ್ಕೊಲೆಬ್ಬಿಸುವ ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ರೈತ ಮುಖಂಡ, ಭಾರತೀಯ ಕಿಸಾನ್‌ ಯೂನಿಯನ್‌ನ ರಾಕೇಶ್‌ ಸಿಂಗ್‌ ಟಿಕಾಯತ್‌ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಭಾವುಕರಾಗಿ ಮಾತನಾಡಿದ್ದ ರಾಕೇಶ್‌ ಸಿಂಗ್‌ ಅವರ ನೋವು ಜಾಟ್‌ ನೆಲದ ರೈತರ ಮನಸ್ಸನ್ನು ತಟ್ಟಿತ್ತು. ಈ ಹಿನ್ನೆಲೆಯಲ್ಲಿ ತೀವ್ರವಾಗಿ ಸ್ಪಂದಿಸಿದ ಉತ್ತರ ಪ್ರದೇಶದ ರೈತರು ಗಾಜಿಪುರದ ರೈತ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಇಂಟರ್‌ ಕಾಲೇಜ್‌ ಮೈದಾನದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಟ್ರ್ಯಾಕ್ಟರ್‌ನಲ್ಲಿ ತಲುಪಿದ ರೈತರ ಸಂಖ್ಯೆ ಮಧ್ಯಾಹ್ನದ ಹೊತ್ತಿಗೆ ಹೆಚ್ಚಿತು. ರಾಷ್ಟ್ರೀಯ ಲೋಕ್‌ ದಳದ ನಾಯಕ ಜಯಂತ್‌ ಚೌಧರಿ ಕೂಡ ಸಭೆಗೆ ಅಗಮಿಸಿದ್ದು, ಪಂಚಾಯತ್‌ ಸಮಾವೇಶದ ಹುರುಪು ಹೆಚ್ಚಿಸಿತು. 100ಕ್ಕೂ ಹೆಚ್ಚು ರೈತ ನಾಯಕರು ಪಂಚಾಯತ್‌ ಸಭೆಯಲ್ಲಿ ಪಾಲ್ಗೊಂಡರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ನಾಯಕರು 2022ರ ಮತ್ತು 2024 ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದರು. ಭಾರತ್‌ ಕಿಸಾನ್‌ ಯೂನಿಯನ್‌ನ ನಾಯಕ ಚಂದರ್‌ಬೀರ್‌ ಫೌಜಿ, ರಾಕೇಶ್ ಟೀಕಾಯತ್‌ ಸಿಂಗ್‌ ಅವರು ಹಾಕಿದ ಒಂದೊಂದು ಹನಿ ಕಣ್ಣೀರಿಗೆ ಸರ್ಕಾರದಿಂದ ಲೆಕ್ಕ ಪಡೆಯುತ್ತೇವೆ ಎಂದು ಭಾವುಕವಾಗಿ ನುಡಿದರು.

ರೈತನಾಯಕರು ಗಾಜೀಪುರದ ಒಬ್ಬೇ ಒಬ್ಬ ರೈತನ ಮೇಲೆ ಸಣ್ಣ ಗಾಯವೊಂದಾದರು ನಾವು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.ಭಾರತೀಯ ಕಿಸಾನ್‌ ಯೂನಿಯನ್‌ ಜೊತೆಗೆ ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ, ಕಾಂಗ್ರೆಸ್‌ ಪಕ್ಷಗಳು ಬೆಂಬಲ ಸೂಚಿಸಿದವು.

ಟ್ರ್ಯಾಕ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪಶ್ಚಿಮ ಮುಜಫ್ಫರ್‌ನಗರದಲ್ಲಿ ಸಂಪೂರ್ಣ ಅಸ್ತವ್ಯಸ್ಥವಾಯಿತು. ಅಂಗಡಿಮುಗ್ಗಟ್ಟುಗಳು ಸೇರಿದಂತೆ ಮೂರು ಪೊಲೀಸ್‌ ಸ್ಟೇಷನ್‌ಗಳಿಗೆ ಬೀಗ ಹಾಕಲಾಯಿತು.

Related posts

Leave a Reply

Your email address will not be published. Required fields are marked *