Header Ads
Header Ads
Breaking News

3 ವರ್ಷದಲ್ಲಿ 80ಕ್ಕೂ ಮಿಕ್ಕಿ ಅಪಘಾತಗಳು : ಕುಂದಾಪುರ-ಕಾರವಾರ ಚತುಷ್ಪತ ಕಾಮಗಾರಿ ತಂದಿಟ್ಟ ಅದ್ವಾನ

ಅಲ್ಲಲ್ಲಿ ಹೊಂಡಗುಂಡಿಗಳು, ಇನ್ನು ಕೆಲವೆಡೆ ಮಲಗಿದ ಸ್ಥಿತಿಯಲ್ಲಿರುವ ಬ್ಯಾರಿಕೇಡ್‌ಗಳು. ಮಳೆಗಾದಲ್ಲಿ ಕೆಸರು ನೀರಿನ ಸಿಂಚನವಾದರೆ, ಬೇಸಿಗೆಯಲ್ಲಿ ಧೂಳು. ದಿನನಿತ್ಯ ಕೆಲಸಕ್ಕೆ ತೆರಳುವವರು ಮರಳಿ ಮನೆಗೆ ಬರುತ್ತಾರೆ ಎಂಬ ಯಾವ ಧೈರ್ಯವೂ ಇಲ್ಲ. ಕುಂದಾಪುರ-ಕಾರವಾರ ಚತುಷ್ಪತ ಕಾಮಗಾರಿ ತಂದಿಟ್ಟ ಅದ್ವಾನ ಒಂದೇ-ಎರಡೇ..

ತಮ್ಮ ಊರಲ್ಲೊಂದು ಚತುಷ್ಪತ ಹೆದ್ದಾರಿ ಹಾದುಹೋಗುತ್ತದಲ್ಲ ಎಂದು ಯಾವುದು ತಕರಾರಿಲ್ಲದೆ ಖುಷಿಯಿಂದಲೇ ತಮ್ಮ ಜಾಗಗಳನ್ನು ಬಿಟ್ಟುಕೊಟ್ಟ ಕರಾವಳಿಯ ಜನರು ಇದೀಗ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಙಾನಿಕ ಕಾಮಗಾರಿಯಿಂದಾಗಿ ಅಪಘಾತಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕಂಪೆನಿಗೆ ಎಚ್ಚರಿಕೆ ನೀಡಬೇಕಾದ ಸರ್ಕಾರ ಸತ್ತು ಹೋಗಿದೆಯಾ ಎಂಬ ಪ್ರಶ್ನೆ ಹಲವರಲ್ಲಿದೆ.

ಹಳ್ಳಿಮಿತಿಗಳಲ್ಲಿ ಸರ್ವಿಸ್ ರಸ್ತೆಗಳ ನಿರ್ಮಾಣವಾಗಿಲ್ಲ. ಲಿಂಕ್ ರೋಡ್ ಮೊದಲೇ ಇಲ್ಲ. ದಾರಿ ದೀಪ, ಬಸ್ ನಿಲ್ದಾಣ, ಕಾಮಗಾರಿಯೂ ಸರಿಯಾಗಿ ನಡೆಸದೆ ಟೋಲ್ ಸಂಗ್ರಹಕ್ಕೆ ಸಜ್ಜಾಗಿರುವ ಐಆರ್‌ಬಿ ಗುತ್ತಿಗೆ ಕಂಪೆನಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಂದಾಫುರದಿಂದ ಶಿರೂರು ತನಕದ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸರಿಯಾದ ಸೂಚನಫಲಕಗಳಿಲ್ಲದೇ ಅಲ್ಲಲ್ಲಿ ವಾಹನ ಸವಾರರು ಎಡವಿ ಬೀಳುತ್ತಿದ್ದಾರೆ. ಸರಿಯಾದ ಸರ್ವೀಸ್ ರಸ್ತೆಗಳಿಲ್ಲದೇ ದ್ವಿಚಕ್ರ ಮತ್ತು ಲಘು ವಾಹನ ಸವಾರರು ರಸ್ತೆಯ ವಿರುದ್ಧ ದಿಕ್ಕಿನಲ್ಲಿ, ಡಿವೈಡರ್ ನಡುವಿನ ಸಂಧಿಯಲ್ಲಿ ವಾಹನ ಚಲಾಯಿಸಿಕೊಂಡು ಬರುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ರಾತ್ರಿ ವೇಳೆ ಈ ರೀತಿಯ ಸಂಚಾರ ಬಹಳ ಅಪಾಯಕಾರಿಯಾಗಿದ್ದು, ಅಪಘಾತಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ ಹಲವು ಪ್ರದೇಶಗಳಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗಲು ಸೂಕ್ತ ವ್ಯವಸ್ಥೆಗಳಿಲ್ಲ. ಹೀಗಾಗಿ ಪಾದಚಾರಿಗಳು ರಸ್ತೆಯ ಮೇಲೆ ನಡೆದುಕೊಂಡು ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇನ್ನೊಂದೆಡೆ ಪ್ರಸಿದ್ಧ ತ್ರಾಸಿ ಕಡಲ ತೀರದಿಂದ ತ್ರಾಸಿ ಬಪಾಸ್ ಕಡೆ ಬರಬೇಕಾದರೆ ಸುಮಾರು ೫ರಿಂದ ೬ ಕಿ.ಮೀ. ದೂರದ ಮರವಂತೆಯಲ್ಲಿರುವ ರಸ್ತೆ ವಿಭಾಜಕಗಳನ್ನು ದಾಟಿ ಬರಬೇಕು. ತ್ರಾಸಿ ಬೀಚ್ ಸಮೀಪ ಇದ್ದ ಯು ತಿರುವನ್ನು ಮುಚ್ಚಲಾಗಿದ್ದು ಕುಂದಾಪುರ ಕಡೆಗೆ ಸಾಗುವ ವಾಹನ ಸವಾರರು ಮರವಂತೆ ತನಕ ಸಾಗಿ ಸುತ್ತು ಹೊಡೆದು ತ್ರಾಸಿ ಬಪಾಸ್ ಮೂಲಕ ಕುಂದಾಪುರಕ್ಕೆ ತೆರಳಬೇಕಿದೆ. ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಂದ ರಾಜ್ಯದ ಪ್ರಸಿದ್ಧ ಪ್ರವಾಸೋದ್ಯಮ ತಾಣವಾಗಿರುವ ತ್ರಾಸಿ-ಮರವಂತೆ ಬೀಚ್ ಪ್ರವಾಸಿಗರಿಗೆ ದೂರದ ಬೆಟ್ಟವಾಗುವ ಸಾಧ್ಯತೆಗಳಿದೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸ್ಥಳೀಯ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ಮನ ಬಂದಂತೆ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪಾದಚರಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಪ್ರಮುಖ ಪ್ರವಾಸೋದ್ಯಮ ತಾಣವಿದ್ದರೂ ಈ ಭಾಗದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ರಸ್ತೆಗಳ ನಿರ್ಮಾಣವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವುದರ ಮೊದಲು ತ್ರಾಸಿ-ಮರವಂತೆ ಬೀಚ್ ಸಮೀಪ ಹೆದ್ದಾರಿಯಲ್ಲಿ ‘ಯು’ ತಿರುವು, ಸರ್ವಿಸ್ ರಸ್ತೆ ಹಾಗೂ ಪಾದಚರಿಗಳು ಸಂಚರಿಸಲು ಫುಟ್‌ಪಾತ್ ನಿರ್ಮಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜನಪ್ರತಿನಿಧಿಗಳಲ್ಲಿ ಹಾಗೂ ಗುತ್ತಿಗೆದಾರರಲ್ಲಿ ಮನವಿ ಮಾಡಿಕೊಂಡಿರುವ ಸ್ಥಳೀಯರು, ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಹೋರಾಟದ ಹಾದಿ ತುಳಿಯಲು ನಿರ್ಧರಿಸಿದ್ದಾರೆ.
80 ಅಪಘಾತ: 19 ಸಾವು : ಹೆಮ್ಮಾಡಿಯಿಂದ ಮುಳ್ಳಿಕಟ್ಟೆ, ತ್ರಾಸಿ, ಮರವಂತೆಯವರೆಗಿನ 10 ಕಿ.ಮೀ ವ್ಯಾಪ್ತಿಯೊಳಗೆ ರಾ.ಹೆದ್ದಾರಿ 66 ರಲ್ಲಿ ಕಳೆದ 3 ವರ್ಷಗಳಲ್ಲಿ 90 ಕ್ಕೂ ಮಿಕ್ಕಿ ಅಪಘಾತಗಳು ಸಂಭವಿಸಿವೆ. 2017 ರಲ್ಲಿ 34, 2018 ರಲ್ಲಿ 26, 2019 ರಲ್ಲಿ 23 ಅಪಘಾತಗಳು ನಡೆದಿವೆ. ಇದರಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.

Related posts

Leave a Reply

Your email address will not be published. Required fields are marked *